ADVERTISEMENT

ರಾಜ್ಯಕ್ಕೆ 1141 ಅಂಗನವಾಡಿ ಕೇಂದ್ರ ಮಂಜೂರು

ಎ.ಎಂ.ಸುರೇಶ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೊಸದಾಗಿ 1,141 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿದ್ದು, ಏಪ್ರಿಲ್ 16ರ ನಂತರ ಹೊಸ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.

ಹೊಸದಾಗಿ 1,156 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಕೇಂದ್ರವು 1,141 ಕೇಂದ್ರಗಳನ್ನು ಮಂಜೂರು ಮಾಡಿ ಕಳೆದ ತಿಂಗಳ 21ರಂದು ಆದೇಶ ಹೊರಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಮೇಶ್ ಝಳಕಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಹೊಸ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕು ಎಂದು ಗುರುತಿಸುವಂತೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಿಗೆ (ಸಿಡಿಪಿಒ) ಸೂಚಿಸಲಾಗಿದೆ. ಈ ತಿಂಗಳ ಅಂತ್ಯದ ಒಳಗೆ ಸಿಡಿಪಿಒಗಳಿಂದ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ವರದಿ ನೀಡಲಿದ್ದಾರೆ.

ಇದಾದ ನಂತರ ಸರ್ಕಾರದ ಕಡೆಯಿಂದ ಆಡಳಿತಾತ್ಮಕ ಮಂಜೂರಾತಿ ಪಡೆದು ಏಪ್ರಿಲ್‌ನಲ್ಲಿ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಆಡಳಿತಾತ್ಮಕ ಒಪ್ಪಿಗೆ ಸಿಗುವುದು ತಡವಾದರೆ ಜೂನ್ ವೇಳೆಗೆ ಹೊಸ ಕೇಂದ್ರಗಳು ಪ್ರಾರಂಭವಾಗಲಿವೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿ/ಪಂಗಡದವರು, ನಗರ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳು, ವಲಸೆ ಕಾರ್ಮಿಕರು ಇರುವ ಕಡೆ ಹೊಸ ಕೇಂದ್ರಗಳನ್ನು ತೆರೆಯಲು ಆದ್ಯತೆ ನೀಡಲಾಗುವುದು. ಹಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರದ ಅಕ್ಕಪಕ್ಕದ ಗ್ರಾಮಗಳಲ್ಲಿ ಹೊಸ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಸಿಡಿಪಿಒಗಳಿಗೆ ಮಾಹಿತಿ ನೀಡಲಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 400ರಿಂದ 800 ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರ ತೆರೆಯಲಾಗುತ್ತದೆ. ಬುಡಕಟ್ಟು ಪ್ರದೇಶದಲ್ಲಿ 300 ಜನಸಂಖ್ಯೆ ಇದ್ದರೂ ಅಂಗನವಾಡಿ ಕೇಂದ್ರ ಆರಂಭಿಸಲು ಅವಕಾಶವಿದೆ. 150ರಿಂದ 300 ಜನಸಂಖ್ಯೆ ಇದ್ದರೆ ಮಿನಿ ಅಂಗನವಾಡಿ ಕೇಂದ್ರ ತೆರೆಯಲಾಗುತ್ತದೆ.

ಬೇಡಿಕೆ: ಅಂಗನವಾಡಿ ಕೇಂದ್ರಗಳನ್ನು ತೆರೆಯುವಂತೆ ಜನರಿಂದ ಬೇಡಿಕೆ ಬಂದರೆ ಕೇಂದ್ರದ ಒಪ್ಪಿಗೆ ಪಡೆದು ಪ್ರಾರಂಭಿಸಲಾಗುತ್ತದೆ. ಈಗ ಮಂಜೂರಾಗಿರುವ 1,141 ಕೇಂದ್ರಗಳ ಪೈಕಿ 232 ಅಂಗನವಾಡಿ ಕೇಂದ್ರಗಳಿಗೆ ಜನರಿಂದ ಬಂದ ಬೇಡಿಕೆಯನ್ನು ಆಧರಿಸಿ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.

ಹೊಸದಾಗಿ ಮಂಜೂರಾಗಿರುವ ಕೇಂದ್ರಗಳನ್ನು ಹೊರತುಪಡಿಸಿ ಸದ್ಯಕ್ಕೆ ರಾಜ್ಯದಲ್ಲಿ 63,377 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 35 ಸಾವಿರ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ ಕೇಂದ್ರಗಳು ಯುವಕ-ಯುವತಿಯರ ಮಂಡಳಿ, ಮಹಿಳಾ ಮಂಡಳಿ, ಸಮುದಾಯ ಭವನ, ಗ್ರಾಮ ಪಂಚಾಯಿತಿ ಕಟ್ಟಡ ಇತ್ಯಾದಿಗಳಲ್ಲಿ ನಡೆಯುತ್ತಿವೆ. ಈಗ ಮಂಜೂರಾಗಿರುವ ಕೇಂದ್ರಗಳಿಗೂ ಇದೇ ರೀತಿಯ ಜಾಗಗಳನ್ನು ಗುರುತಿಸಿ ಆರಂಭಿಸಲಾಗುತ್ತದೆ.

ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಿಕೊಡುವಂತೆ ಅಂಗನವಾಡಿ ಕೇಂದ್ರಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಸದ್ಯಕ್ಕೆ ಪ್ರತಿ ವರ್ಷ ಎರಡು-ಮೂರು ಸಾವಿರ ಕೇಂದ್ರಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಕಳೆದ ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ವಯಸ್ಸನ್ನು ನಿಗದಿ ಮಾಡಲಾಗಿದೆ. ಹೀಗಾಗಿ ನಿವೃತ್ತಿಯಿಂದ ತೆರವಾಗಿರುವ ಮತ್ತು ಹಿಂದಿನಿಂದ ಭರ್ತಿಯಾಗದೆ ಇದ್ದ ಸುಮಾರು ಎರಡು ಸಾವಿರ ಹುದ್ದೆಗಳು ಖಾಲಿ ಇದ್ದು, ಅವುಗಳ ಜೊತೆಗೆ ಹೊಸ ಕೇಂದ್ರಗಳಿಗೆ ಅಗತ್ಯವಿರುವ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ತಾಲ್ಲೂಕು ಮಟ್ಟದಲ್ಲೇ ಈ ನೇಮಕ ಪ್ರಕ್ರಿಯೆ ನಡೆಯಲಿದೆ.

2001ರಲ್ಲಿ ಆರು ವರ್ಷದೊಳಗಿನ ಮಕ್ಕಳ ಸಂಖ್ಯೆ 71.82 ಲಕ್ಷ ಇದ್ದರೆ, 2011ರಲ್ಲಿ 68.55 ಲಕ್ಷ ಇದೆ. ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಂಗನವಾಡಿಗಳಿಗೆ ಬೇಡಿಕೆ ಇಲ್ಲ. ಒಂದು ವೇಳೆ ಇನ್ನೂ ಹೆಚ್ಚಿನ ಕೇಂದ್ರಗಳಿಗೆ ಬೇಡಿಕೆ ಬಂದರೆ ಮಂಜೂರಾತಿಗೆ ಕೋರಿ ಏಪ್ರಿಲ್‌ನಲ್ಲಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಹೊಸ ಕೇಂದ್ರಗಳ ಆರಂಭಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 90ರಷ್ಟನ್ನು ಕೇಂದ್ರ ಮತ್ತು ಶೇ 10ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಮಕ್ಕಳಿಗೆ ನೀಡುವ ಆಹಾರಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮ ಪ್ರಮಾಣದಲ್ಲಿ ಭರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.