ADVERTISEMENT

`ವರ್ಗಾವಣೆ ಕೇಳಿದರೆ ಅಮಾನತು'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಮೈಸೂರು: `ಒಂದು ವರ್ಷದವರೆಗೆ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ. ಇದ್ದ ಸ್ಥಳದಲ್ಲೇ ಚೆನ್ನಾಗಿ ಕೆಲಸ ಮಾಡಬೇಕು. ಅದು ಬಿಟ್ಟು ವರ್ಗಾವಣೆ ಬಯಸಿ ಬಂದರೆ, ಪ್ರಯತ್ನಪಟ್ಟರೆ ಅವರನ್ನು ಅಮಾನತು ಮಾಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು `ಆ. 31ಕ್ಕೆ ಅಧಿಕಾರಿಗಳ ವರ್ಗಾವಣೆ ಸ್ಥಗಿತಗೊಳಿಸಲಾಗಿದೆ. ವರ್ಷದವರೆಗೆ ವರ್ಗಾವಣೆ ಬಗ್ಗೆ ಅಧಿಕಾರಿಗಳು ಮಾತನಾಡುವಂತಿಲ್ಲ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು. ನಿಮ್ಮ ಬಳಿಗೆ ಬರುವ ಜನರ ಕಷ್ಟ-ಸುಖ ವಿಚಾರಿಸಿ ಸಮಸ್ಯೆ ಪರಿಹರಿಸಬೇಕು' ಎಂದು ಹೇಳಿದರು.  `ಪ್ರತಿ ಮೂರು ತಿಂಗಳಿಗೆ ಒಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು.

ಅಧಿಕಾರಿಗಳು ಸಭೆಗೆ ಗೈರುಹಾಜರಾಗಿರುವ ಬಗ್ಗೆ ಉಸ್ತುವಾರಿ ಸಚಿವರು ಗಮನಕ್ಕೆ ತಂದರೆ ಕೂಡಲೇ ಅಧಿಕಾರಿಯನ್ನು ಅಮಾನತು ಮಾಡಲಾಗುವುದು' ಎಂದು ಎಚ್ಚರಿಸಿದರು.

ಅಧಿಕಾರಿ ಅಮಾನತು: ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ಎಸ್‌ಟಿ ನಿಗಮದ ಜಿಲ್ಲಾ ಅಧಿಕಾರಿ ರಾಜು ಅವರನ್ನು ಅಮಾನತು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಸಿದ್ದರಾಮಯ್ಯ ಸೂಚಿಸಿದರು.

`ದಸರಾ ಕಾರ್ಯಕ್ರಮಗಳನ್ನು ತ್ವರಿತ ಗತಿಯಲ್ಲಿ ಮಾಡಬೇಕು. ವಿಳಂಬ ಮಾಡಬಾರದು. ಕಳಪೆ ಕಾಮಗಾರಿ ಮಾಡಿರುವುದು ಗಮನಕ್ಕೆ ಬಂದರೆ ಪಾಲಿಕೆ ಆಯುಕ್ತರು ಜವಾಬ್ದಾರಿಯಾಗುತ್ತಾರೆ. ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಲಾಗುವುದು' ಎಂದು ಎಚ್ಚರಿಸಿದರು.

ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಜನರಿಗೆ ಮುಟ್ಟಿಸಲಾಗುತ್ತಿಯೇ ಎಂಬುದರ ಕುರಿತು ಇಲಾಖಾವಾರು ಪ್ರಗತಿ ಪರಿಶೀಲಿಸಿದ ಸಿದ್ದರಾಮಯ್ಯ ಅಧಿಕಾರಿಗಳ ಧೋರಣೆ ಟೀಕಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.