ADVERTISEMENT

ವರುಣಾ ಕ್ಷೇತ್ರದ ದಲಿತರ ಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಮೈಸೂರಿನಲ್ಲಿ ಮಂಗಳವಾರ ದಲಿತರ ಸಭೆಯಲ್ಲಿ ಗದ್ದಲ ಎಬ್ಬಿಸಿದವರನ್ನು ಯತೀಂದ್ರ ಸಮಾಧಾನಪಡಿಸಲು ಪ್ರಯತ್ನಿಸಿದರು
ಮೈಸೂರಿನಲ್ಲಿ ಮಂಗಳವಾರ ದಲಿತರ ಸಭೆಯಲ್ಲಿ ಗದ್ದಲ ಎಬ್ಬಿಸಿದವರನ್ನು ಯತೀಂದ್ರ ಸಮಾಧಾನಪಡಿಸಲು ಪ್ರಯತ್ನಿಸಿದರು   

ಮೈಸೂರು: ವರುಣಾ ಕ್ಷೇತ್ರದ ದಲಿತ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಉಂಟಾಯಿತು. ಡಾ. ಯತೀಂದ್ರ ಸಿದ್ದರಾಮಯ್ಯ ಸಭೆಯ ನೇತೃತ್ವ ವಹಿಸಿದ್ದರು.

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರು ನಗರದ ಹೋಟೆಲ್‌ನಲ್ಲಿ ಮಂಗಳವಾರ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಮಾತನಾಡುವ ವೇಳೆ ದಲಿತ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪು ಉಂಟಾಗುತ್ತದೆ. ನಮಗೆ ನೆರವಿನ ಅಗತ್ಯವಿದ್ದಾಗ ನಿಮ್ಮ ಮನೆ ಮುಂದೆ ಬಂದರೆ ನೀವು ಯಾರೂ ಕಾಣಿಸಿಕೊಳ್ಳುವುದಿಲ್ಲ. ಇಷ್ಟು ದಿನಗಳ ಕಾಲ ನಮ್ಮನ್ನು ದೂರವಿಟ್ಟು, ಚುನಾವಣೆ ಬಂದಿದೆ ಎಂದು ಹತ್ತಿರ ಕರೆಯುತ್ತಿದ್ದೀರಿ. ದಲಿತರಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡದೆ ಈಗ ಮತ ಹಾಕುವಂತೆ ಕೇಳುತ್ತಿದ್ದೀರಿ. ವೋಟು ಹಾಕಲಷ್ಟೇ ನಾವು ಬೇಕೇ?’ ಎಂದು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಾಲ ನೀಡುವಾಗ ದಲಿತರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಕೊಟ್ಟವರಿಗೇ ಮತ್ತೆ ಮತ್ತೆ ಸಾಲ ದೊರೆಯುತ್ತದೆ. ಕೆಲವರು ಎಷ್ಟೇ ಸಲ ಅರ್ಜಿ ಹಾಕಿದರೂ ಸಾಲ ದೊರೆಯುವುದಿಲ್ಲ ಎಂದು ವೇದಿಕೆ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಿಗೆ ಮಾತ್ರವಲ್ಲ, ತಮಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದವರು ಪಟ್ಟುಹಿಡಿದರು. ಯತೀಂದ್ರ ಹಾಗೂ ಇತರ ಮುಖಂಡರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಗದ್ದಲ ಕಡಿಮೆಯಾಗಲಿಲ್ಲ. ಇದರಿಂದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.