ADVERTISEMENT

ವಿವಾಹ ಭೋಜನ: 200 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 16:45 IST
Last Updated 1 ಫೆಬ್ರುವರಿ 2011, 16:45 IST

ಸೋಮವಾರಪೇಟೆ: ವಿವಾಹ ಸಮಾರಂಭದಲ್ಲಿ ಊಟ ಮಾಡಿದ ಎರಡು ದಿನಗಳ ಬಳಿಕ ವಧು-ವರರೂ  ಸೇರಿದಂತೆ 56 ಮಂದಿ ಅಸ್ವಸ್ಥಗೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ  ನಡೆದಿದೆ.

ಸಮೀಪದ ಐಗೂರು ಗ್ರಾಮದ ಅಣ್ಣಪ್ಪ ಹಾಗೂ ಉಪ್ಪಿನಂಗಡಿಯ ಭಾರತಿಯ ವಿವಾಹ ಸಮಾರಂಭವು  ಜ.30 ರಂದು ಪಟ್ಟಣದ ಮಾನಸ ಸಭಾಂಗಣದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಊಟ ಮಾಡಿದವರು  ಅಸ್ವಸ್ಥಗೊಂಡು ಒಬ್ಬೊಬ್ಬರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸೋಮವಾರ ಸಂಜೆ ಸುಮಾರು 10 ಮಂದಿ  ಚಿಕಿತ್ಸೆಗೆ ಒಳಗಾಗಿದ್ದರೆ ಮಂಗಳವಾರ ಸಂಜೆಯ ವೇಳೆಗೆ ಇವರ ಸಂಖ್ಯೆ 56 ಕ್ಕೆ ಏರಿದೆ. ಇದೇ ಕಾರಣಕ್ಕಾಗಿ  ಮಡಿಕೇರಿ, ಕುಶಾಲನಗರದ ಸರ್ಕಾರಿ ಆಸ್ಪತೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ  ಪಡೆಯುತ್ತಿರುವ ಬಗ್ಗೆಯೂ ವರದಿಯಾಗಿದ್ದು, ಒಟ್ಟು 200 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎಂದು  ತಿಳಿದುಬಂದಿದೆ. ಮಾನಸ ಸಭಾಂಗಣದಲ್ಲಿ ಪೂರೈಕೆಯಾದ ಕಲುಷಿತ ನೀರೇ ಈ ಅವಾಂತರಕ್ಕೆ ಕಾರಣ ಎಂದು  ಹೇಳಲಾಗುತ್ತಿದ್ದು ನೀರಿನ ಪರೀಕ್ಷೆಯ ಫಲಿತಾಂಶ ಬಂದ ಬಳಿಕವೇ ಸತ್ಯಾಂಶ ಗೊತ್ತಾಗಲಿದೆ.

ಕರ್ಕಳ್ಳಿ ಗ್ರಾಮದ ಕಮಲ, ಕಾನ್ವೆಂಟ್ ಬಾಣೆಯ ಕೃಷ್ಣಪ್ಪರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ  ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಸಂಜೆಯೇ ಮಡಿಕೇರಿಗೆ ಕಳಿಸಲಾಗಿತ್ತು. ಕಿರಗಂದೂರು ಗ್ರಾಮದ ಲಕ್ಷ್ಮಣ,  ಸುಂದರ ಹಾಗೂ ಪುಷ್ಪರನ್ನು ಮಂಗಳವಾರ ಮಡಿಕೇರಿಗೆ ಕಳಿಸಲಾಗಿದೆ. ಐಗೂರು ಗ್ರಾಮದ ರಕ್ಷಿತಾ (8), ಪೂಜಾ (7), ರಾಜೇಶ್, ರಾಜು ಹಾಗೂ ಕೃಷ್ಣಪ್ಪ ಸೇರಿದಂತೆ ಒಟ್ಟು 56 ಮಂದಿಗೆ ವಾಂತಿ ಭೇದಿ ಶುರುವಾಗಿ ನಿತ್ರಾಣಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುತ್ತಿದ್ದು ಹೆಚ್ಚುವರಿ ವಾರ್ಡ್‌ನ್ನು ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.