ಬೆಂಗಳೂರು: ರಾಜ್ಯದ ರೈಲ್ವೆ ಯೋಜನೆಗಳು ಈ ಕಾಲಕ್ಕೆ ಪೂರ್ಣ ಆಗುವುದಿಲ್ಲ ಎಂಬುದಕ್ಕೆ ಮತ್ತಷ್ಟು ಪುರಾವೆಗಳು ದೊರೆತಿವೆ. ವೆಚ್ಚ ಹಂಚಿಕೆಯ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಚ್ಚು ಹೆಚ್ಚು ಹಣ ಮೀಸಲಿಟ್ಟರೂ ರೈಲ್ವೆ ಮಾತ್ರ ಅದಕ್ಕೆ ಪೂರಕವಾಗಿ ಸ್ಪಂದಿಸದಿರುವುದು 2012-13ನೇ ಸಾಲಿನಲ್ಲೂ ಮುಂದುವರಿದಿದೆ.
ರಾಜ್ಯದಲ್ಲಿನ ನಿರ್ಮಾಣ ಹಂತದ ಯಾವ್ಯಾವ ಯೋಜನೆಗಳಿಗೆ ಈ ಸಾಲಿನಲ್ಲಿ ಎಷ್ಟೆಷ್ಟು ಹಣ ಮೀಸಲಿಡಲಾಗಿದೆ ಎಂಬುದರ ಕುರಿತ ಸಂಪೂರ್ಣ ಮಾಹಿತಿಯನ್ನು ರೈಲ್ವೆ ಮಂಡಳಿ, ರಾಜ್ಯ ಸರ್ಕಾರದ ಮೂಲಸೌಲಭ್ಯ ಇಲಾಖೆಗೆ ಕಳುಹಿಸಿದ್ದು, ಅದರಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ತೀರ ಕಡಿಮೆ ಹಣ ಮೀಸಲಿಟ್ಟಿರುವುದು ಕಂಡುಬಂದಿದೆ.
ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನದ ಸಲುವಾಗಿ ರಾಜ್ಯ ಸರ್ಕಾರ ಒಟ್ಟು 431 ಕೋಟಿ ರೂಪಾಯಿ ಮೀಸಲಿಟ್ಟರೆ, ರೈಲ್ವೆ ಮಂಡಳಿ ಕೇವಲ 273 ಕೋಟಿ ರೂಪಾಯಿ ತೆಗೆದಿರಿಸಿದೆ. ಅಂದರೆ ರಾಜ್ಯ ಸರ್ಕಾರ ತೆಗೆದಿರಿಸಿರುವುದಕ್ಕಿಂತ 158 ಕೋಟಿ ರೂಪಾಯಿ ಕಡಿಮೆ ಹಣವನ್ನು ರೈಲ್ವೆ ಮೀಸಲಿಟ್ಟಿದೆ!
ಇದು ರಾಜ್ಯ ಸರ್ಕಾರವನ್ನು ಮತ್ತಷ್ಟು ಕೆರಳಿಸಿದೆ. ರಾಜ್ಯದ ಉತ್ಸಾಹಕ್ಕೆ ರೈಲ್ವೆ ಮಂಡಳಿ ಪೂರಕವಾಗಿ ಸ್ಪಂದಿಸುತ್ತಿಲ್ಲ ಎನ್ನುವ ಅಸಮಾಧಾನ ರಾಜ್ಯ ಸರ್ಕಾರವನ್ನು ಕಾಡುತ್ತಿದೆ.
ಬಜೆಟ್‌ಗೂ ಮುನ್ನ ರೈಲ್ವೆ ಅಧಿಕಾರಿಗಳ ಜತೆ ಹಲವು ಸುತ್ತಿನ ಸಭೆಗಳನ್ನು ನಡೆಸುವ ಮೂಲಕ ರಾಜ್ಯದ ಮೂಲಸೌಲಭ್ಯ ಇಲಾಖೆ ಅಧಿಕಾರಿಗಳು ಮುಂದಿನ ವರ್ಷದ ಬಜೆಟ್‌ನಲ್ಲಿ ಎಷ್ಟು ಹಣ ತೆಗೆದಿರಿಸಬೇಕು? ಆದ್ಯತೆ ಮೇಲೆ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಆದರೆ, ಅನುಷ್ಠಾನದಲ್ಲಿ ಅದು ಪ್ರತಿಫಲಿಸುತ್ತಿಲ್ಲ. ಇದರಿಂದ ರೈಲ್ವೆ ಯೋಜನೆಗಳ ಅನುಷ್ಠಾನ ವಿಪರೀತ ವಿಳಂಬವಾಗುತ್ತಿದೆ ಎನ್ನುತ್ತವೆ ಮೂಲಸೌಲಭ್ಯ ಇಲಾಖೆ ಮೂಲಗಳು.
ವೆಚ್ಚ ಹಂಚಿಕೆ ಯೋಜನೆಗಳಾದ ಕಾರಣ ರೈಲ್ವೆ ಮಂಡಳಿ ಮೀಸಲಿಟ್ಟಷ್ಟೇ ಹಣವನ್ನು ರಾಜ್ಯ ಸರ್ಕಾರವೂ ಮೀಸಲಿಡಬೇಕು. ಇದು ನಿಯಮ. ಆದರೆ, ಬಹುತೇಕ ಸಂದರ್ಭಗಳಲ್ಲಿ ರೈಲ್ವೆಗಿಂತ ಹೆಚ್ಚು ಹಣವನ್ನು ರಾಜ್ಯ ಸರ್ಕಾರವೇ ಮೀಸಲಿಟ್ಟಿರುವುದು ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.
ರಾಮನಗರ- ಮೈಸೂರು ಜೋಡಿ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ 80 ಕೋಟಿ ರೂಪಾಯಿ ಕೊಡುವ ಭರವಸೆ ನೀಡಿದ್ದರೆ, ರೈಲ್ವೆ ಮಂಡಳಿ ಕೇವಲ 40 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಹಾಸನ- ಬೆಂಗಳೂರು ಮಾರ್ಗಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ತೆಗೆದಿರಿಸಿದ್ದರೆ, ರೈಲ್ವೆ ಮಂಡಳಿ ಕೇವಲ 30 ಕೋಟಿ ರೂಪಾಯಿ ಮೀಸಲಿಟ್ಟಿದೆ. ಗದಗ- ವಾಡಿ, ಶ್ರೀನಿವಾಸಪುರ- ಮದನಪಲ್ಲಿ ಹಾಗೂ ಕೋಲಾರದ ಕೋಚ್ ಫ್ಯಾಕ್ಟರಿ ಸಲುವಾಗಿ ರೈಲ್ವೆ ಒಂದು ಪೈಸೆಯನ್ನೂ ಹಂಚಿಕೆ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ ಈ ಮೂರು ಯೋಜನೆಗಳಿಗೂ ಒಟ್ಟಾಗಿ 20 ಕೋಟಿ ರೂಪಾಯಿ ತೆಗೆದಿರಿಸಿದೆ. ತುಮಕೂರು- ರಾಯದುರ್ಗ ಯೋಜನೆಗೆ ರೈಲ್ವೆಯೇ 25 ಕೋಟಿ ರೂಪಾಯಿ ಮೀಸಲಿಟ್ಟರೆ, ರಾಜ್ಯ ಸರ್ಕಾರ ಅದಕ್ಕೆ 10 ಕೋಟಿ ರೂಪಾಯಿ ಹಂಚಿಕೆ ಮಾಡಿದ್ದು, ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ಹೇಳಿದೆ.
ಪ್ರಸಕ್ತ ಸಾಲಿಗೆ ಮೀಸಲಿಟ್ಟ ಒಟ್ಟು 273 ಕೋಟಿ ರೂಪಾಯಿಯಲ್ಲಿ ಸುಮಾರು 12 ಕೋಟಿ ರೂಪಾಯಿಯನ್ನು ಈಗಾಗಲೇ ಪೂರ್ಣಗೊಂಡ ಯೋಜನೆಗಳಿಗೆ (ಶಿವಮೊಗ್ಗ-ತಾಳಗುಪ್ಪ, ಕೆಂಗೇರಿ- ರಾಮನಗರ) ಹಂಚಿಕೆ ಮಾಡಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಸಿಗದ ಬೆಂಗಳೂರು- ಸತ್ಯಮಂಗಲ ಯೋಜನೆಗೆ ಎರಡು ಕೋಟಿ ರೂಪಾಯಿ ಹಾಗೂ ವೆಚ್ಚ ಹಂಚಿಕೆ ಒಪ್ಪಂದದಲ್ಲಿ ಇಲ್ಲದ ಬೆಂಗಳೂರು- ಮಾರಿಕುಪ್ಪಂ ಯೋಜನೆಗೆ ಒಂದು ಕೋಟಿ ರೂಪಾಯಿ ರೈಲ್ವೆ ಮಂಡಳಿ ಮೀಸಲಿಟ್ಟಿದೆ. ಈ ನಾಲ್ಕು ಯೋಜನೆಗಳಿಗೂ ರಾಜ್ಯ ಸರ್ಕಾರ ಹಣ ನೀಡಿಲ್ಲ.
ಈ ಹಿಂದಿನ ವರ್ಷಗಳಲ್ಲಿಯೂ ರಾಜ್ಯ ಸರ್ಕಾರವೇ ಹೆಚ್ಚು ಹೆಚ್ಚು ಹಣವನ್ನು ಮೀಸಲಿಟ್ಟಿತ್ತು. ರಾಜ್ಯ ಸರ್ಕಾರ ಮೀಸಲಿಡುವಷ್ಟು ಹಣವನ್ನಾದರೂ ಕೊಡಿ ಎನ್ನುವ ಬೇಡಿಕೆಗೆ ರೈಲ್ವೆ ಕಡೆಯಿಂದ ಇನ್ನೂ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.
2010-11ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರೈಲ್ವೆಗಿಂತ ಕಡಿಮೆ ಹಣ ಮೀಸಲಿಟ್ಟಿತ್ತು. ಆದರೆ, ರೈಲ್ವೆ ಹೆಚ್ಚು ಹಣ ಕೊಡುತ್ತಿದೆ ಎಂಬ ಕಾರಣಕ್ಕೆ ಆ ವರ್ಷದಲ್ಲಿ ಮೀಸಲಿಟ್ಟಿದ್ದಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಲಾಯಿತು.
ಅಂದರೆ, 195 ಕೋಟಿ ರೂಪಾಯಿ ಮೀಸಲಿಟ್ಟಿದರೆ, ಖರ್ಚು ಮಾಡಿದ್ದು 211 ಕೋಟಿ ರೂಪಾಯಿ. ಆದರೆ, ರೈಲ್ವೆ ಮೀಸಲಿಟ್ಟಿದ್ದು 238 ಕೋಟಿ ರೂಪಾಯಿ, ಖರ್ಚು ಮಾಡಿದ್ದು ಕೇವಲ 206 ಕೋಟಿ ರೂಪಾಯಿ.
2011-12ನೇ ಸಾಲಿನಲ್ಲಿಯೂ ಇದು ಪುನರಾವರ್ತನೆಯಾಯಿತು. ರಾಜ್ಯ ಸರ್ಕಾರ 314 ಕೋಟಿ ರೂಪಾಯಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿತ್ತು. ಅಂತಿಮವಾಗಿ ಖರ್ಚು ಮಾಡಿದ್ದು 370 ಕೋಟಿ ರೂಪಾಯಿ! ಆದರೆ, ರೈಲ್ವೆ ಈ ಕುರಿತು ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ರೈಲ್ವೆ ಕಡೆಯಿಂದ ಬಿಡುಗಡೆಯಾದ 244 ಕೋಟಿ ರೂಪಾಯಿಯಲ್ಲಿ ಖರ್ಚು ಮಾಡಿದ್ದು 242 ಕೋಟಿ ರೂಪಾಯಿ. ಅದರಲ್ಲೂ ಸ್ವಲ್ಪ ಉಳಿಸಿ, ಯೋಜನೆಗಳು ಕುಂಟುತ್ತಾ ಸಾಗುವಂತೆ ಮಾಡಿದೆ ರೈಲ್ವೆ ಮಂಡಳಿ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಆಕ್ಷೇಪ ಎತ್ತುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.