ADVERTISEMENT

ರೈಲ್ವೆ ಸ್ಟಾಫ್‌ ನರ್ಸ್‌ ಸಂದರ್ಶನಕ್ಕೆ ನೂಕುನುಗ್ಗಲು

ವಿವಿಧ ರಾಜ್ಯಗಳಿಂದ ಬಂದಿದ್ದ ಆಕಾಂಕ್ಷಿಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಕೇಂದ್ರ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಹುದ್ದೆಗೆ ಮಂಗಳವಾರ ಕರೆದಿದ್ದ ಸಂದರ್ಶನಕ್ಕೆ ಬಂದಿದ್ದ ಅಭ್ಯರ್ಥಿಗಳು
ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಕೇಂದ್ರ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಹುದ್ದೆಗೆ ಮಂಗಳವಾರ ಕರೆದಿದ್ದ ಸಂದರ್ಶನಕ್ಕೆ ಬಂದಿದ್ದ ಅಭ್ಯರ್ಥಿಗಳು   

ಹುಬ್ಬಳ್ಳಿ: ಇಲ್ಲಿನ ನೈರುತ್ಯ ರೈಲ್ವೆ ಕೇಂದ್ರೀಯ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಸ್ಟಾಫ್ ನರ್ಸ್‌ ಹುದ್ದೆಯ ಸಂದರ್ಶನಕ್ಕೆ, ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಂದಿದ್ದರಿಂದ ಭಾರೀ ನೂಕುನುಗ್ಗಲು ಉಂಟಾಗಿತ್ತು.

ಇದರಿಂದ ಕೆಲ ಹೊತ್ತು ಆಸ್ಪತ್ರೆ ಆವರಣದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ರೈಲ್ವೆ ಪೊಲೀಸರು ಕೂಡಲೇ ಪರಿಸ್ಥಿತಿ ನಿಯಂತ್ರಿಸಿದರು.

ರಾಜ್ಯದ ವಿವಿಧೆಡೆಯಿಂದ ಹಾಗೂ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 2,325 ಮಂದಿ ಅಭ್ಯರ್ಥಿಗಳು ಆಸ್ಪತ್ರೆ ಎದುರು ಜಮಾಯಿಸಿದ್ದರು. ದೂರದ ಊರುಗಳಿಂದ ಬಂದಿದ್ದ ಅಭ್ಯರ್ಥಿಗಳು ಬೆಳಿಗ್ಗೆ 6 ಗಂಟೆಯಿಂದಲೇ ಕಾದು ಕುಳಿತಿದ್ದರು.

ADVERTISEMENT

ತಡವಾಗಿ ಆರಂಭ: ‘20 ಖಾಲಿ ಹುದ್ದೆಗಳಿಗೆ ಬೆಳಿಗ್ಗೆ 10ಕ್ಕೆ ಸಂದರ್ಶನ ಕರೆಯಲಾಗಿತ್ತು. ಆದರೆ, 11 ಗಂಟೆಯಾದರೂ ಆರಂಭವಾಗಲಿಲ್ಲ. ಹಾಗಾಗಿ ಬೆಳಿಗ್ಗೆಯಿಂದ ಕಾದು ಹೈರಾಣಾಗಿದ್ದ ಅಭ್ಯರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂದರ್ಶನದ ಅವಧಿ 9 ದಿನಗಳಿಗೆ ವಿಸ್ತರಣೆ: ಸ್ಟಾಫ್‌ ನರ್ಸ್‌, ಫಾರ್ಮಾಸಿಸ್ಟ್, ಆರೋಗ್ಯ ಮತ್ತು ಮಲೇರಿಯಾ ಇನ್‌ಸ್ಪೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮೂರು ದಿನ ಸಂದರ್ಶನ ಕರೆಯಲಾಗಿತ್ತು.

ಅದರಲ್ಲಿ ಸ್ಟಾಫ್‌ ನರ್ಸ್‌ ಹುದ್ದೆಗೆ ಮಂಗಳವಾರ ಸಂದರ್ಶನ ಕರೆಯಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಂದಿರುವುದರಿಂದ ಒಂಬತ್ತು ದಿನಗಳ ಕಾಲ ಸಂದರ್ಶನ ನಡೆಸಲಾಗುವುದು ಎಂದು  ನೈರುತ್ಯ ರೈಲ್ವೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.