ADVERTISEMENT

ರೈಲಿನಿಂದ ಬಿದ್ದು ವ್ಯಕ್ತಿಗೆ ತೀವ್ರ ಗಾಯ

ಹಾವೇರಿ ರೈಲು ನಿಲ್ದಾಣದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಹಾವೇರಿ: ರೈಲಿನಿಂದ ಇಳಿಯುವಾಗ ಒಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ರೈಲಿನಡಿ ಸಿಲುಕಿ ಒಂದು ಕೈ ಮತ್ತು ಒಂದು ಕಾಲು ಕಳೆದುಕೊಂಡ ಘಟನೆ ಇಲ್ಲಿಯ ರೈಲು ನಿಲ್ದಾಣದಲ್ಲಿ ಭಾನುವಾರ ನಡೆದಿದೆ.

ಗಾಯಾಳುವನ್ನು ನಗರದ ಕೊರಗರ ಓಣಿಯ ನಿವಾಸಿ ವಿನಾಯಕ ಮಹೇಂದ್ರ ಹಾವೇರಿ (42) ಎಂದು ಗುರುತಿಸಲಾಗಿದೆ. ವಿನಾಯಕ ಅವರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಳಿಗಳ ಮಧ್ಯೆಯೇ ನೋವಿನಿಂದ ನರಳಿದರೂ ತಕ್ಷಣ ಯಾರೂ ನೆರವಿಗೆ ಬರಲಿಲ್ಲ.

ಘಟನೆ ವಿವರ: ಸವಣೂರಿಗೆ ಹೋಗುವ ಸಲುವಾಗಿ ನಿಲ್ದಾಣಕ್ಕೆ ಬಂದಿದ್ದ ವಿನಾಯಕ ಅವರು ಮೈಸೂರು- ದಾದರ್ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿದ್ದಾರೆ. ರೈಲು ಹತ್ತಿದ ನಂತರ ಆ ರೈಲು ಸವಣೂರಿನಲ್ಲಿ ನಿಲುಗಡೆಯಾವುದಿಲ್ಲ ಎಂಬುದು ಅವರಿಗೆ ಗೊತ್ತಾಯಿತು. ಅಷ್ಟೊತ್ತಿಗೆ ರೈಲು ಹೊರಟಿತ್ತು.

ಆಗ ವಿನಾಯಕ ಗಡಿಬಿಡಿಯಲ್ಲಿ ರೈಲಿನಿಂದ ಇಳಿಯಲು ಹೋಗಿ ಕಾಲು ಜಾರಿ ಬಿದ್ದರು ಎಂದು ತಿಳಿಸಲಾಗಿದೆ.
ಅಲ್ಲಿದ್ದ ಕೆಲವರು 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ ಅವರು ಸಕಾಲಕ್ಕೆ ಬರಲಿಲ್ಲ. ರೈಲ್ವೆ ಪೊಲೀಸರು, ನಿಲ್ದಾಣದ ಸಿಬ್ಬಂದಿಯೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಸ್ಥಳೀಯ ಪೊಲೀಸರು ಸಕಾಲಕ್ಕೆ ಆಗಮಿಸದೆ ಇದ್ದುದರಿಂದ ಸುಮಾರು ಎರಡು ಗಂಟೆಗಳ ಕಾಲ ರಕ್ತದ ಮಡುವಿನಲ್ಲಿಯೇ ಹೊರಳಾಡುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು.

ನಂತರ ನಗರ ಠಾಣೆ ಸಿಪಿಐ ಪಂಪಾಪತಿ ಅವರು ಸ್ಥಳಕ್ಕೆ ಬಂದು ವಿನಾಯಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿ ಕಿಮ್ಸಗೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.