ADVERTISEMENT

ರೇಷ್ಮೆ ಬಲೆಯಲ್ಲಿ ರೈತ ವಿಲಿವಿಲಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST


ರಾಮನಗರ: ಹಲವಾರು ವರ್ಷಗಳಿಂದ ರೇಷ್ಮೆ ಬೆಳೆಯ ಜತೆಗೆ ಬದುಕು ಕಟ್ಟಿಕೊಂಡು ಬಂದಿದ್ದ ಲಕ್ಷಾಂತರ ರೈತರು ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಆರ್ಥಿಕ ಚೈತನ್ಯ ತುಂಬಬೇಕಾದ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಾಳಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಇದರಿಂದ ವಿಚಲಿತರಾಗಿರುವ ರೈತಾಪಿ ವರ್ಗ ರೇಷ್ಮೆ ಕೃಷಿಯಿಂದ ದೂರ ಸರಿಯಲು ಚಿಂತಿಸುತ್ತಿದ್ದಾರೆ!

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದ ಧಾರಣೆಯಿಂದ ಆಕರ್ಷಿತರಾಗಿ ರೇಷ್ಮೆ ಕೃಷಿ ಮಾಡಲು ಬಂಡವಾಳ ಹೂಡಿದ್ದ ಲಕ್ಷಾಂತರ ರೈತರು ಇದೀಗ ಕೈಸುಟ್ಟುಕೊಂಡಿದ್ದಾರೆ. ಈ ಆಘಾತದಿಂದ ಹೊರಬರಲಾಗದೆ ವಿಲಿವಿಲಿ ಒದ್ದಾಡುತ್ತಿದ್ದಾರೆ.

ಸಾಲ ಸೋಲ ಮಾಡಿ ರೇಷ್ಮೆ ಹುಳುಗಳನ್ನು ಸಾಕಿ ಗೂಡು ಬೆಳೆದವರಿಗೆ ಖರ್ಚು ಮಾಡಿದಷ್ಟು ಆದಾಯ ಬಾರದಿರುವುದರಿಂದ ಕಂಗಾಲಾಗುವಂತೆ ಮಾಡಿದೆ. ಇದರಿಂದ ವಿಚಲಿತರಾಗಿರುವ ರೈತರ ಬಾಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು ಎಂಬ ಮಾತುಗಳು ಕೇಳಿ ಬರುತ್ತಿವೆ!

ಈ ಸ್ಥಿತಿಗೆ ಕಾರಣ ಏನು ?: ರಾಜ್ಯದ ಕೃಷಿ ಮಾರುಕಟ್ಟೆಯಲ್ಲಿ ಸತತ ಐದಾರು ತಿಂಗಳಿಂದ ಒಂದು ಕೆ.ಜಿ ರೇಷ್ಮೆ ಗೂಡಿಗೆ 300ರಿಂದ 400 ರೂಪಾಯಿ ಬೆಲೆ ಇತ್ತು. ಈ ಬೆಲೆ ದಿಢೀರನೇ ಕಳೆದ ಶನಿವಾರ, ಭಾನುವಾರದಿಂದ 150 ರಿಂದ 200 ರೂಪಾಯಿಗೆ ಕುಸಿತ ಕಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಏಕಾಏಕಿ ರೇಷ್ಮೆ ಧಾರಣೆ ಕುಸಿತ ಕಂಡಿದ್ದು ರೈತರಲ್ಲಿ ತಳಮಳ ಹೆಚ್ಚುವಂತೆ ಮಾಡಿದೆ. ಹಾಗಾಗಿ ರಾಮನಗರ, ಶಿಡ್ಲಘಟ್ಟ, ಚನ್ನಪಟ್ಟಣ, ಕನಕಪುರ, ಮಳವಳ್ಳಿ, ಕೋಲಾರ ಮಾರುಕಟ್ಟೆಗಳಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ರಾಮನಗರದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಯನ್ನು ಭಾನುವಾರ ಸತತ 10 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಬೆಲೆ ಕುಸಿತ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿ)ಯಿಂದ ರೇಷ್ಮೆ ನೂಲು ಖರೀದಿಸಲು ಮೂರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಒಂದು ಕೆ.ಜಿ. ರೇಷ್ಮೆ ನೂಲನ್ನು ಗುಣಮಟ್ಟ ಆಧರಿಸಿ 2,250ರಿಂದ 2,500 ರೂಪಾಯಿಗೆ ಖರೀದಿಸಲು ಸೂಚನೆ ನೀಡಿದೆ. ಆದರೆ ಕೆಎಸ್‌ಎಂಬಿ ಅಧಿಕಾರಿಗಳು 1,700 ರಿಂದ 1,900 ರೂಪಾಯಿಗೆ ರೇಷ್ಮೆ ನೂಲನ್ನು ಖರೀದಿಸುತ್ತಿರುವ ಕಾರಣ ಒಂದು ಕೆ.ಜಿ ರೇಷ್ಮೆ ಗೂಡಿಗೆ 200 ರೂಪಾಯಿಗಿಂತ ಹೆಚ್ಚಿಗೆ ಹರಾಜು ಕೂಗಲು ಆಗುತ್ತಿಲ್ಲ’ ಎಂದು ರೇಷ್ಮೆ ರೀಲರ್ ಸೈಯದ್ ಅಸ್ಲಂ ಖಾನ್ ಹೇಳುತ್ತಾರೆ.

ದಿಢೀರ್ ಕುಸಿತ ಏಕೆ ?: ಕೇಂದ್ರದ ಆಮದು ನೀತಿಯ ಕಾರಣ ರೇಷ್ಮೆ ಗೂಡಿನ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಬಂದಿದೆ ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ದೂರುತ್ತಾರೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಚೀನಾ ರೇಷ್ಮೆ ಮೇಲಿನ ಸುಂಕವನ್ನು ಶೇ 25ರಷ್ಟು ಕಡಿಮೆ ಮಾಡಿ, ಕೇವಲ ಶೇ 6ರಷ್ಟು ಮಾತ್ರ ಸುಂಕ ವಿಧಿಸಿರುವುದರಿಂದ ಸ್ಥಳೀಯ ರೇಷ್ಮೆ ಗೂಡಿನ ಬೆಲೆ ಕುಸಿದಿದೆ ಎಂದು ತಿಳಿಸುತ್ತಾರೆ.

ಭಾರತಕ್ಕೆ ವರ್ಷಕ್ಕೆ 30,000 ಟನ್ ರೇಷ್ಮೆ ಗೂಡಿನ ಅಗತ್ಯ ಇದೆ. ಅದರಲ್ಲಿ 16,000 ಟನ್ ರೇಷ್ಮೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ.

ಇದರಲ್ಲಿ ಕರ್ನಾಟಕದ ಪಾಲು 7.500 ಮೆಟ್ರಿಕ್ ಟನ್ ಇದೆ. ದೇಶಕ್ಕೆ ಬೇಕಿರುವ 14,000 ಮೆಟ್ರಿಕ್ ಟನ್ ರೇಷ್ಮೆಯನ್ನು ಚೀನಾ (ಶೇ 99) ಮತ್ತು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದಾಗುವ ಚೀನಾ ರೇಷ್ಮೆಯ ಮೇಲೆ ಕೇಂದ್ರ ಸರ್ಕಾರ ಶೇ 31ರಷ್ಟು ಸುಂಕ ವಿಧಿಸುತ್ತಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಶೇ 25ರಷ್ಟು ಸುಂಕಕ್ಕೆ ವಿನಾಯಿತಿ ನೀಡಲಾಗಿದ್ದು, ಶೇ 6ರಷ್ಟು ಸುಂಕವನ್ನು ವಿಧಿಸಲಾಗಿದೆ. ಇದರಿಂದ ಈ ಭಾಗದ ರೇಷ್ಮೆ ಕೃಷಿಗೆ ಹಾಗೂ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ ಎಂದು ಅವರು ವಿಶ್ಲೇಷಿಸುತ್ತಾರೆ.

1999-2000ರಲ್ಲಿ ದೇಶದ 1.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿತ್ತು. ಆದರೆ ಸರ್ಕಾರಗಳು ಸೂಕ್ತ ಪ್ರೋತ್ಸಾಹ ನೀಡದ ಕಾರಣ ಪ್ರಸ್ತುತ 77,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಿಪ್ಪುನೇರಳೆ (ಮೂರು ಲಕ್ಷ ಕುಟುಂಬಗಳು ರೇಷ್ಮೆ ಕೃಷಿಯನ್ನು ಅವಲಂಬಿಸಿವೆ) ವಿಸ್ತರಿಸಿದೆ. ಅಂದರೆ ಶೇ 40ಕ್ಕಿಂತ ಹೆಚ್ಚು ಜನ ರೇಷ್ಮೆ ಕೃಷಿಯಿಂದ ಹಿಂದೆ ಸರಿದಿದ್ದಾರೆ.

ಆದರೆ ಕಳೆದ ವರ್ಷದಿಂದ ರೇಷ್ಮೆ ಗೂಡಿಗೆ ಉತ್ತಮ ಬೆಳೆ ದೊರೆಯುತ್ತಿರುವುದರಿಂದ ಯುವ ಜನತೆ ಹೆಚ್ಚಾಗಿ ರೇಷ್ಮೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದರು. 4ರಿಂದ 5 ತಿಂಗಳಿಂದ ರೇಷ್ಮೆ ಗೂಡು ಕೆ.ಜಿಗೆ 350ರಿಂದ 400 ರೂಪಾಯಿ ಇದ್ದಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನತೆ ರೇಷ್ಮೆಯತ್ತ ಮುಖ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದರು. ಆದರೆ ಅವರೆಲ್ಲರ ಭವಿಷ್ಯ ಈಗ ಮಸುಕಾಗುತ್ತಿದೆ ಎಂದು ಜಿಯಾವುಲ್ಲಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಯಾರ ಲಾಬಿ ಇದಕ್ಕೆ ಕಾರಣ ?: ಉತ್ತರ ಭಾರತದ ಕೆಲವೇ ಕೆಲವು ನೇಕಾರ ಕುಟುಂಬದವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಚೀನಾ ರೇಷ್ಮೆ ಮೇಲಿನ ಆಮದು ಸುಂಕ ಕಡಿತ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರ ರೈತರ ಮರಣ ಶಾಸನ ಬರೆದಿದೆ ಎಂದು ರಾಜ್ಯ ನೋಂದಾಯಿತ ರೇಷ್ಮೆ ಮೊಟ್ಟೆ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಜಿ. ಮಹೇಂದ್ರ ದೂರುತ್ತಾರೆ.

ಬೇಡಿಕೆ ಇರುವಷ್ಟು ರೇಷ್ಮೆ ದೇಶದಲ್ಲಿ ಉತ್ಪಾದನೆ ಆಗದ ಕಾರಣ ಚೀನಾದಿಂದ ಕಡಿಮೆ ಬೆಲೆಗೆ ಹೆಚ್ಚು ಪ್ರಮಾಣದಲ್ಲಿ ರೇಷ್ಮೆ ಆಮದು ಮಾಡಿಕೊಳ್ಳಲು ನೇಕಾರ ಸಮುದಾಯದವರು ಕೇಂದ್ರ ಸರ್ಕಾರದ ಮೇಲೆ ದೊಡ್ಡ ಪ್ರಮಾಣದಲ್ಲಿ ಒತ್ತಡ ಹಾಕಿ ಲಾಬಿ ನಡೆಸಿದ್ದಾರೆ ಎಂದು ಅವರು ಆರೋಪಿಸುತ್ತಾರೆ. ನೇಕಾರರ ಹಿತ ಕಾಯಲು ಹೋಗಿ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ರೈತರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ಆರೋಪಿಸುತ್ತಾರೆ.

ಸರ್ಕಾರ ಏನು ಮಾಡಬೇಕು?: ದೇಶದ ರೈತರ ಹಿತದೃಷ್ಟಿಯಿಂದ ಕೂಡಲೇ ಚೀನಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಮೊದಲಿದ್ದಷ್ಟು ಪ್ರಮಾಣಕ್ಕೆ (ಶೇ 31) ನಿಗದಿಪಡಿಸಬೇಕು. ಮುಂದಿನ 10 ವರ್ಷಗಳ ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಚೀನಾದಿಂದ ಆಮದಾಗುವ ಬಟ್ಟೆಯ ಮೇಲೆ ಹೆಚ್ಚು ಸುಂಕ ವಿಧಿಸುವ ಮೂಲಕ ನೇಕಾರರ ಹಿತವನ್ನೂ ಸರ್ಕಾರ ಕಾಯಬಹುದು ಎಂದು ಜಿಯಾವುಲ್ಲಾ ಸಲಹೆ ನೀಡುತ್ತಾರೆ.

ಅದರ ಜತೆಗೆ ದೇಶಕ್ಕೆ ಬೇಕಿರುವಷ್ಟು ರೇಷ್ಮೆ ಉತ್ಪಾದನೆಗೆ ಅಗತ್ಯ ಪ್ರೋತ್ಸಾಹವನ್ನು ಸರ್ಕಾರ ನೀಡಬೇಕು. ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸುವುದರ ಜತೆಗೆ ಇಲ್ಲಿನ ರೇಷ್ಮೆ ಬೆಳೆಗಾರರ ರಕ್ಷಣೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ರೇಷ್ಮೆ ಕೃಷಿ ಪ್ರಗತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಬೇಕು ಎಂದು ಅವರು ಹೇಳುತ್ತಾರೆ.

ರಾಮನಗರದ ಅಂಕಿ ಅಂಶ: ರೇಷ್ಮೆ ನಾಡು ಖ್ಯಾತಿ ರಾಮನಗರ ಜಿಲ್ಲೆಯಲ್ಲಿ 9,985 ಹೆಕ್ಟೇರ್ ಪ್ರದೇಶದಲ್ಲಿ 1,310 ಗ್ರಾಮಗಳಲ್ಲಿ 20,399 ಜನ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ಇದರಲ್ಲಿ 1,641 ಪರಿಶಿಷ್ಟ ಜಾತಿಯವರು, 75 ಮಂದಿ ಪರಿಶಿಷ್ಟ ಪಂಗಡದವರು, 104 ಅಲ್ಪ ಸಂಖ್ಯಾತರು ಹಾಗೂ 1,333 ಮಹಿಳಾ ರೈತರು ಸ್ವತಂತ್ರವಾಗಿ ಇದರಲ್ಲಿ ತೊಡಗಿದ್ದಾರೆ. ಸುಮಾರು 800 ರೀಲರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ರೇಷ್ಮೆ ಇಲಾಖೆ ಅಂಕಿ ಅಂಶ ನೀಡಿದೆ.

ರೇಷ್ಮೆ ಬೆಳೆಗಾರರ ಪ್ರತಿಕ್ರಿಯೆಗಳು
ಎರಡು ಮೂರು ತಿಂಗಳು ಶ್ರಮವಹಿಸಿ ದುಡಿಮೆ ಮಾಡಿದ್ದಕ್ಕೆ ನನಗೆ ಖರ್ಚು ಮಾಡಿದಷ್ಟು ಆದಾಯ ದೊರೆಯಲಿಲ್ಲ. ಒಂದು ಕೆ.ಜಿ ರೇಷ್ಮೆ ಗೂಡು ಉತ್ಪಾದನೆಗೆ ಸುಮಾರು 230 ರಿಂದ 240 ರೂಪಾಯಿ ಖರ್ಚಾಗುತ್ತದೆ. ಆದರೆ ಇದಕ್ಕೆ 200 ರಿಂದ 220 ರೂಪಾಯಿ ಬೆಲೆ ದೊರೆತರೆ ಜೀವನ ಸಾಗಿಸುವುದು ಹೇಗೆ. ಇದೇ ರೀತಿ ಬೆಲೆ ಕುಸಿತ ಸಂಭವಿಸಿದರೆ ರೇಷ್ಮೆ ಕೃಷಿಯನ್ನು ಬಿಟ್ಟು ಬೇರೆ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇನೆ ಎನ್ನುತ್ತಾರೆ ಶಿರಾ ತಾಲ್ಲೂಕಿನ ಸಿ.ಬಿ ಪಾಳ್ಯದ ರೈತ ಗುಣ್ಣಯ್ಯ ಅವರು.

ಕಳೆದ ಬಾರಿ ಕೆಜಿ ರೇಷ್ಮೆ ಗೂಡಿಗೆ ರೂ 330  ದೊರೆತಿತ್ತು.  ಈಗ ರೂ 210  ದೊರೆತಿದೆ. ಇದನ್ನೇ ನಂಬಿ ಸಾಲ ಮಾಡಿದರೆ ಅದನ್ನು ತೀರಿಸುವುದು ಹೇಗೆ. ಒಂದು ವೇಳೆ ರೇಷ್ಮೆ ಧಾರಣೆ 150 ರೊಪಾಯಿಗೆ ಇಳಿದರಂತೂ ಸಾಲ ಮಾಡಿದ ರೇಷ್ಮೆ ಬೆಳೆಗಾರರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದಿರುವ ಮಾರ್ಗ ಎಂದು ಚನ್ನಪಟ್ಟಣದ ಗೋವಿಂದಹಳ್ಳಿಯ ರೈತ ರಾಮು ಮಾರ್ಮಿಕವಾಗಿ ನುಡಿಯುತ್ತಾರೆ.

ಶಿರಾದಿಂದ 1,000 ರೂಪಾಯಿ ಸಾರಿಗೆ ವೆಚ್ಚ ನೀಡಿ ರಾಮನಗರ ಮಾರುಕಟ್ಟೆಗೆ 70 ಕೆ.ಜಿ ರೇಷ್ಮೆ ಗೂಡು ತೆಗೆದುಕೊಂಡು ಬಂದಿರುವೆ. ರೂ. 300ರಿಂದ 400 ಇದ್ದ ರೇಷ್ಮೆ ಬೆಲೆ ಏಕಾಏಕಿ ಕುಸಿದಿರುವುದು ಆತಂಕ ಮೂಡಿಸಿದೆ. ನನ್ನ ರೇಷ್ಮೆ ಗೂಡಿಗೆ 226 ರೂಪಾಯಿ (ಕೆ.ಜಿಗೆ ) ನಿಗದಿಯಾಗಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ತೋಟದ ಖರ್ಚು  ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡರೆ ಕೆ.ಜಿ ಗೂಡಿಗೆ 300 ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ. ಆದರೆ ಬರುವ 226 ರೂಪಾಯಿಯಿಂದ ಮಾಡಿರುವ ಸಾಲವೇ ತೀರುವುದಿಲ್ಲ ಎಂದು ಮಹಾಲಕ್ಷ್ಮಿ ಕಣ್ಣೀರು ಹಾಕುತ್ತಾರೆ.

ಕೇಂದ್ರಕ್ಕೆ ನಿಯೋಗ: ಸಿಎಂ
ಬೆಂಗಳೂರು: ರಾಜ್ಯದಲ್ಲಿನ ರೇಷ್ಮೆ ಮತ್ತು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನವದೆಹಲಿಗೆ ನಿಯೋಗವನ್ನು ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವಿಧಾನ ಸಭೆಯಲ್ಲಿ ತಿಳಿಸಿದರು.

ಕಾಂಗ್ರೆಸ್‌ನ ಯು.ಟಿ.ಖಾದರ್, ಕಿಮ್ಮನೆ ರತ್ನಾಕರ್, ಟಿ.ಬಿ.ಜಯಚಂದ್ರ ಅವರು ಅಡಿಕೆ ಬೆಲೆ ಕುಸಿತ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಯಡಿಯೂರಪ್ಪ, ಪ್ರತಿ ಕ್ವಿಂಟಲ್ ಚಾಲಿ (ಬಿಳಿ) ಅಡಿಕೆಗೆ ಕೇಂದ್ರ ಸರ್ಕಾರ ಘೋಷಿಸಿರುವ 6900 ರೂಪಾಯಿ ಜೊತೆಗೆ ರಾಜ್ಯ ಸರ್ಕಾರ 600 ರೂಪಾಯಿ ನೀಡಿ ಜೂನ್‌ವರೆಗೂ ಗರಿಷ್ಠ ಎಂಟು ಸಾವಿರ ಟನ್ ಅಡಿಕೆ ಖರೀದಿಸಲಿದೆ ಎಂದರು.

 ಇದಕ್ಕೂ ಮುನ್ನ ಮಾತನಾಡಿದ ಮುನಿಯಪ್ಪ, ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆಯಲ್ಲಿ ರೇಷ್ಮೆ ಗೂಡು ಖರೀದಿಸಲು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.