ADVERTISEMENT

ವಿಶ್ವಕವಿಗೆ 150 ಸಮುದಾಯ ರಾಷ್ಟ್ರೀಯ ಉತ್ಸವ. ಮಾತೃಭಾಷೆಯಿಂದ ಟ್ಯಾಗೋರ್‌ಗೆ ವಿಶ್ವ ಮನ್ನಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಬೆಂಗಳೂರು: ‘ತಮಿಳಿನಂತೆ ಪ್ರಾಚೀನ ಮಹತ್ವವಾಗಲೀ, ಹಿಂದಿಯಂತೆ ಬಹುಜನರನ್ನು ತಲುಪುವ ಗುಣವಾಗಲೀ ಇರದಿದ್ದ ಬಂಗಾಳಿಯಲ್ಲಿ ಬರೆದು ರವೀಂದ್ರರು ಸರ್ವವ್ಯಾಪಿಯಾದರು. ಆ ಮೂಲಕ ತಾಯಿಭಾಷೆಯಲ್ಲಿ ಬರೆಯುವ ದೇಶದ ಅನೇಕರಲ್ಲಿ ಆತ್ಮವಿಶ್ವಾಸ ತುಂಬಿದರು’ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಹೇಳಿದರು.ಸಮುದಾಯ ಸಂಘಟನೆ  ‘ಪ್ರಜಾವಾಣಿ’ ಸಹಯೋಗದೊಂದಿಗೆ  ನಗರದಲ್ಲಿ ಶನಿವಾರ ಆಯೋಜಿಸಿದ್ದ ಟ್ಯಾಗೋರ್ 150 ಸಮುದಾಯ ರಾಷ್ಟ್ರೀಯ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಳಿದಾಸನ ನಂತರ ರವೀಂದ್ರರಷ್ಟು ಜನಪ್ರಿಯರಾದ ಕವಿ ಮತ್ತೊಬ್ಬರಿಲ್ಲ. ಕಾಳಿದಾಸ ಭಾರತದಲ್ಲಿ ಸರ್ವವ್ಯಾಪಿಯಾಗಿದ್ದ ಸಂಸ್ಕೃತದಲ್ಲಿ ಕಾವ್ಯ ರಚಿಸಿದ. ರವೀಂದ್ರರ ವೈಶಿಷ್ಟ್ಯವೆಂದರೆ ಅವರು ಮಾತೃಭಾಷೆಯಲ್ಲಿ ಬರೆದೂ ಭಾರತದ ಸಾಹಿತಿಯಾಗಬಹುದು ಎಂಬುದನ್ನು ಸಾಬೀತುಪಡಿಸಿದರು’ ಎಂದು ಹೇಳಿದರು. ‘ಮಹಾತ್ಮ ಗಾಂಧಿ ಅವರಂತೆಯೇ ಟ್ಯಾಗೋರರು ತಾಯ್ನೆಲದ ಬಗ್ಗೆ ಅಪಾರವಾಗಿ ಚಿಂತಿಸಿದವರು. ಆ ಇಬ್ಬರೂ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಕನಸು ಕಂಡಿದ್ದರು. ಇನ್ನಾದರೂ ಆ ಕನಸು ನನಸಾಗಬೇಕಿದೆ’ ಎಂದರು.

‘ಕುವೆಂಪು ಅವರಂತೆ ರವೀಂದ್ರರು ಏಕಕಾಲಕ್ಕೆ ಆಧ್ಯಾತ್ಮ ಜೀವಿಯಾಗಿಯೂ ವಿಚಾರವಾದಿಯಾಗಿಯೂ ಬದುಕಿದ್ದರು. ಆಧ್ಯಾತ್ಮವನ್ನು ಒಪ್ಪಿದರೂ ಅವರೆಂದೂ ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗಲು ಬಯಸಲಿಲ್ಲ. ಆಧ್ಯಾತ್ಮದ ಜತೆಗೆ ವೈಚಾರಿಕ ಅನುಮಾನಗಳನ್ನಿಟ್ಟುಕೊಂಡು ಬೆಳೆದವರು ಅವರು’ ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ ‘1934ರಲ್ಲಿಯೇ ವರಕವಿ ದ.ರಾ.ಬೇಂದ್ರೆ ಅವರು ರವೀಂದ್ರರ ಕುರಿತು ಗುರುದೇವ ಕವನ ಬರೆದರು. ರವೀಂದ್ರರ ವ್ಯಕ್ತಿತ್ವವನ್ನು ಈ ಕವಿತೆಯ ಪ್ರತಿ ಪದವೂ ಬಿಂಬಿಸುತ್ತದೆ. ಈ ಕವಿತೆಯ ಮೂಲಕ ಕನ್ನಡನಾಡು ವಿಶ್ವ ಚೇತನ ರವೀಂದ್ರರಿಗೆ ನಮನ ಸಲ್ಲಿಸಿದೆ’ ಎಂದು ಹೇಳಿದರು.

‘ರವೀಂದ್ರರಿಗೆ ನೊಬೆಲ್ ಪುರಸ್ಕಾರ ದೊರೆತಾಗ, ಅವರ ಜನ್ಮಶತಾಬ್ದಿ ನಡೆದಾಗ ದೊಡ್ಡ ಬಿರುಗಾಳಿಯೇ ಎದ್ದಿತ್ತು. ಬಂಗಾಳಿಗಳೇ ಬಣ್ಣಿಸುವಂತೆ ಅದು ‘ಟ್ಯಾಗೋರ್ ಜ್ವರ’. ಈ ಜ್ವರ ದೇಶದ ತುಂಬೆಲ್ಲಾ ತಂಗಾಳಿಯಾಗಿ ಪಸರಿಸಬೇಕಿದೆ’ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘಟನೆಯ ಬೆಂಗಳೂರು ಘಟಕದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ‘ಬಂಗಾಳದ ಇಬ್ಬರು ಮಹತ್ವದ ಲೇಖಕರಾದ ಬಂಕಿಮ ಚಂದ್ರ ಚಟರ್ಜಿ ಹಾಗೂ ರವೀಂದ್ರನಾಥರ ನಡೆದ ಪತ್ರ ವ್ಯವಹಾರಗಳು ದೇಶದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಘಟ್ಟದಲ್ಲಿ ಮಹತ್ವ ಪಡೆದಿವೆ’ ಎಂದರು.


‘ಗ್ರಾಮ ಸಮುದಾಯದ ನೋವು ನಲಿವನ್ನು ಹತ್ತಿರದಿಂದ ಕಂಡಿದ್ದವರು ರವೀಂದ್ರರು. ಪಾಶ್ಚಾತ್ಯ ಪ್ರಭಾವ ದೊಡ್ಡದಾಗಿದ್ದರೂ ಅವರು ಭಾರತದ ಪರಂಪರೆಯನ್ನು ಮರೆತು ಅಂಧವಾಗಿ ಕೃತಿ ರಚಿಸಲಿಲ್ಲ’ ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಮಾತನಾಡಿದರು. ಕೋಲ್ಕತ್ತಾದ ಗಾಯಕರಾದ ಶುಭಾಪ್ರಸಾದ್ ನಂದಿ ಮಜುಂದಾರ್ ಹಾಗೂ ಪೂಬಾಲಿ ದೇಬನಾಥ್ ‘ರವೀಂದ್ರ ಸಂಗೀತ’ವನ್ನು     ಪ್ರಸ್ತುತಪಡಿಸಿದರು. ಸಂಘಟನೆಯ ರಾಜ್ಯಘಟಕದ ಅಧ್ಯಕ್ಷ ಪ್ರೊ. ಆರ್.ಕೆ. ಹುಡಗಿ, ಬಂಗಾಳಿ ನಾಟಕಕಾರ ಚಂದನ್ ಸೇನ್ ಮತ್ತಿತರರು ಉಪಸ್ಥಿತರಿದ್ದರು.
  
ರವೀಂದ್ರರು ಸಂಭ್ರಮಿಸುತ್ತಿದ್ದರು...
‘ಈಜಿಪ್ಟ್‌ನಲ್ಲಿ ಸರ್ವಾಧಿಕಾರಿ ಮುಬಾರಕ್ ಪದಚ್ಯುತನಾದ ಘಟನೆಯನ್ನು ಕವಿ ರವೀಂದ್ರನಾಥ ಟ್ಯಾಗೋರರಿಗೆ ಅರ್ಪಿಸಬೇಕು’ ಎಂದು ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಹೇಳುತ್ತಿದ್ದಂತೆಯೇ ಸಮಾರಂಭದಲ್ಲಿ ಅಪಾರ ಕರತಾಡನ ಕೇಳಿ ಬಂತು.‘ಈ ವಿಷಯ ರವೀಂದ್ರರಿಗೆ ತಿಳಿದಿದ್ದರೆ ಅವರು ಸಂಭ್ರಮಿಸುತ್ತಿದ್ದರು. ಅವರ ಕಾಲದಲ್ಲಿ ಭಾರತ ಸ್ವಾತಂತ್ರ್ಯಗೊಂಡಿರಲಿಲ್ಲ, ದಕ್ಷಿಣ ಆಫ್ರಿಕಾಕ್ಕೆ ವಿಮೋಚನೆ ದೊರೆತಿರಲಿಲ್ಲ, ಅಮೆರಿಕದಲ್ಲಿ ಬಿಳಿಯರು ಕರಿಯರನ್ನು ಆಳುತ್ತಿದ್ದರು. ಆದರೆ ಈಗ ಅವರ ಅನೇಕ ಕನಸುಗಳು ನನಸಾಗಿವೆ. ಈಜಿಪ್ಟ್‌ನ ಸ್ವಾತಂತ್ರ್ಯ ದೊರೆತದ್ದು ಕೂಡ ಈ ಕನಸಿನ ಭಾಗವೇ ಆಗಿದೆ’ ಎಂದರು.

‘ಹಿಂಸೆಗೆ ಆಸ್ಪದ ನೀಡದೆ 18 ದಿನಗಳ ಕಾಲ ಕೇವಲ ಪ್ರತಿಭಟನೆಯಿಂದಲೇ ಮುಬಾರಕ್ ಅವರನ್ನು ಈಜಿಪ್ಟ್ ಜನತೆ ಕೆಳಗಿಳಿಸಿದರು. ಆ ಸಂದರ್ಭದಲ್ಲಿ ಇಡೀ ಈಜಿಪ್ಟ್‌ನ ಸಮಾಜ ಸಮುದಾಯವಾಗಿ ರೂಪುಗೊಂಡಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.