ADVERTISEMENT

ರಾಜ್ಯದಲ್ಲಿ ಮುಂದುವರಿದ ಮಳೆ

ದಕ್ಷಿಣ ಕನ್ನಡದಲ್ಲಿ ತಗ್ಗಿದ ಮಳೆ: ಶಾಲೆಗಳಿಗೆ ರಜೆ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 19:40 IST
Last Updated 10 ಜೂನ್ 2018, 19:40 IST

ಬೆಂಗಳೂರು: ರಾಜ್ಯದಲ್ಲಿ ವರ್ಷಧಾರೆ ಮುಂದುವರಿದಿದ್ದು, ಬಾವಿಗಳು, ಕೆರೆಗಳು ತುಂಬಲಾರಂಭಿಸಿವೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.

ಕೊಡಗು ಜಿಲ್ಲೆಯ ತಲಕಾವೇರಿ ಹಾಗೂ ಭಾಗಮಂಡಲ ಭಾಗದಲ್ಲಿ ಭಾನುವಾರವೂ ಉತ್ತಮ ಮಳೆ ಸುರಿಯಿತು. ಭಾಗಮಂಡಲ- ನಾಪೋಕ್ಲು ರಸ್ತೆಯ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಜಿಲ್ಲಾಧಿಕಾರಿ ಅವರ ಕಾವಲುಗಾರನ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಭಾಗಮಂಡಲದಲ್ಲಿ 180 ಮಿ.ಮೀ, ಶಾಂತಳ್ಳಿಯಲ್ಲಿ 222 ಮಿ.ಮೀ, ನಾಪೋಕ್ಲು ವ್ಯಾಪ್ತಿಯಲ್ಲಿ 135 ಮಿ.ಮೀ ಮಳೆಯಾಗಿದೆ.

ADVERTISEMENT

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, 2,799.44 ಅಡಿಗೆ ನೀರು ತಲುಪಿದೆ. ಒಳಹರಿವು 3,968 ಕ್ಯೂಸೆಕ್‌ಗೆ ಏರಿಕೆ ಆಗಿದೆ. ಜಲಾಶಯಕ್ಕೆ ಒಂದೇ ದಿನ ಅಂದಾಜು 7 ಅಡಿಯಷ್ಟು ನೀರು ಹರಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ರಭಸ ಭಾನುವಾರ ಕೊಂಚ ತಗ್ಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲಾ, ಕಾಲೇಜುಗಳು ಪುನರಾರಂಭಗೊಳ್ಳಲಿವೆ.

ಎಚ್ಚರಿಕೆ: ಸೋಮವಾರವೂ ಮಳೆ ಮುಂದುವರಿಯಲಿದ್ದು, ಕರಾವಳಿ ಸೇರಿದಂತೆ ರಾಜ್ಯದ ಕೆಲವು ಕಡೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಭಾನುವಾರ ಉತ್ತಮ ಮಳೆಯಾಗಿದೆ. ಸಮೀಪದ ಗಾಜನೂರು ತುಂಗಾ ಜಲಾಶಯ ತುಂಬಿದ್ದು, ಭಾನುವಾರ ಜಲಾಶಯದಿಂದ 10 ಕ್ರೆಸ್ಟ್‌ ಗೇಟ್‌ಗಳ ಮೂಲಕ 13 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಶಿವಮೊಗ್ಗ ನಗರ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲ್ಲೂಕು ಭಾಗಗಳಲ್ಲಿ ಮಳೆ ಮುಂದುವರೆದಿದೆ. ಭದ್ರಾ ಜಲಾಶಯಕ್ಕೆ 7,908 ಕ್ಯುಸೆಕ್‌, ಲಿಂಗನಮಕ್ಕಿ ಜಲಾಶಯಕ್ಕೆ 9,384 ಕ್ಯುಸೆಕ್‌ ನೀರು ಹರಿದುಬಂದಿದೆ.

ಕಲಬುರ್ಗಿ ಹಾಗೂ ಕೊಪ್ಪಳ ಜಿಲ್ಲೆಯ ಹಲವೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಕುಷ್ಟಗಿ ತಾಲ್ಲೂಕು ಹನುಮಸಾಗರದಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ಚೆಕ್ ಡ್ಯಾಂ ಒಡೆದು ನೀರು ಪೋಲಾಗಿದೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಅಲ್ಲೂರ (ಕೆ) ಗ್ರಾಮದ ವ್ಯಾಪ್ತಿಯ ಹೊಲಗಳಿಗೆ ನೀರು ನುಗ್ಗಿದೆ. ಕಾಳಗಿ, ಚಿಂಚೋಳಿ ತಾಲ್ಲೂಕಿನ ಕೆಲವೆಡೆ ಹದ ಮಳೆಯಾಗಿದ್ದು, ರೈತರು ಉತ್ಸಾಹದಿಂದ ಕೃಷಿ ಚಟುವಟಿಯಲ್ಲಿ ನಿರತರಾಗಿದ್ದಾರೆ.

ಹುಬ್ಬಳ್ಳಿ–ಧಾರವಾಡದಲ್ಲಿ ಭಾನುವಾರ ದಿನವಿಡೀ ಧಾರಾಕಾರ ಮಳೆಯಾಗಿದೆ. ಕಲಘಟಗಿ, ಅಳ್ನಾವರ, ನವಲಗುಂದ ತಾಲ್ಲೂಕುಗಳಲ್ಲಿಯೂ ಬಿರುಸಿನ ಮಳೆಯಾಗಿದೆ.

ಬೆಳಗಾವಿ ಸೇರಿದಂತೆ ಜಿಲ್ಲೆಯ ಚಿಕ್ಕೋಡಿ, ಹಿರೇಬಾಗೇವಾಡಿ, ಬೈಲಹೊಂಗಲ, ಗೋಕಾಕ, ಘಟಪ್ರಭಾ, ರಾಮದುರ್ಗ, ಸವದತ್ತಿ, ಖಾನಾಪುರ ಹಾಗೂ ನಿಪ್ಪಾಣಿಯಲ್ಲಿ ದಿನವಿಡೀ ಬಿರುಸಿನ ಮಳೆಯಾಗಿದೆ.

ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲಮೂಲವಾಗಿರುವ ರಕ್ಕಸಕೊಪ್ಪ ಜಲಾಶಯಕ್ಕೆ ನೀರು ಹರಿದುಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬಳ್ಳಾರಿ, ವಿಜಯಪುರ ಜಿಲ್ಲೆಯ ಹಲವೆಡೆ, ಗದಗ ಹಾಗೂ ಹಾವೇರಿ ಜಿಲ್ಲೆಯಾದ್ಯಂತ ಮಳೆಯಾಗಿದೆ.

ಶಾಲಾ– ಕಾಲೇಜಿಗೆ ರಜೆ

ಕೊಡಗು ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಸೋಮವಾರವೂ ಶಾಲಾ- ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಗೋಡೆ ಕುಸಿದು ಮಗು ಸಾವು

ಭರಮಸಾಗರ(ಚಿತ್ರದುರ್ಗ ಜಿಲ್ಲೆ): ಮಳೆಯಿಂದ ಗೋಡೆ ಕುಸಿದು ಸಮೀಪದ ಹೆಗ್ಗೆರೆಯ ಬಾಲಕ ಮೌರ್ಯ (4) ಭಾನುವಾರ ಮೃತಪಟ್ಟಿದ್ದಾನೆ.

ಗ್ರಾಮದ ಹಾಗೂ ರಂಗಪ್ಪ ಶಶಿಕಲಾ ದಂಪತಿ ಪುತ್ರನಾದ ಅವನು ಆಟವಾಡುತ್ತಿದ್ದ. ಆಗ ಮಳೆಯಿಂದ ಶಿಥಿಲಗೊಂಡ ಗೋಡೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಭರಮಸಾಗರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.