ADVERTISEMENT

ಲಿಂಗಾಯತರ ತಂಟೆಗೆ ಬರಬೇಡಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಎಸ್‌.ಎಂ. ಜಾಮದಾರ
ಎಸ್‌.ಎಂ. ಜಾಮದಾರ   

ಬೆಂಗಳೂರು: ‘ಪಂಚಾಚಾರ್ಯರು ತಾವು ವೀರಶೈವರೊ, ಲಿಂಗಾಯತರೊ ಅಥವಾ ದಲಿತರೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಆಗ್ರಹಿಸಿದರು.

ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈವರೆಗೂ ಲಿಂಗಾಯತರ ಜೊತೆ ಸೇರಿಕೊಂಡಿದ್ದ  ಜಂಗಮರು ಒಂದೆಡೆ ಬೇಡ ಜಂಗಮ ಎಂದು ಹೇಳಿಕೊಂಡು ಪರಿಶಿಷ್ಟ ಜಾತಿಯ ಸವಲತ್ತು ಪಡೆಯಲು ಹಾತೊರೆಯುತ್ತಾರೆ. ಮತ್ತೊಂದೆಡೆ, ವೀರಶೈವರು ಎನ್ನುತ್ತಾ ಹಿಂದೂ ಧರ್ಮದ ಭಾಗ ಎಂದು ಹೇಳುತ್ತಾರೆ.  ಲಿಂಗಾಯತರಿಗೂ ತೊಡಕಾಗಿ ಅವರನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತಾರೆ. ಇನ್ನು ಮುಂದೆ ಇವರು ಇದನ್ನೆಲ್ಲಾ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಅಖಿಲ ಭಾರತ ವೀರಶೈವ ಮಹಾಸಭಾಕ್ಕೂ ಲಿಂಗಾಯತರಿಗೂ ಇನ್ನು ಮುಂದೆ ಯಾವುದೇ ಸಂಬಂಧವಿಲ್ಲ. ಬಸವ ತತ್ವ ಒಪ್ಪುವ ವೀರಶೈವರು ಅಥವಾ ಬೇರೆ ಯಾರನ್ನೇ ಆದರೂ ಲಿಂಗಾಯತ ಧರ್ಮ ಮುಕ್ತವಾಗಿ ಸ್ವಾಗತಿಸುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ 300 ವರ್ಷಗಳ ಚಳವಳಿ 2018ರಲ್ಲಿ ಸಾಕಾರಗೊಂಡಿದೆ. ಆದ್ದರಿಂದ ಇನ್ನು ಮುಂದೆ ಪಂಚಾಚಾರ್ಯರು ಲಿಂಗಾಯತರ ತಂಟೆಗೆ ಬರಬಾರದು’ ಎಂದು ತಾಕೀತು ಮಾಡಿದರು.

ADVERTISEMENT

‘ವೀರಶೈವ ಮಹಾಸಭಾದಲ್ಲಿರುವ ಲಿಂಗಾಯತರು ಮತ್ತು ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೊರಬರಬೇಕು. ನಮಗೀಗ ವೀರಶೈವ ಮಹಾಸಭಾ ಪ್ರಾತಿನಿಧಿಕ ಸಂಸ್ಥೆಯಲ್ಲ. ಜಾಗತಿಕ ಲಿಂಗಾಯತ ಮಹಾಸಭಾವೇ ಪ್ರಾತಿನಿಧಿಕ ಸಂಸ್ಥೆ. ಇದನ್ನು ಎಲ್ಲ ಲಿಂಗಾಯತರೂ ಮನಗಾಣಬೇಕು’ ಎಂದರು.

‘ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಿರುವ ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಒಂದು ವೇಳೆ ಒಪ್ಪಿಕೊಳ್ಳದೇ ಹೋದರೆ ಉಗ್ರ ಹೋರಾಟ ರೂಪಿಸಲಾಗುವುದು. ಜೈನರನ್ನೇ  ಪಕ್ಷದ ಅಧ್ಯಕ್ಷರನ್ನಾಗಿಸಿಕೊಂಡಿರುವ ನಿಮಗೆ ಲಿಂಗಾಯತರ ಬಗ್ಗೆ ಏಕೆ ಆತಂಕ’ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದರು.

‘2013ರಲ್ಲಿ ಕೇಂದ್ರ ಸರ್ಕಾರ ವೀರಶೈವ ಮಹಾಸಭಾದ ಮನವಿ ತಿರಸ್ಕರಿಸಿದೆ’ ಎಂಬುದು ಅರ್ಧಸತ್ಯ ಎಂದ ಅವರು, ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರಾದ ಡಾ.ಸಿ.ಜಯ್ಯಣ್ಣ, ಜಿ.ಬಿ.ಪಾಟೀಲ, ಕೊಂಡಜ್ಜಿ ಮೋಹನ್‌, ಪ್ರಭಣ್ಣ ಹುಣಸಿಕಟ್ಟಿ, ಶ್ರೀಕಾಂತ ಸ್ವಾಮಿ, ಪರಮೇಶ್ವರಪ್ಪ, ಕೆ.ಆರ್.ಮಂಗಳಾ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ ಮತ್ತು ಭಾಲ್ಕಿ ಹಿರೇಮಠದ ಗುರುಬಸವ ಸ್ವಾಮೀಜಿ ಇದ್ದರು.

‘ಲಿಂಗಾಯತರು ಅಹಿಂಸಾವಾದಿಗಳು’

‘ಪಂಚಾಚಾರ್ಯರು ಬಸವ ತತ್ವ ಒಪ್ಪುವುದಿಲ್ಲ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಅವರು ನಮಗಿಂತಲೂ ಭಿನ್ನವಾದವರು. ಅವರು ಭಿಕ್ಷೆ ಬೇಡಿದರೆ, ಲಿಂಗಾಯತರು ಸತ್ಯ, ಶುದ್ಧ, ಕಾಯಕ ದಾಸೋಹದಲ್ಲಿ ನಂಬಿಕೆ ಉಳ್ಳವರು’ ಎಂದು ಜಾಮದಾರ ವಿವರಿಸಿದರು.

‘ನಾವು ವೀರಶೈವರ ಜೊತೆ ಕೂಡಿ ಹೋಗುವುದಿಲ್ಲ. ನಾವೆಂದೂ ಹಿಂದೂ ವಿರೋಧಿಗಳಲ್ಲ. ಜೈನರಿಗಿಂತಲೂ ಮಿಗಿಲಾದ ಅಹಿಂಸಾವಾದಿಗಳು’ ಎಂದರು.

‘ಬಿಎಸ್‌ವೈ ಸಿಎಂ ಆಗದಂತೆ ತಡೆಯಲು ಜಾತಿ ವಿವಾದ’

ಕೊಪ್ಪಳ: ‘ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎಂಬ ಒಂದೇ ಉದ್ದೇಶದಿಂದ ರಾಜ್ಯದಲ್ಲಿ ಜಾತಿ ವಿವಾದ ಹುಟ್ಟುಹಾಕಲಾಗಿದೆ' ಎಂದು ಸಂಸದ ಪ್ರಹ್ಲಾದ್‌ ಜೋಷಿ ಆರೋಪಿಸಿದರು.

‘ಕಾಂಗ್ರೆಸ್‌ನವರಿಗೆ ಏನಿದ್ದರೂ ಎರಡೆರಡು ಇಟ್ಟುಕೊಂಡು ಅಭ್ಯಾಸ. ಎರಡನೆಯವಳ ಮನೆಯಿಂದ ಕತ್ತೆ ಮೂತ್ರ ತಂದು ಬಡಿಸಿದರೂ ರುಚಿಯಾದ ಸಾಂಬಾರು ಎಂದೇ ಭಾವಿಸಿ ಸವಿಯುತ್ತಾರೆ' ಎಂದು ಶನಿವಾರ ಇಲ್ಲಿ ಸಮಾರಂಭದಲ್ಲಿ ಟೀಕಿಸಿದರು.

‘ಇಲ್ಲಿ ಅಯ್ಯನ ಅಕ್ಕಿ (ಅನ್ನಭಾಗ್ಯದ ಅಕ್ಕಿ) ತೆಗೆದುಕೊಂಡು ಹೋಗಿ ತಮಿಳುನಾಡಿನಲ್ಲಿ ಅಮ್ಮನ ಇಡ್ಲಿ ಮಾಡುತ್ತಾರೆ. ಸಮಾಜ ಕಲ್ಯಾಣ ಸಚಿವರಂತೂ ಹಾಸಿಗೆ ದಿಂಬಲ್ಲೂ ಸಾಕಷ್ಟು ಹೊಡೆದರು' ಎಂದು ಕುಟುಕಿದರು.

ಒಗ್ಗಟ್ಟಿನಿಂದ ಹೋಗುವ ನಿರ್ಣಯವೇ ಸೂಕ್ತ: ಮಲ್ಲಿಕಾರ್ಜುನ

ಬಾಗಲಕೋಟೆ: ‘ವೀರಶೈವರು, ಲಿಂಗಾಯತರು ಒಗ್ಗಟ್ಟಿನಿಂದ ಹೋಗಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೈಗೊಂಡಿರುವ ನಿರ್ಣಯ ಸೂಕ್ತವಾಗಿದೆ’ ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿಲ್ಲ. ಆ ವಿಚಾರದಲ್ಲಿ ಮುಂದಿನ ನಡೆಯ ಬಗ್ಗೆ ವೀರಶೈವ ಮಹಾಸಭಾದವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

ವೀರಶೈವ ಮಹಾಸಭಾಕ್ಕೂ ಲಿಂಗಾಯತರಿಗೂ ಸಂಬಂಧವಿಲ್ಲ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ, ‘ಒಂದು ಮನೆಯಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರು ಮನೆ ಉದ್ಧಾರ ಮಾಡಿದರೆ, ಇನ್ನೂ ಕೆಲವರು ಹಾಳು ಮಾಡುವವರು ಇರುತ್ತಾರೆ. ಅವರ ಬಗ್ಗೆ ಮುಂದೆ ನೋಡೋಣ’ ಎಂದರು.

‘ಸಮಾಜದ ವಿಚಾರವನ್ನು ರಾಜಕಾರಣಕ್ಕೆ ಎಳೆದು ತರುವುದು ಬೇಡ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇತಿಹಾಸದ ಪುಟಕ್ಕೆ ವೀರಶೈವ ಮಹಾಸಭಾ’

ವಿಜಯಪುರ: ‘ವೀರಶೈವ ಮಹಾಸಭಾದ ಸದಸ್ಯರು, ಲಿಂಗಾಯತ ಮಹಾಸಭಾಕ್ಕೆ ಸೇರ್ಪಡೆಯಾಗುವ ಪ್ರಕ್ರಿಯೆ ಬಿರುಸಿನಿಂದ ನಡೆದಿದ್ದು, ವೀರಶೈವ ಮಹಾಸಭಾ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ’ ಎಂದು ಸಚಿವ ಎಂ.ಬಿ.ಪಾಟೀಲ ಶನಿವಾರ ಇಲ್ಲಿ ಹೇಳಿದರು.

‘ಸಂಶೋಧಕ ಚಿದಾನಂದ ಮೂರ್ತಿ ಈ ಹಿಂದೆ ವೀರಶೈವ ಧರ್ಮ ಗ್ರಂಥದ ವಿರುದ್ಧ ಮಾತನಾಡಿದ್ದರು. ಇದೀಗ ವೀರಶೈವರ ಪರವೇ ಮಾತನಾಡುತ್ತಿದ್ದಾರೆ. ಇದರ ಜತೆಗೆ ವೀರಶೈವ ಧರ್ಮ ಗುರುಗಳ ಬಗ್ಗೆ ಯಾರೂ ಮಾತನಾಡಬಾರದು ಎನ್ನುತ್ತಿದ್ದಾರೆ. ಇದ್ಯಾವ ಲೆಕ್ಕ’ ಎಂದು ಸಚಿವ ಪಾಟೀಲ ಪ್ರಶ್ನಿಸಿದರು.

ದಿಕ್ಕು ತಪ್ಪಿಸಿದರೆ ವೀರಶೈವ ಮಹಾಸಭಾಕ್ಕೆ ಬಹಿಷ್ಕಾರ

ಬೆಂಗಳೂರು: ‘ಅಖಿಲ ಭಾರತ ವೀರಶೈವ ಮಹಾಸಭಾವು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಶಿಫಾರಸನ್ನು ವಿರೋಧಿಸಿರುವುದು ಅರ್ಥಹೀನ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕಿಡಿಕಾರಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಮುಂದುವರಿಸಿದರೆ ವೀರಶೈವ ಮಹಾಸಭಾವನ್ನೇ ಬಹಷ್ಕರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಆರಂಭದಲ್ಲಿ ಸ್ವಾಗತಿಸಿದ್ದರು. ರಂಭಾಪುರಿ ಸ್ವಾಮೀಜಿ ಮತ್ತು ಬಿ.ಎಸ್.ಯಡಿಯೂರಪ್ಪ ಕಿವಿಯೂದಿದ ಬಳಿಕ ಸರ್ಕಾರದ ನಿರ್ಧಾರದ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ. ಇದು ಅಪರಾಧವೇ ಸರಿ ಎಂದು ದೂಷಿಸಿದರು.

‘ಕೇಂದ್ರ ಸಚಿವ ಅನಂತಕುಮಾರ್ ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ, ಪ್ರಧಾನಿ ಮೋದಿ ಒಪ್ಪುವ ನಂಬಿಕೆ ಇದೆ. ಶಿಘ್ರದಲ್ಲೇ ಪ್ರಧಾನಿ ಭೇಟಿ ಮಾಡುತ್ತೇವೆ. ಕೇಂದ್ರ ಈ ಶಿಫಾರಸು ಒಪ್ಪಿದರೆ ಲಿಂಗಾಯತ ಸಮಾಜ ಹಾಗೂ ಅದರ 99 ಉಪ ಪಂಗಡಗಳಿಗೂ ಅಲ್ಪಸಂಖ್ಯಾತ ಸೌಲಭ್ಯ ಸಿಗುತ್ತದೆ. ಯಾವುದೇ ಜಾತಿಯವರಿಗೆ ದೀಕ್ಷೆ ಕೊಟ್ಟು ಲಿಂಗಾಯತಕ್ಕೆ ಸೇರಿಸಿಕೊಳ್ಳುತ್ತೇವೆ. ವಿವಾಹ ಸಂಬಂಧ ಬೆಳೆಸುತ್ತೇವೆ’ ಎಂದರು.

‘ಬಸನವನ ಬಾಗೇವಾಡಿಯಲ್ಲಿ ಜಂಗಮರ ಸಮ್ಮೇಳನ ನಡೆಸಲು ಆರ್‌ಎಸ್‌ಎಸ್‌ ಕರೆ ನೀಡಿ, ಲಿಂಗಾಯತ ಸಮಾಜದಿಂದ ಜಂಗಮರನ್ನು ಬೇರ್ಪಡಿಸುವ ತಂತ್ರ ಮಾಡುತ್ತಿದೆ. ಇದು ಖಂಡನೀಯ’ ಎಂದರು.

‘ವೀರಶೈವರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲವೆಂದು ಮಹಾಸಭಾದ ರಾಜ್ಯ ಅಧ್ಯಕ್ಷ ಎನ್.ತಿಪ್ಪಣ್ಣ ಹೇಳಿಕೆ ನೀಡಿದ್ದಾರೆ. ಇದು ಹಾಸ್ಯಾಸ್ಪದ. ಲಿಂಗಾಯತರು ಕಾಂಗ್ರೆಸ್‌ ಬೆಂಬಲಿಸುವ ಸಾಧ್ಯತೆ ಇದೆ’ ಎಂದರು.

* ಹಾಲು ಮತ್ತು ನೀರು ಈಗ ಬೇರೆ ಬೇರೆ ಆಗಿದೆ. ನಮ್ಮ ಉದ್ದೇಶ ಈಡೇರಿದೆ. ಲಿಂಗಾಯತರು ಇನ್ನು ಮುಂದೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.

–ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.