ADVERTISEMENT

ವಾರದೊಳಗೆ ಕೋಳಿ ಫಾರಂ ತೆರವಿಗೆ ಸೂಚನೆ

ಗ್ರಾಮ ಪಂಚಾಯ್ತಿ ಸಭೆಯಲ್ಲಿ ನಿರ್ಣಯ; ನೋಟಿಸ್ ಜಾರಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ದಾವಣಗೆರೆ: ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವ ದಾವಣಗೆರೆ ತಾಲ್ಲೂಕಿನ ಬೆಳವನೂರು ಗ್ರಾಮದಲ್ಲಿರುವ ಕೋಳಿ ಫಾರಂಗಳನ್ನು ವಾರದೊಳಗೆ ತೆರವುಗೊಳಿಸಬೇಕು ಎಂದು ಸೂಚಿಸಿ ಮಾಲೀಕರಿಗೆ ಗ್ರಾಮ ಪಂಚಾಯ್ತಿ ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.

ಈಚೆಗೆ ಬೆಳವನೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಬೆಳವನೂರು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ದೂರಿನ ಅನ್ವಯ ಜಿಲ್ಲಾಧಿಕಾರಿ, ಆಗಸ್ಟ್ 16ರಂದು ಸ್ಥಳ ಪರಿಶೀಲನೆ ನಡೆಸಿ, ಶ್ರೀಶೈಲ ಕೋಳಿ ಫಾರಂ, ಶ್ರೀರಾಮ ಕೋಳಿ ಫಾರಂ, ವೆಂಕಟೇಶ್ವರ ಕೋಳಿ ಫಾರಂ ಹಾಗೂ ಲಕ್ಷ್ಮಿ ವೆಂಕಟೇಶ್ವರ ಕೋಳಿ ಫಾರಂಗಳನ್ನು ಜನವಸತಿಯಿಲ್ಲದ ಪ್ರದೇಶಕ್ಕೆ ಮೂರು ತಿಂಗಳ ಒಳಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿದ್ದರು.

ಜಿಲ್ಲಾಧಿಕಾರಿ ಆದೇಶ ತಿಳಿದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, `ಈಗಾಗಲೇ ನೊಣಗಳ ಹಾವಳಿಯಿಂದ ರೋಸಿ ಹೋಗಿದ್ದೇವೆ. ಗ್ರಾಮದಲ್ಲಿ ವಾಸಿಸುವುದು ತೊಂದರೆ ಆಗಿರುವುದರಿಂದ ಶೀಘ್ರವೇ ಕೋಳಿ ಫಾರಂಗಳನ್ನು ಸ್ಥಳಾಂತರಿಸಬೇಕು ಎಂದು ಆ.30ರಂದು ಪಂಚಾಯ್ತಿಗೆ ಮತ್ತೊಂದು ದೂರು ಸಲ್ಲಿಸಿದ್ದರು. ನಾಲ್ಕು ಕೋಳಿ ಫಾರಂಗಳಿಂದ ಮಾತ್ರವಲ್ಲ, ಪಂಚಾಯ್ತಿ ವ್ಯಾಪ್ತಿಗೆ ಬರುವ ಎಲ್ಲ ಏಳು ಕೋಳಿ ಫಾರಂಗಳಿಂದ ತೊಂದರೆ ಉಂಟಾಗಿದೆ. ಹೀಗಾಗಿ, ಈ ಎಲ್ಲ ಫಾರಂ ಸ್ಥಳಾಂತರಿಸಬೇಕು ಎಂದು ಸಭೆ ನಿರ್ಣಯಿಸಿತು.

ಅನಧಿಕೃತವಾಗಿ ಕೋಳಿ ಫಾರಂ ಕಟ್ಟಡ ಕಟ್ಟಲಾಗಿದೆ. ಜೀವಕ್ಕೆ ಅಪಾಯ ಉಂಟುಮಾಡುವ ನಿರ್ಮಾಣ ಕೆಡವಿ ಹಾಕಲು ಪಂಚಾಯ್ತಿಗೆ ಅಧಿಕಾರವಿದೆ. ಈ ತಿಳಿವಳಿಕೆ ಪತ್ರ ತಲುಪಿದ ಏಳು ದಿನಗಳೊಳಗೆ ಕೋಳಿ ಫಾರಂಗಳನ್ನು ಸಂಪೂರ್ಣ ತೆರವುಗೊಳಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದನ್ನು ಪಾಲಿಸದಿದ್ದಲ್ಲಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ಕೋಳಿ ಫಾರಂಗಳನ್ನು ಮುಚ್ಚಿಸಲು ಜೂನ್ 26ರಂದು ನಡೆದ ಗ್ರಾಮ ಸಭೆಯಲ್ಲಿಯೂ ತೀರ್ಮಾನಿಸಲಾಗಿತ್ತು ಎಂದು ಪಂಚಾಯ್ತಿ ಅಧ್ಯಕ್ಷೆ ಬಿ.ವಿ.ಮಂಗಳಾ, ಪಿಡಿಒ ಐ.ಬಿ.ಸುರೇಖಾ ತಿಳಿಸಿದ್ದಾರೆ.

ಕೋಳಿ ಫಾರಂಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಆಗಸ್ಟ್ 27ರಂದು `ಪ್ರಜಾವಾಣಿ'ಯಲ್ಲಿ ವರದಿ ಪ್ರಕಟವಾಗಿತ್ತು. ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್. ಕೆ.ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT