ADVERTISEMENT

ವಿದ್ಯುತ್ ಯೋಜನೆಗೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 17:50 IST
Last Updated 14 ಫೆಬ್ರುವರಿ 2011, 17:50 IST

ಬೆಂಗಳೂರು: ‘ರಾಜ್ಯದ ಹೊಸ ವಿದ್ಯುತ್ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಇಲ್ಲಿ ನೇರ ಆರೋಪ ಮಾಡಿದರು.

ರಾಜ್ಯ ಸರ್ಕಾರ ನಾಲ್ಕು ಶಾಖೋತ್ಪನ್ನ ವಿದ್ಯುತ್ ಯೋಜನೆಗಳ (ಛತ್ತೀಸ್‌ಗಡದ ಗೋದ್ರ, ಯರಮರಸ್, ಯದ್ಲಾಪುರ ಮತ್ತು ಜೇವರ್ಗಿ) ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ ಕಲ್ಲಿದ್ದಲು ಸರಬರಾಜು ಮಾಡುವ ಭರವಸೆ ಕೇಂದ್ರ ಸರ್ಕಾರದಿಂದ ಸಿಗುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಈ ನಾಲ್ಕು ಯೋಜನೆಗಳಿಗೆ ಸುಮಾರು ಒಂದು ಕೋಟಿ ಟನ್ ಕಲ್ಲಿದ್ದಲು ಬೇಕಾಗುತ್ತದೆ. ಈ ಬಗ್ಗೆ ಅನೇಕ ಸಲ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ನಗರಕ್ಕೆ ಬಂದಿದ್ದ ಕಲ್ಲಿದ್ದಲು ಸಚಿವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಕಲ್ಲಿದ್ದಲು ಸರಬರಾಜಿಗೆ ಒಪ್ಪಿಗೆ ಸಿಗದೆ ಪರಿಸರ ಇಲಾಖೆಯ ಅನುಮತಿ ಸಿಗುವುದಿಲ್ಲ. ಈ ಎರಡೂ ಇಲಾಖೆಗಳ ಒಪ್ಪಿಗೆ ಇಲ್ಲದೆ, ಯೋಜನೆಗಳ ಕಾಮಗಾರಿಗಳನ್ನೂ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಅದನ್ನು ನೀಗಿಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದರೆ ಮಾತ್ರ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬಹುದು ಎಂದು ನುಡಿದರು.

ಬೇಸಿಗೆಯಲ್ಲೂ ವಿದ್ಯುತ್ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗುವುದು. ಪ್ರಸ್ತುತ 1300 ಮೆಗಾವಾಟ್ ವಿದ್ಯುತ್ ಖರೀದಿ ಮಾಡುತ್ತಿದ್ದು, ಇದನ್ನು ಮುಂದುವರಿಸಲಾಗುವುದು. ಇದರ ಜತೆಗೆ ಈಗಿರುವ ವ್ಯವಸ್ಥೆಯಿಂದಲೇ ಇನ್ನೂ 500 ಮೆಗಾವಾಟ್ ವಿದ್ಯುತ್ ಲಭ್ಯವಾಗಲಿದೆ ಎಂದು ಹೇಳಿದರು.

ಉಡುಪಿಯ 2ನೇ ಘಟಕಕ್ಕೆ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿದ್ದು, ಇನ್ನೊಂದು ವರ್ಷದಲ್ಲಿ ವಿದ್ಯುತ್ ಪೂರೈಕೆ ಆರಂಭವಾಗಲಿದೆ ಎಂದು ವಿವರಿಸಿದರು.
ಕಿರು ವಿದ್ಯುತ್ ಯೋಜನೆಗಳಿಗೆ ಅನುಮತಿ ಪಡೆದು, ಅವುಗಳನ್ನು ಅನುಷ್ಠಾನಗೊಳಿಸದ ಕಂಪೆನಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು. 2005ರವರೆಗೆ ಅನುಮತಿ ಪಡೆದ ಕಂಪೆನಿಗಳ ಪರವಾನಗಿ ರದ್ದು ಮಾಡಿದ್ದು, ಇದೇ ನಿಯಮವನ್ನು 2007ರವರೆಗಿನ ಕಂಪೆನಿಗಳಿಗೂ ಅನ್ವಯಿಸುವಂತೆ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಇಂತಹ 120 ಕಂಪೆನಿಗಳು ಇವೆ ಎಂದರು.

ರೈತರ ಮನವೊಲಿಕೆ: ವಿಜಾಪುರದ ಕೂಡಗಿ ಶಾಖೋತ್ಪನ್ನ ವಿದ್ಯುತ್ ಘಟಕ ಸ್ಥಾಪನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದ್ದು, ರೈತರನ್ನು ಮನವೊಲಿಸಿ ಯೋಜನೆ ಆರಂಭಿಸಲಾಗುವುದು. ರೈತರಿಗೆ ಹೆಚ್ಚಿನ ಪರಿಹಾರ ನೀಡುವುದರ ಮೂಲಕ ಮನವೊಲಿಕೆ ನಡೆಯಲಿದೆ. ಈ ಸರ್ಕಾರದಲ್ಲಿ ಯಾವ ಯೋಜನೆಯೂ ಜಾರಿ ಆಗಬಾರದೆನ್ನುವುದು ಕೆಲ ರಾಜಕಾರಣಿಗಳ ವಾದ ಎಂದು ಪ್ರತಿಪಕ್ಷದವರನ್ನು ಟೀಕಿಸಿದರು.

ಭಾನುವಾರ ಒಟ್ಟು 159 ದಶಲಕ್ಷ ಯೂನಿಟ್‌ಗೆ ಬೇಡಿಕೆ ಇದ್ದು, ಅಷ್ಟೂ ವಿದ್ಯುತ್ ಪೂರೈಸಲಾಗಿದೆ. ಶನಿವಾರ ಅತಿ ಹೆಚ್ಚು ಅಂದರೆ 164 ದಶಲಕ್ಷ ಯೂನಿಟ್‌ವರೆಗೆ ವಿದ್ಯುತ್ ಸರಬರಾಜು ಮಾಡಲಾಗಿದೆ.

ಗ್ರಾಹಕರಿಂದ ವಿವರಣೆ
ನಗರದಲ್ಲಿ ಒಟ್ಟು 23 ಲಕ್ಷ ಅಡುಗೆ ಅನಿಲ ಸಂಪರ್ಕಗಳು ಇದ್ದು, ಇದುವರೆಗೂ 15 ಲಕ್ಷ ಗ್ರಾಹಕರು ನಿಗದಿತ ವಿವರಣೆಗಳನ್ನು ಇಲಾಖೆಗೆ ಸಲ್ಲಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ವಿದ್ಯುತ್ ಬಿಲ್‌ನ ಆರ್.ಆರ್ ಸಂಖ್ಯೆ ಮತ್ತು ಅಡುಗೆ ಅನಿಲ ಸಂಪರ್ಕದ ಗ್ರಾಹಕರ ಸಂಖ್ಯೆ ಒದಗಿಸಲು ಎಲ್ಲರಿಗೂ ಸೂಚಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದೇ 19ರೊಳಗೆ ಯಾರು ದಾಖಲೆ ಸಲ್ಲಿಸುವುದಿಲ್ಲವೊ ಅವೆಲ್ಲವೂ ಅಕ್ರಮ ಎಂದು ಘೋಷಿಸಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಸಂಬಂಧಪಟ್ಟ ಅಡುಗೆ ಅನಿಲ ವಿತರಕರಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT