ಬೆಂಗಳೂರು: ‘ಖಾಸಗಿ ವೈದ್ಯ ಕಾಲೇಜುಗಳಲ್ಲಿ ನಡೆಯುತ್ತಿರುವ ‘ಸೀಟ್ ಬ್ಲಾಕಿಂಗ್’ ದಂಧೆ ತಡೆಗಟ್ಟಲು ಸದ್ಯ ಯಾವುದೇ ಕಾನೂನು ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಗೋ.ಮಧುಸೂದನ್ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ‘ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಒಪ್ಪಂದ ಮಾಡಿಕೊಳ್ಳುತ್ತವೆ. ಆ ಪ್ರಕಾರ, ಪ್ರವೇಶ ಪಡೆಯದೆ ಖಾಲಿ ಉಳಿಯುವ ಸೀಟುಗಳನ್ನು ಆಡಳಿತ ಮಂಡಳಿಗೆ ಬಿಟ್ಟು ಕೊಡಲಾಗುತ್ತದೆ’ ಎಂದರು.
‘ಈ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್–ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ಸಿಕ್ಕು ಬಿದ್ದಿದ್ದು, 35 ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನಡೆಸುತ್ತಿದೆ’ ಎಂದು ಹೇಳಿದರು. ‘ತನಿಖೆ ಪೂರ್ಣಗೊಂಡ ಬಳಿಕ ‘ಸೀಟ್ ಬ್ಲಾಕಿಂಗ್’ ದಂಧೆಯಲ್ಲಿ ಪಾಲ್ಗೊಂಡ ವೈದ್ಯಕೀಯ ಕಾಲೇಜುಗಳ ಮಾಹಿತಿ ದೊರೆಯಲಿದೆ ಎಂದರು.
‘ವೃತ್ತಿಪರ ಕೋರ್ಸ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಕಾನೂನು ರೂಪಿಸಲು ಮುಂದಾದರೆ ಶಾಸಕರ ಸಹಕಾರವೇ ಸಿಗುತ್ತಿಲ್ಲ. ಮಸೂದೆ ಮಂಡಿಸಲು ಬಿಡುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.