ADVERTISEMENT

ರಾಜ್ಯದ ಹಲವೆಡೆ ಭಾರಿ ಮಳೆ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಮಡಿಕೇರಿ ತಾಲ್ಲೂಕಿನ ಕಾಟಕೇರಿ ರಸ್ತೆಯಲ್ಲಿರುವ ಬಸ್‌ ತಂಗುದಾಣದ ಮೇಲೆ ಮರ ಬಿದ್ದಿರುವುದು
ಮಡಿಕೇರಿ ತಾಲ್ಲೂಕಿನ ಕಾಟಕೇರಿ ರಸ್ತೆಯಲ್ಲಿರುವ ಬಸ್‌ ತಂಗುದಾಣದ ಮೇಲೆ ಮರ ಬಿದ್ದಿರುವುದು   

ಬೆಂಗಳೂರು: ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ವ್ಯಾಪಕವಾಗಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರಮುಖ ನದಿಗಳಲ್ಲಿನ ಒಳಹರಿವು ಹೆಚ್ಚಿದೆ.

ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲ್ ನಿವಾಸಿ ರೇವತಿ (48), ಫಲ್ಗುಣಿ ನದಿಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ADVERTISEMENT

ಕಾಸರಗೋಡು ಜಿಲ್ಲೆ ದೇಲಂಪಾಡಿಯಲ್ಲಿ ಚನಿಯ ನಾಯ್ಕ (63) ಪಯಸ್ವಿನಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಸಿದ್ದಾಪುರದ ಸಮೀಪದ ನೆಲ್ಯಹುದಿಕೇರಿಯಲ್ಲಿ ಮರದ ಕೊಂಬೆ ಬಿದ್ದು ಹಳೆಯ ಕಾರುಗಳ ಸಂಗ್ರಹಕಾರ ಅಹ್ಮದ್ ಕುಟ್ಟಿ ಹಾಜಿ (67) ಮೃತಪಟ್ಟಿದ್ದಾರೆ.

ಸಕಲೇಶಪುರದ ಕಳಲೆ ಗ್ರಾಮದಲ್ಲಿ ಮರ ಬಿದ್ದು ಪುಟ್ಟಯ್ಯ (65) ಮೃತಪಟ್ಟಿದ್ದಾರೆ.

ಭಾಗಮಂಡಲ ಸಂಪೂರ್ಣ ಜಲಾವೃತಗೊಂಡಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ತಲಕಾವೇರಿ- ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಹಾರಂಗಿ ಜಲಾಶಯದ ಒಳಹರಿವು ಜಾಸ್ತಿಯಾಗಿದ್ದು, ಒಂದೇ ದಿನ ನಾಲ್ಕು ಅಡಿಯಷ್ಟು ನೀರು ಹರಿದು ಬಂದಿದೆ.

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಶನಿವಾರ ವಿವಿಧೆಡೆ ಉತ್ತಮ ಮಳೆಯಾಗಿದೆ. ಧಾರವಾಡ, ಗದಗ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದೆ.

ಮುಂಬೈ: ಮಹಾರಾಷ್ಟ್ರದ ಹಲವೆಡೆ ಉತ್ತಮ ಮಳೆಯಾಗಿದೆ. ಠಾಣೆ ಜಿಲ್ಲೆಯಲ್ಲಿ ಸಿಡಿಲು ಬಡಿದು ಸ್ಟೆನಿ ಅದ್ಮಾನಿ (66) ಎಂಬುವವರು ಮೃತಪಟ್ಟಿದ್ದಾರೆ. ಮುಂಬೈನ ರಸ್ತೆಯೊಂದರಲ್ಲಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಳೆ ನೀರಿನಲ್ಲಿ ವೇಗವಾಗಿ ಚಲಿಸಿದ್ದರಿಂದ ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.