ADVERTISEMENT

ರಾಜ್ಯಪಾಲರ ಕೋಪ ಶಮನಕ್ಕೆ ಯತ್ನ

ಭಾರದ್ವಾಜ್‌ ಭೇಟಿ ಮಾಡಿದ ದಿಗ್ವಿಜಯ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರು ಶನಿವಾರ ಬೆಳಿಗ್ಗೆ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ರಾಜ್ಯ ಸರ್ಕಾರದ ಕುರಿತ ಅಸಮಾಧಾನ ಶಮನಗೊಳಿಸುವ ದಿಕ್ಕಿನಲ್ಲಿ ಈ ಭೇಟಿ ನಡೆದಿದೆ.

ಕೆಪಿಸಿಸಿ ಸಮನ್ವಯ ಸಮಿತಿ ಮತ್ತು ಚುನಾವಣಾ ಸಮಿತಿ ಸಭೆಗಳಿಗಾಗಿ ನಗರಕ್ಕೆ ಬಂದಿದ್ದ ದಿಗ್ವಿಜಯ್‌ ಸಿಂಗ್‌ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಸೂಚನೆಯಂತೆ ಸಭೆ ರದ್ದುಗೊಳಿಸಿ ತುರ್ತಾಗಿ ದೆಹಲಿಗೆ ಹಿಂದಿರುಗಿದರು. ಅದರ ನಡುವೆಯೇ ರಾಜಭವನಕ್ಕೆ ತೆರಳಿ ರಾಜ್ಯಪಾಲ­ರನ್ನು ಭೇಟಿಮಾಡಿದ ಸಿಂಗ್‌, ರಾಜ್ಯಪಾಲರು–ಸರ್ಕಾರದ ನಡುವಣ ಘರ್ಷಣೆಗೆ ಇತಿಶ್ರೀ ಹಾಡುವ ಪ್ರಯತ್ನ ಮಾಡಿದರು.

ಕೆಲವು ಸಚಿವರ ಕಾರ್ಯವೈಖರಿ ಕುರಿತು ರಾಜ್ಯ­ಪಾಲರು ಬಹಿರಂಗವಾಗಿಯೇ ಇತ್ತೀಚೆಗೆ  ಅಸಮಾಧಾ­ನ ವ್ಯಕ್ತಪಡಿಸಿದ್ದರು. ತಮ್ಮನ್ನು ರಾಜ್ಯದಿಂದ ವರ್ಗಾವಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಪರೋಕ್ಷ ವಾಗ್ದಾಳಿಯನ್ನೂ ನಡೆಸಿದ್ದರು. ಇದರಿಂದಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಘರ್ಷಣೆ ತೀವ್ರ ಸ್ವರೂಪ ಪಡೆಯುವ ಹಾದಿಯಲ್ಲಿತ್ತು.

ರಾಜ್ಯಪಾಲರು ಬಹಿರಂಗವಾಗಿ ಸರ್ಕಾರದ ವಿರುದ್ಧ ಹೇಳಿಕ ನೀಡುತ್ತಿರುವ ಕುರಿತು ಕೆಲ ಶಾಸಕರು ದಿಗ್ವಿಜಯ್‌ ಬಳಿ ಅಸಮಾಧಾನ ತೋಡಿಕೊಂಡಿದ್ದರು. ರಾಜ್ಯಪಾಲರಿಂದ ಪದೇ ಪದೇ ಸರ್ಕಾರಕ್ಕೆ ಮುಜುಗರ ಆಗುತ್ತಿದೆ ಎಂದು ದೂರಿದ್ದರು.

ಸಹಕಾರದ ಭರವಸೆ: ರಾಜ್ಯಪಾಲರ ಅಸಮಾಧಾನ ಕುರಿತು ದಿಗ್ವಿಜಯ್‌ ಸಿಂಗ್‌ ಅವರು ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರ­ಮೇಶ್ವ­ರ್, ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಶಾಸಕ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ್ದರು. ರಾಜ್ಯಪಾಲರ ಟೀಕೆ ಅಥವಾ ಸಲಹೆಗಳನ್ನು ನಿರ್ಲಕ್ಷ್ಯ ಮಾಡದಂತೆ ಮುಖ್ಯಮಂತ್ರಿಯವರಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

‘ರಾಜ್ಯ ಸರ್ಕಾರದಿಂದ ನಿಮಗೆ ಎಲ್ಲ ಬಗೆಯ ಸಹಕಾರ ದೊರೆಯಲಿದೆ. ನಿಮ್ಮ ಮಾತುಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ’ ಎಂಬ ಭರವಸೆಯನ್ನು ದಿಗ್ವಿಜಯ್‌ ಸಿಂಗ್‌ ಅವರು ರಾಜ್ಯಪಾಲರಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಅನಧಿಕೃತ ಸಭೆ: ಶನಿವಾರ ಬೆಳಿಗ್ಗೆಯೇ ಕುಮಾರಕೃಪಾ ಅತಿಥಿಗೃಹದಲ್ಲಿ ದಿಗ್ವಿಜಯ್‌ ಸಿಂಗ್‌ ಅವರು ಸಮನ್ವಯ ಸಮಿತಿ ಸದಸ್ಯರ ಜೊತೆ ಅನಧಿಕೃತವಾಗಿ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್‌, ಜಾರ್ಜ್ ಮತ್ತು ಶಿವಕುಮಾರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.  ಜನವರಿ 6ಕ್ಕೆ ಸಮನ್ವಯ ಸಮಿತಿಯ ಸಭೆ ನಡೆಯಲಿದೆ.

ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಮಾಡುವ ವಿಚಾರದ ಕುರಿತು ಚರ್ಚೆ ನಡೆದಿದೆ. ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸ­ಬೇಕೆಂಬ ಇಂಗಿತವನ್ನು ದಿಗ್ವಿಜಯ್‌ ಸಿಂಗ್‌ ಅವರು ವ್ಯಕ್ತಪಡಿಸಿದ್ದಾರೆ. ನೇಮಕಕ್ಕೆ ಸಂಬಂಧಿಸಿದ ಪಟ್ಟಿ­ಯನ್ನು ಸಿದ್ಧಪಡಿಸಿಕೊಂಡು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಅವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ 11 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ. ಈ ಜಿಲ್ಲೆಗಳಿಗೆ ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಕಾರ್ಯಕರ್ತರಿಗೆ ಹೆಚ್ಚು ಸ್ಥಾನಗಳನ್ನು ಮೀಸಲಿಡಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ ಎಂದು ಗೊತ್ತಾಗಿದೆ.

ಚುನಾವಣಾ ತಯಾರಿಗೆ ಸೂಚನೆ: ಲೋಕಸಭಾ ಚುನಾವಣಾ ತಯಾರಿಗೆ ಶೀಘ್ರದಲ್ಲೇ ಚಾಲನೆ ನೀಡು­ವಂತೆಯೂ ದಿಗ್ವಿಜಯ್‌ ಸಿಂಗ್‌ ಅವರು ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಅವರಿಗೆ ಸೂಚನೆ ನೀಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಇಬ್ಬರೂ ಸಮನ್ವಯದಿಂದ ಕೆಲಸ ಮಾಡಬೇಕು ಎಂಬ ಕಿವಿಮಾತು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಾಸಕರ ಬೆಂಬಲಿಗರ ಪ್ರದರ್ಶನ
ಧಾರವಾಡ ಶಾಸಕ ವಿನಯ್‌ ಕುಲಕರ್ಣಿ ಮತ್ತು ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಇಬ್ಬರು ಶಾಸಕರ ಬೆಂಬಲಿಗರು ಕುಮಾರಕೃಪಾ ಅತಿಥಿಗೃಹದ ಎದುರು ಪ್ರದರ್ಶನ ನಡೆಸಿದರು. ಇನ್ನೊಂದೆಡೆ ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್‌ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಪ್ರದರ್ಶನ ನಡೆಸಿದ ಅವರ ಬೆಂಬಲಿಗರು, ದಿಗ್ವಿಜಯ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದರು.

ಕೊಂಡಯ್ಯ ಉಚ್ಚಾಟನೆಗೆ ಆಗ್ರಹ
ಪ್ರದೇಶ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಸಿ.ಕೊಂಡಯ್ಯ ಅವರನ್ನು ಪಕ್ಷದಿಂದ ಉಚ್ಚಾ­ಟಿ­ಸಲು ಆಗ್ರಹಿಸಿ ಬಳ್ಳಾರಿ ಸಮಿತಿ ಅಧ್ಯಕ್ಷ ಆಂಜನೇಯಲು ನೇತೃತ್ವದ ನಿಯೋಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದೆ. ಬಳ್ಳಾರಿಯಲ್ಲಿ ಪಕ್ಷದ ಹೆಸರಿನಲ್ಲಿ ಸರ್ಕಾರದಿಂದ ಪಡೆದಿರುವ ನಿವೇಶನ­ವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಆರೋಪ ಕೊಂಡಯ್ಯ ಅವರ ಮೇಲಿದೆ. ಈ ಸಂಬಂಧ ಡಿಸಿ ನೀಡಿರುವ ವರದಿಯೂ ಸೇರಿದಂತೆ ಹಲವು ದಾಖಲೆಗಳೊಂದಿಗೆ ನಿಯೋಗ ದೂರು ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.