ADVERTISEMENT

ವಾರದಲ್ಲಿ 8 ಉಪನಗರ ರೈಲು ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:52 IST
Last Updated 8 ಮಾರ್ಚ್ 2018, 19:52 IST
ವಾರದಲ್ಲಿ 8 ಉಪನಗರ ರೈಲು ಸೇರ್ಪಡೆ
ವಾರದಲ್ಲಿ 8 ಉಪನಗರ ರೈಲು ಸೇರ್ಪಡೆ   

ಬೆಂಗಳೂರು: ನಗರದಲ್ಲಿ 8 ಉಪನಗರ ರೈಲುಗಳ ಸಂಚಾರವನ್ನು ಒಂದು ವಾರದೊಳಗೆ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪನಗರ ರೈಲು ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಡ್ರೋನ್‌ ಸರ್ವೆ ಆರಂಭವಾಗಿದೆ. ಆರು ತಿಂಗಳಲ್ಲಿ ಸರ್ವೆ ಪೂರ್ಣಗೊಂಡು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಲಿದೆ ಎಂದು ತಿಳಿಸಿದರು.

‘ಉಪನಗರ ರೈಲು ಸಂಪರ್ಕ ಜಾಲ ಬಲಪಡಿಸಲು ಒತ್ತು ನೀಡಿದ್ದೇವೆ. ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಗುಪ್ತ ಮತ್ತು ಅವರ ತಂಡ ತ್ವರಿತವಾಗಿ ನೀಡಿದ ಕಾರ್ಯಸಾಧ್ಯತಾ ವರದಿ ಆಧರಿಸಿ, ಉಪನಗರ ರೈಲು ಯೋಜನೆ ವಿಸ್ತರಣೆಗೆ ₹12,000 ಕೋಟಿ ಅನುದಾನ ಮೀಸಲಿಟ್ಟಿದ್ದೆವು. ಈಗ ಹೆಚ್ಚುವರಿಯಾಗಿ ₹5,000 ಕೋಟಿ ಒದಗಿಸಿ ಯೋಜನಾ ಮೊತ್ತವನ್ನು ₹17,000 ಕೋಟಿಗೆ ಏರಿಸಿದ್ದೇವೆ’ ಎಂದರು.

ADVERTISEMENT

160 ಕಿ.ಮೀ. ಉಪನಗರ ರೈಲು ಮಾರ್ಗದಲ್ಲಿ 68 ಕಿ.ಮೀ. ಎತ್ತರಿಸಿದ ಮಾರ್ಗವೂ ಇರಲಿದೆ. ಅತ್ಯಾಧುನಿಕ ಲೋಕೊಮೊಟಿವ್‌ ಕೋಚ್‌ಗಳು ಮತ್ತು ಹವಾನಿಯಂತ್ರಿತ ಕೋಚ್‌ಗಳಲ್ಲೂ ಪ್ರಯಾಣಿಸುವ ಸೌಲಭ್ಯ ಸಿಗಲಿದೆ ಎಂದರು.

‘ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ) ನೀತಿ ಹೊರತಾಗಿಯೂ ಶೇ 50ರ ಅನುಪಾತದಲ್ಲಿ ಬಂಡವಾಳ ತೊಡಗಿಸಿ, ಯೋಜನೆ ಅನುಷ್ಠಾನಕ್ಕೆ ಭಾರತೀಯ ರೈಲ್ವೆ ಸಿದ್ಧವಿದೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೂ ತಂದಿದ್ದೇವೆ’ ಎಂದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ. ಅದರಲ್ಲೂ ನೈರುತ್ಯ ರೈಲ್ವೆ ಅಭಿವೃದ್ಧಿಗೆ ಹೆಚ್ಚಿಗೆ ಗಮನ ಹರಿಸಿದೆ. ಇದನ್ನು ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿಲ್ಲ. ದೇಶದಾದ್ಯಂತ ರೈಲ್ವೆ ಸಂಪರ್ಕ ಜಾಲ ಬೆಸೆಯುವುದು ನಮ್ಮ ಉದ್ದೇಶ. ಮೂಲಸೌಕರ್ಯ ಅಭಿವೃದ್ಧಿ, ಸುರಕ್ಷತೆ, ವಿದ್ಯುದೀಕರಣ, ಜೋಡಿ ಮಾರ್ಗ ನಿರ್ಮಾಣ, ರೈಲು ನಿಲ್ದಾಣಗಳ ಉನ್ನತೀಕರಣ, ರೈಲುಗಳ ವೇಗ ದ್ವಿಗುಣಗೊಳಿಸಲು ಕ್ರಮ ಕೈಗೊಂಡಿದ್ದೇವೆ’ ಎಂದರು.

‘ರಾಜ್ಯದಲ್ಲಿ ಪ್ರತಿ ವರ್ಷ 177 ಕಿ.ಮೀ ರೈಲು ಮಾರ್ಗ ವಿದ್ಯುದ್ದೀಕರಣಗೊಳಿಸಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ನೈರುತ್ಯ ರೈಲ್ವೆ ಮಾರ್ಗ ಸಂಪೂರ್ಣ ವಿದ್ಯುದೀಕರಣವಾಗಲಿದೆ. ಸುಮಾರು ₹75,000 ಕೋಟಿ ವೆಚ್ಚದಲ್ಲಿ ಜಗತ್ತಿನ ಅತಿದೊಡ್ಡ ರೈಲ್ವೆ ಸಿಗ್ನಲಿಂಗ್ ಯೋಜನೆ ರೂಪಿಸಿದ್ದೇವೆ. 2020ರ ವೇಳೆಗೆ ದೇಶದ ರೈಲ್ವೆಯ ಇಡೀ ಚಿತ್ರಣವೇ ಬದಲಾಗಲಿದೆ’ ಎಂದರು.

‘ನೂತನ ರೈಲ್ವೆ, ನೂತನ ಕರ್ನಾಟಕ’ ಕೈಪಿಡಿ ಬಿಡುಗಡೆ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗುರುವಾರ ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ 2014ರಿಂದ ಈವರೆಗೆ ನೈರುತ್ಯ ರೈಲ್ವೆ ಸಾಧಿಸಿರುವ ಪ್ರಗತಿಯ ಮಾಹಿತಿ ಒಳಗೊಂಡ ‘ನೂತನ ರೈಲ್ವೆ, ನೂತನ ಕರ್ನಾಟಕ’ ಕೈಪಿಡಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಇಲಾಖೆ ನಗರದಲ್ಲಿ ಆರಂಭಿಸಿರುವ 10 ಟನ್‌ ಸಾಮರ್ಥ್ಯದ ಹೊಸ ಯಾಂತ್ರೀಕೃತ ಬಟ್ಟೆ ಒಗೆಯುವ ಘಟಕವನ್ನು (ಮೆಕ್ಯಾನೈಸ್ಡ್‌ ಲಾಂಡ್ರಿ) ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.