ADVERTISEMENT

ವಿದ್ಯುತ್: ಯೂನಿಟ್‌ಗೆ 70 ಪೈಸೆ ಹೆಚ್ಚಳಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಬೆಂಗಳೂರು: ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಮಾಡುವಂತೆ ಕೋರಿ ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಸೋಮವಾರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

ಕಂಪೆನಿಗಳ ಆದಾಯ ಮತ್ತು ವೆಚ್ಚದ ನಡುವಿನ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ದರ ಹೆಚ್ಚಳ ಅನಿವಾರ್ಯ ಎಂದು ಅವು ಪ್ರಸ್ತಾವನೆಯಲ್ಲಿ ತಿಳಿಸಿವೆ. ಆಯಾ ಕಂಪೆನಿಗಳು ಪ್ರತ್ಯೇಕವಾಗಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಿವೆ. ಅವುಗಳನ್ನು ಪರಿಶೀಲಿಸಿದ ನಂತರ ಸಾರ್ವಜನಿಕರ ಮಾಹಿತಿಗಾಗಿ ಪತ್ರಿಕೆಗಳಲ್ಲಿ ವಿವರವಾದ ಪ್ರಕಟಣೆ ನೀಡಿ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕೊಡಲಾಗುತ್ತದೆ.

ಆಕ್ಷೇಪಣೆಗಳು ಬಂದ ನಂತರ ಆಯೋಗವು ವಿಭಾಗ ಮಟ್ಟದಲ್ಲಿ ಅಹವಾಲು ಸಭೆಗಳನ್ನು ನಡೆಸಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಮೂರು ತಿಂಗಳು ಬೇಕಾಗುತ್ತದೆ. ಹೀಗಾಗಿ ಪರಿಷ್ಕೃತ ದರಗಳು 2013ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಸಹ ಪ್ರಸರಣ ವೆಚ್ಚವನ್ನು ಜಾಸ್ತಿ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಅದರ ವಿವರ ಗೊತ್ತಾಗಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದುವರೆಗೆ ನಾಲ್ಕು ಬಾರಿ ದರ ಏರಿಕೆಯಾಗಿದೆ. ಈ ಸರ್ಕಾರದ ಅವಧಿ ಮುಗಿಯುವ ಮೊದಲೇ ಮತ್ತೊಂದು ಬಾರಿ ದರ ಏರಿಕೆಯಾಗುವುದು ಖಚಿತವಾಗಿದೆ. ಪ್ರತಿ ವರ್ಷ ವಿದ್ಯುತ್ ದರ ಏರಿಕೆಯಾಗುತ್ತಲೇ ಇದೆ. ಕಳೆದ ವರ್ಷ 73 ಪೈಸೆ ಹೆಚ್ಚಳ ಕೋರಿ ಕಂಪೆನಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಆಯೋಗವು ಯೂನಿಟ್‌ಗೆ ಸರಾಸರಿ 13 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT