ADVERTISEMENT

ರಾಜ್ಯದಿಂದ ಸಿಆರ್‌ಪಿಎಫ್‌ ಕೇಂದ್ರ ಕಚೇರಿ ಸ್ಥಳಾಂತರ

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಪ್ರಭಾವಕ್ಕೆ ಮಣಿದು ರಾಜ್ಯ ಸರ್ಕಾರದ ಗಮನಕ್ಕೆ ತರದೆ ಆದೇಶ

ಹೊನಕೆರೆ ನಂಜುಂಡೇಗೌಡ
Published 10 ಅಕ್ಟೋಬರ್ 2017, 20:40 IST
Last Updated 10 ಅಕ್ಟೋಬರ್ 2017, 20:40 IST
ರಾಜ್ಯದಿಂದ ಸಿಆರ್‌ಪಿಎಫ್‌ ಕೇಂದ್ರ ಕಚೇರಿ ಸ್ಥಳಾಂತರ
ರಾಜ್ಯದಿಂದ ಸಿಆರ್‌ಪಿಎಫ್‌ ಕೇಂದ್ರ ಕಚೇರಿ ಸ್ಥಳಾಂತರ   

ಬೆಂಗಳೂರು: ಕನಕಪುರ ರಸ್ತೆ ಕಗ್ಗಲಿಪುರ ಸಮೀಪದ ತರಳು ಗ್ರಾಮದಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ ಕೇಂದ್ರ ಕಚೇರಿಯನ್ನು (ಸಿಆರ್‌‍ಪಿಎಫ್‌ ಗ್ರೂಪ್‌ ಸೆಂಟರ್‌) ಉತ್ತರ ಪ್ರದೇಶದ ಚಾಂದೌಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.

ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ತವರು ಜಿಲ್ಲೆಯಾದ ಚಾಂದೌಲಿಗೆ ಸಿಆರ್‌ಪಿಎಫ್‌ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಲು ಮೇ 25ರಂದು ಆದೇಶ ಹೊರಡಿಸಲಾಗಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕೇಂದ್ರ ಕಚೇರಿ ಸ್ಥಳಾಂತರಕ್ಕೆ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಆದರೆ, ‘ರಾಜಕೀಯ ಕಾರಣಗಳಿಗಾಗಿ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಆ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ’ ಎಂಬ ಕೂಗೆದ್ದಿದೆ.

ADVERTISEMENT

ಲಖನೌ, ಅಲಹಾಬಾದ್‌, ರಾಂಪುರ, ಅಮೇಥಿ ಹಾಗೂ ನೊಯ್ಡಾ ಸೇರಿದಂತೆ ಉತ್ತರ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ ಐದು ಕೇಂದ್ರ  ಕಚೇರಿಗಳಿವೆ. ರಾಜ್ಯದಿಂದ ಚಾಂದೌಲಿಗೆ ಸ್ಥಳಾಂತರ ಆಗುತ್ತಿರುವ ಈ ಕಚೇರಿ ಆರನೆಯದು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತರಳು ಹಾಗೂ ಯಲಹಂಕ ಒಳಗೊಂಡಂತೆ ರಾಜ್ಯದಲ್ಲಿ ಸಿಆರ್‌ಪಿಎಫ್‌ನ ಕೇವಲ ಎರಡು ಕೇಂದ್ರ ಕಚೇರಿಗಳಿದ್ದು, 1400 ಅಧಿಕಾರಿ ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಶೇ 50ರಷ್ಟು ಕನ್ನಡಿಗರು. ಇವೆರಡೂ ಕಚೇರಿಗಳ ಅಧೀನದಲ್ಲಿ ಸಶಸ್ತ್ರ ಪಡೆಯ ಸುಮಾರು 12000 ಪೊಲೀಸರಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಇಡೀ ಸೇವಾವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಈ ಕಚೇರಿಗಳಿಗೆ ವರ್ಗಾವಣೆ ಪಡೆಯಲು ಅವಕಾಶವಿದೆ.

ವಿವಿಧ ರಾಜ್ಯಗಳ ಪೊಲೀಸರ ಜತೆಗೂಡಿ ಕಾನೂನು– ಸುವ್ಯವಸ್ಥೆ ಕಾಪಾಡುವ, ನಕ್ಸಲರು, ಉಗ್ರರ ವಿರುದ್ಧ ಹೋರಾಡುವ ಸಿಆರ್‌ಪಿಎಫ್‌ ಯೋಧರ ವೇತನ, ತರಬೇತಿ, ಪಿಂಚಣಿ ಹಾಗೂ ಅವರ ಕುಟುಂಬದ ಸದಸ್ಯರ ಯೋಗಕ್ಷೇಮ, ಆಡಳಿತಾತ್ಮಕ ಜವಾಬ್ದಾರಿಗಳನ್ನು ಕೇಂದ್ರ ಕಚೇರಿ ಸಿಬ್ಬಂದಿ ನೋಡಿಕೊಳ್ಳುತ್ತದೆ. ಯೋಧರ ಕುಟುಂಬಗಳ ವಾಸ್ತವ್ಯ, ಶಾಲೆ, ಆಸ್ಪತ್ರೆ ಇನ್ನಿತರ ಸೌಲಭ್ಯಗಳನ್ನು ಈ ಕೇಂದ್ರ ಕಚೇರಿ ಒಳಗೊಂಡಿದೆ. ವಾಸ್ತವದಲ್ಲಿ ಇದೊಂದು ‘ಟೌನ್‌ಶಿಪ್‌’ ಎಂದೇ ಹೇಳಬಹುದು.

ರಾಜ್ಯ ಸರ್ಕಾರ ತರಳು ಗ್ರಾಮದಲ್ಲಿ ಸಿಆರ್‌ಪಿಎಫ್‌ ಕೇಂದ್ರ ಕಚೇರಿಗಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 220ಎಕರೆ ಜಮೀನು ನೀಡಿದೆ. ಈ ಜಮೀನಿನಲ್ಲಿ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣಗೊಳ್ಳುತ್ತಿದೆ. ಚಾಂದೌಲಿಗೆ ಸ್ಥಳಾಂತರ ಆಗುತ್ತಿರುವ ಕಚೇರಿಗೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಜಮೀನಿನಿಂದ ಹಿಡಿದು ಎಲ್ಲವೂ ಹೊಸದಾಗಿ ಆಗಬೇಕಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ರಾಜ್ಯ ಸರ್ಕಾರದ ಗಮನಕ್ಕೆ ತರದೆ ಕೇಂದ್ರ ಸರ್ಕಾರ ಸಮೂಹ ಕಚೇರಿ ಸ್ಥಳಾಂತರ ಆದೇಶ ಹೊರಡಿಸಿದ್ದು, ಈ ಕುರಿತಂತೆ ಪ್ರತಿಕ್ರಿಯೆಗೆ ಸಿಆರ್‌ಪಿಎಫ್‌ ಹಿರಿಯ ಅಧಿಕಾರಿಗಳು ಸಿಗಲಿಲ್ಲ.

ಸಿ.ಎಂ ಜತೆ ನಿವೃತ್ತ ಐ.ಜಿ ಚರ್ಚೆ

ತರಳು ಕೇಂದ್ರ ಕಚೇರಿಯನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ಸಿಆರ್‌ಪಿಎಫ್‌ ನಿವೃತ್ತ ಇನ್ಸ್‌‍‍ಪೆಕ್ಟರ್‌ ಜನರಲ್‌ ಕೆ. ಅರ್ಕೇಶ್‌ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಈ ಕಚೇರಿ ಉತ್ತರ ಪ್ರದೇಶಕ್ಕೆ ಹೋಗಲು ಬಿಡಬಾರದು ಎಂದು ಒತ್ತಾಯಿಸಿದ್ದೇನೆ. ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಸಿದ್ದರಾಮಯ್ಯ  ಭರವಸೆ ನೀಡಿದ್ದಾರೆ. ಆದರೆ, ಇದುವರೆಗೆ ಏನೂ ಆಗಿಲ್ಲ’ ಎಂದು ಅವರು ಹೇಳಿದರು.

‘ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಸಚಿವರ ಭೇಟಿಗೂ ಸಮಯ ಕೇಳಿದ್ದೇನೆ. ಅವಕಾಶ ಸಿಕ್ಕಿಲ್ಲ’ ಎಂದೂ ಅರ್ಕೇಶ್‌ ವಿವರಿಸಿದರು.

ಸಿಆರ್‌ಪಿಎಫ್‌ ಮಹಾನಿರ್ದೇಶಕರಿಗೂ ನಿವೃತ್ತ ಐ.ಜಿ ಪತ್ರ ಬರೆದಿದ್ದಾರೆ.

ರಾಜನಾಥ್‌ ಸಿಂಗ್‌ಗೆ ಪತ್ರ

ರಾಜ್ಯದಿಂದ ಸಿಆರ್‌ಪಿಎಫ್‌ ಕೇಂದ್ರ ಕಚೇರಿ ಸ್ಥಳಾಂತರಿಸುವ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿದೆ.

ಚಾಂದೌಲಿಗೆ ಬೇಕಿದ್ದರೆ ಮತ್ತೊಂದು ಸಿಆರ್‌‍ಪಿಎಫ್‌ ಕೇಂದ್ರ ಕಚೇರಿ ಮಂಜೂರು ಮಾಡಿ. ಬೆಂಗಳೂರಿನಿಂದ ಇದನ್ನು ಸ್ಥಳಾಂತರ ಮಾಡಬೇಡಿ ಎಂದು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಸಂಸತ್ ಸದಸ್ಯರಿಗೂ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.