ADVERTISEMENT

ವಿಧವೆಗೆ ಮಂಗಳ ಭಾಗ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಮಂಗಳೂರು: ಪತಿಯನ್ನು ಕಳೆದುಕೊಂಡ ಮಹಿಳೆ `ಅಮಂಗಳ~ ಎನ್ನುವುದನ್ನೇ ತೊಡೆದು ಹಾಕಬೇಕೆಂಬ ನಿಟ್ಟಿನಲ್ಲಿ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಸೋಮವಾರ ಸಾಮಾಜಿಕ ಪರಿವರ್ತನೆಯ ವಿಶಿಷ್ಟ ಕಾರ್ಯಕ್ರಮ ನಡೆಯಿತು. ದೇವರೆದುರು ಹೂ- ಕುಂಕುಮ-ಬಳೆ ಸ್ವೀಕರಿಸಿ ಧರಿಸಿದ 2300 ವಿಧವೆಯರು ಗೋಕರ್ಣನಾಥನ ಮೂರ್ತಿ ಇರಿಸಿದ್ದ ಬೆಳ್ಳಿರಥ ಎಳೆದರು, ದೇವರಿಗೆ ಆರತಿ ಬೆಳಗಿ ಸಂಭ್ರಮಿಸಿದರು.

ಸಾಮಾಜಿಕ ಪರಿವರ್ತನೆ ಹರಿಕಾರ ನಾರಾಯಣ ಗುರುಗಳು ಸ್ಥಾಪಿಸಿದ ಗೊಕರ್ಣನಾಥನ ಸನ್ನಿಧಿಯಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 1500 ಮಂದಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. 2,300ಕ್ಕೂ ಅಧಿಕ ಮಹಿಳೆಯರು ಆಗಮಿಸಿ ಅಚ್ಚರಿ ಮೂಡಿಸಿದರು.

ಬೆಳಿಗ್ಗೆ 9 ಗಂಟೆಗೇ ದೇವಸ್ಥಾನಕ್ಕೆ ಮಹಿಳೆಯರು ಗುಂಪಾಗಿ ಆಗಮಿಸಲಾರಂಭಿಸಿದರು. 9.30ಕ್ಕೆ ಚಂಡಿಕಾ ಹೋಮ ಆರಂಭವಾದಾಗ 800ಕ್ಕೂ ಅಧಿಕ ಮಂದಿ ಸೇರಿದ್ದರು. 10.45ಕ್ಕೆ ಪೂರ್ಣಾಹುತಿ ನಡೆದಾಗ ಹಣೆಯಲ್ಲಿ ಕುಂಕುಮ, ಮುಡಿಯಲ್ಲಿ ಮಂಗಳೂರು ಮಲ್ಲಿಗೆ ಹೂವು, ಕೈಗಳಲ್ಲಿ ಗಾಜಿನ ಬಳೆ ತೊಟ್ಟು ಭಾವೋದ್ವೇಗಕ್ಕೊಳಗಾಗಿದ್ದ ಮಹಿಳೆಯರೇ ಗರ್ಭಗುಡಿ ಸುತ್ತ ತುಂಬಿದ್ದರು. 11 ಗಂಟೆ ಆದರೂ ಉಡುಪಿ, ಕಾಸರಗೋಡು ಸೇರಿದಂತೆ ದೂರದ ಊರುಗಳಿಂದ ವನಿತೆಯರು ಬರುತ್ತಲೇ ಇದ್ದರು.

ಮಹಿಳೆಯರೆಲ್ಲ ಗೋಕರ್ಣನಾಥನಿಗೆ ಆರತಿ ಬೆಳಗಿದರೆ, ಜನಾರ್ದನ ಪೂಜಾರಿ ಅವರು ಮಹಿಳೆಯರಿಗೇ ಆರತಿ ಬೆಳಗಿ `ಸ್ತ್ರೀಯರೆಲ್ಲ ದೇವತೆಯರೇ. ಪತಿಯನ್ನು ಕಳೆದುಕೊಂಡ ಕಾರಣಕ್ಕೆ ಆಕೆ ಮಂಗಳ ಕಾರ್ಯಕ್ರಮಗಳಿಂದ ದೂರವಿರಬೇಕಿಲ್ಲ. ವಿಧವೆ ಪದವನ್ನೇ ನಿಷೇಧಿಸಬೇಕು~ ಎಂದರು.

ಬಳಿಕ ಬೆಳ್ಳಿರಥದಲ್ಲಿ ಗೋಕರ್ಣನಾಥ ಮತ್ತು ಅನ್ನಪೂರ್ಣೇಶ್ವರಿ ಉತ್ಸವ ಮೂರ್ತಿ ಇರಿಸಿ ಎಲ್ಲ ಮಹಿಳೆಯರಿಂದ ಸರತಿಯಲ್ಲಿ 5 ಬಾರಿ ರಥ ಎಳೆಸಲಾಯಿತು.

ಆನಂದಭಾಷ್ಪ: ಭಾವೋದ್ವೇಗಕ್ಕೆ ಒಳಗಾಗಿದ್ದ ಅದೆಷ್ಟೋ ಮಹಿಳೆಯರು ಪೂಜಾರಿ ಅವರ ಕಾಲು ಮುಟ್ಟಿ ನಮಸ್ಕರಿಸಿದರೆ, ವರ್ಷಗಳ ನಂತರ ಮಂಗಳದ್ರವ್ಯ ಧರಿಸಿದ ಸಂತಸದಲ್ಲಿ ಹಲವರು ಕಣ್ಣೀರ್ಗರೆದರು. ಅಶುಭ ಎನಿಸಿಕೊಂಡಿದ್ದ ತಮ್ಮನ್ನೂ ಗೌರವಿಸುವ ಕಾರ್ಯ ನಡೆಯಿತಲ್ಲ ಎಂಬ ಧನ್ಯತೆ, ಕತ್ತಲಾಗಿದ್ದ ಬಾಳಿನಲ್ಲೊಂದು ಆಶಾಕಿರಣ ಮೂಡಿದ ಸಂತಸದ ಭಾವ ಹಲವರಲ್ಲಿತ್ತು.

`ದೇವಸ್ಥಾನ ಪ್ರವೇಶ ನಿಷೇಧವಿಲ್ಲದಿದ್ದರೂ, ಮನೆಯಲ್ಲಿನ ಶುಭ ಕಾರ್ಯಗಳಲ್ಲಿ ವಿಧವೆಯರನ್ನು ದೂರವೇ ಇಡುವ ಪರಿಪಾಠ ಈಗಲೂ ಇದೆ. ಸ್ವತಃ ಮಕ್ಕಳ ಮದುವೆಯಲ್ಲಿಯೂ ಮಂಗಳದ್ರವ್ಯ ವಂಚಿತ ಅಮ್ಮನಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವಿಲ್ಲವಾಗಿದೆ. ವಿಧವೆಯರು ಸಮಾಜಕ್ಕೆ ಹೊರೆಯಲ್ಲ. ನಮ್ಮನ್ನು ಸಾಕಿ, ಸಲಹಿದ ತಾಯಿ.

ಆಕೆ ಅಮಂಗಳೆ ಅಲ್ಲ ಎಂಬುದನ್ನು ಸಾರಲು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜ ಸುಧಾರಣೆ ನಡೆಗೆ ಸ್ವಯಂ ಪ್ರೇರಣೆಯಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದುದನ್ನು ನೋಡಿದರೆ ಈವರೆಗೆ ಮರೆಯಲ್ಲಿದ್ದ ಮಹಿಳೆಯರೂ ಬದಲಾವಣೆಗೆ ಸಿದ್ಧರಿದ್ದಾರೆ ಎಂಬುದು ಸ್ಪಷ್ಟ~ ಎಂದು ಜನಾರ್ದನ ಪೂಜಾರಿ ಅವರು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT