ADVERTISEMENT

ವಿಧಾನಸಭೆ ಅಧ್ಯಕ್ಷರ ಮುಂದೆ ಹಾಜರಾಗಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:42 IST
Last Updated 1 ಜುಲೈ 2017, 19:42 IST
ವಿಧಾನಸಭೆ ಅಧ್ಯಕ್ಷರ ಮುಂದೆ ಹಾಜರಾಗಿ
ವಿಧಾನಸಭೆ ಅಧ್ಯಕ್ಷರ ಮುಂದೆ ಹಾಜರಾಗಿ   

ಬೆಂಗಳೂರು: ‘ಜೈಲು ಶಿಕ್ಷೆ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಸೋಮವಾರ (ಜು. 3)  ವಿಧಾನಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಿ ಮನವಿ ಸಲ್ಲಿಸಿ ಪರಿಹಾರ ಪಡೆಯಿರಿ’ ಎಂದು ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ ಅವರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಹಕ್ಕುಬಾಧ್ಯತಾ ಸಮಿತಿ ಶಿಫಾರಸು ಮಾಡಿರುವ ಶಿಕ್ಷೆಯನ್ನು ಜಾರಿಗೊಳಿಸುವ ನಿರ್ಣಯ ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಜಾ             ಮಾಡಿದೆ.

ಮುಚ್ಚಳಿಕೆ ಪತ್ರ: ನ್ಯಾಯಪೀಠದ ನಿರ್ದೇಶನದ ಅನುಸಾರ ಅರ್ಜಿದಾರರ ವಕೀಲ ಶಂಕರಪ್ಪ ಅವರು, ‘ರವಿ ಬೆಳಗೆರೆ ಮತ್ತು ಅನಿಲ್‌ ರಾಜ್‌ ಸೋಮವಾರ  (ಜು.3) ಮಧ್ಯಾಹ್ನ 3 ಗಂಟೆಗೆ ಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಲಿದ್ದಾರೆ’ ಎಂಬ ಮುಚ್ಚಳಿಕೆ  ಪತ್ರ ಬರೆದುಕೊಟ್ಟರು. ಅಂತೆಯೇ ತಮ್ಮ ರಿಟ್‌ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ‘ಅರ್ಜಿದಾರರು ಕೇಳಿರುವ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅವರು ಸಭಾಧ್ಯಕ್ಷರ ಮುಂದೆ ಹಾಜರಾದಾಗ ಅವರ ಕೋರಿಕೆಗೆ ಮಾನ್ಯತೆ ದೊರೆಯದೇ ಹೋದಲ್ಲಿ ಪುನಃ ಹೈಕೋರ್ಟ್‌ಗೆ   ಬಂದು ಪರಿಹಾರ ಕೇಳಬಹುದು’ ಎಂದು ಆದೇಶಿಸಿದರು.

ಬಂಧಿಸದಂತೆ ಆದೇಶಿಸಲು ನಕಾರ: ‘ಸಭಾಧ್ಯಕ್ಷರ ಮುಂದೆ ಹಾಜರಾದ ಸಮಯದಲ್ಲಿ ಅರ್ಜಿದಾರರನ್ನು ಪೊಲೀಸರು ಬಂಧಿಸದಂತೆ ಆದೇಶದಲ್ಲಿ ಉಲ್ಲೇಖಿಸಬೇಕು’ ಎಂಬ ಶಂಕರಪ್ಪ ಅವರ ಕೋರಿಕೆಯನ್ನು ನ್ಯಾಯಮೂರ್ತಿಗಳು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಇದೇ ವೇಳೆ, ಸಭಾಧ್ಯಕ್ಷರ ಪರ ಹಾಜರಾದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್.ಪೊನ್ನಣ್ಣ, ‘ಅರ್ಜಿದಾರರನ್ನು ಬಂಧಿಸುವುದಿಲ್ಲ’ ಎಂದು ಮೌಖಿಕ ಭರವಸೆ ನೀಡಿದರು.

‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆ, ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿರುದ್ಧ ಹಾಗೂ ‘ಯಲಹಂಕ ವಾಯ್ಸ್‌’  ಮಾಸಪತ್ರಿಕೆ ಸಂಪಾದಕ ಅನಿಲ್‌ ರಾಜ್‌ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪಕ್ಕೆ ಒಳಗಾಗಿದ್ದಾರೆ.

ಗಂಭೀರ ಎಚ್ಚರಿಕೆ

‘ಪತ್ರಿಕೋದ್ಯಮದ ಘನತೆ ಕಾಪಾಡಿ. ಅವಿಧೇಯತೆ ತೋರಿಸಬೇಡಿ. ಸೊಂಟದ ಕೆಳಗಿನ ಭಾಷೆ ಬಳಸಬೇಡಿ. ಹಾಗೇನಾದರೂ ಮಾಡಿದರೆ ಸದನ ನಿಮ್ಮ ವಿರುದ್ಧ ಇನ್ನಷ್ಟು ಗಂಭೀರ ಕ್ರಮ ಕೈಗೊಂಡೀತು. ಭವಿಷ್ಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ’ ಎಂದು ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಹೇಳಿದರು.

* ಪತ್ರಿಕೋದ್ಯಮ ರಚನಾತ್ಮಕವಾಗಿರಬೇಕು.  ಪತ್ರಕರ್ತರು ಮತ್ತೊಬ್ಬರ ಚಾರಿತ್ರ್ಯ ಹರಣ ಮಾಡುವ ವಿನಾಶಕಾರಿ ಗುಣ ಮೈಗೂಡಿಸಿಕೊಳ್ಳಬಾರದು.

–ಅಶೋಕ ಬಿ.ಹಿಂಚಿಗೇರಿ, ನ್ಯಾಯಮೂರ್ತಿ

ಮುಖ್ಯಾಂಶಗಳು

* ಮುಚ್ಚಳಿಕೆ ಪತ್ರ ಸಲ್ಲಿಕೆ
* ಪತ್ರಕರ್ತರನ್ನು ಬಂಧಿಸು ವುದಿಲ್ಲ ಸಭಾಧ್ಯಕ್ಷರ ವಕೀಲರ ಪೊನ್ನಣ್ಣ ಭರವಸೆ
* ಬಂಧಿಸಿದರೆ ಯಾವುದೇ ಕ್ಷಣದಲ್ಲಿ ಕೋರ್ಟ್‌ಗೆ ಬನ್ನಿ

ಆಸ್ಪತ್ರೆಯಿಂದ ರವಿ ಬೆಳಗೆರೆ ಬಿಡುಗಡೆ

ಹುಬ್ಬಳ್ಳಿ:  ಇಲ್ಲಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ‘ಹಾಯ್‌ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಬೆಂಗಳೂರಿಗೆ ತೆರಳಿದರು.

ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಿಂದ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಬೆಳಗೆರೆ, ತೀರ್ಪು ಪ್ರಕಟವಾದ ದಿನ ಉತ್ತರ ಕನ್ನಡ ಜಿಲ್ಲೆ ಜೊಯಿಡಾದ ತಮ್ಮ ತೋಟದ ಮನೆಯಲ್ಲಿದ್ದರು. ನಂತರ ಚಿಕಿತ್ಸೆ ಪಡೆಯಲು ಧಾರವಾಡದ ಸತ್ತೂರಿನಲ್ಲಿರುವ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದರು.

ತಮ್ಮನ್ನು ಬಂಧಿಸಲೆಂದು ಬಂದಿದ್ದ ಪೊಲೀಸರೊಂದಿಗೆ ಅಲ್ಲಿಂದ ಹೊರಬಂದಿದ್ದ ಅವರು, ಆ ಬಳಿಕ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.