ADVERTISEMENT

ವ್ಯಾಘ್ರ ಭೀತಿ: ಶಾಲೆಗೆ ಅಘೋಷಿತ ರಜೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2011, 19:30 IST
Last Updated 9 ನವೆಂಬರ್ 2011, 19:30 IST
ವ್ಯಾಘ್ರ ಭೀತಿ: ಶಾಲೆಗೆ ಅಘೋಷಿತ ರಜೆ
ವ್ಯಾಘ್ರ ಭೀತಿ: ಶಾಲೆಗೆ ಅಘೋಷಿತ ರಜೆ   

ಹುದಿಕೇರಿ (ದಕ್ಷಿಣ ಕೊಡಗು): ಅಲ್ಲಿನ ಜನರಿಗೆ ಕಳೆದ 20 ದಿನಗಳಿಂದ ನಿದ್ದೆ ಇಲ್ಲ. ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಶಿಕ್ಷಕರಿಗೂ ಶಾಲೆಗೆಬರಲು ಭಯ. ಕಾಫಿ ತೋಟಗಳಿಗೆ ಮಾಲೀಕರೂ ಹೋಗುತ್ತಿಲ್ಲ. ಕೂಲಿಯಾಳುಗಳೂ ಬರುತ್ತಿಲ್ಲ. ಅಲ್ಲಿ ಈಗ ರಾತ್ರಿ ದೀರ್ಘವಾಗಿದೆ. ಎಲ್ಲರೂ ಮಿಣ ಮಿಣ ಬೆಳಗುವ ದೀಪವನ್ನು ಹಚ್ಚಿಕೊಂಡು ಕೋಲು, ನಗಾರಿ, ತಮಟೆಗಳ ಮೂಲಕ ಶಬ್ದ ಮಾಡುತ್ತಾ ರಾತ್ರಿ ಕಳೆಯುತ್ತಿದ್ದಾರೆ. 

 ನಾಗರಹೊಳೆ ಅಭಯಾರಣ್ಯ ದಂಚಿನಲ್ಲಿರುವ ದಕ್ಷಿಣ ಕೊಡಗಿನ ಹಲವಾರು ಗ್ರಾಮಗಳ ಪರಿಸ್ಥಿತಿ ಇದು. ~ಇನ್ನೂ ಎಷ್ಟೊತ್ತು ಬೆಳಕು ಹರಿಯಲು... ಅರಣ್ಯದಂಚಿನಿಂದ ಮೂಡಿ ಬರಲು ಸೂರ್ಯ ದೇವ ಏಕಿಷ್ಟು ತಡಮಾಡುತ್ತಿದ್ದಾನೆ... ಕೋಳಿ ಕೂಗುವ ಹೊತ್ತಿಗೆ ನಮ್ಮ ಜಾನುವಾರುಗಳು ಬದುಕಿರುತ್ತವೆಯೇ...?~ ಎಂದು ಗ್ರಾಮಸ್ಥರು ನಿತ್ಯವೂ ಗೋಳಿಡುತ್ತಿದ್ದಾರೆ.

ನಾಡಿಗೆ ನುಗ್ಗಿರುವ ವ್ಯಾಘ್ರನ ಬೆದರಿಕೆಯಿಂದ ಕುಸಿದುಹೋಗಿರುವ ಈ ಜನರ ಧ್ವನಿ ಎಷ್ಟೊಂದು ದಯನೀಯವಾಗಿದೆ ಎಂದರೆ ಅವರ ಈ ಪ್ರಾರ್ಥನೆ ದೇವರಿಗೆ ಹೋಗಲಿ, ಸ್ವತಃ ಅವರಿಗೇ ಕೇಳಿಸದಷ್ಟು ಕ್ಷೀಣಿಸಿದೆ.
ಬೆಳಕು ಹರಿದರೆ ಸಾಕು ಮನೆಯ ಮಂದಿಯೆಲ್ಲ ~ಅಬ್ಬಾ, ಈ ರಾತ್ರಿ ಹುಲಿಯ ದಾಳಿಗೆ ನಮ್ಮ ಹಸು ಬಲಿಯಾಗಿಲ್ಲ~ ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಇಂತಹ ನಿಟ್ಟುಸಿರು ಬಿಡುವ ಯೋಗ ಎಲ್ಲರಿಗೂ ದಕ್ಕಿಲ್ಲ. ಯಾಕೆಂದರೆ ಕೋತೂರಿನ ಏಳೆಂಟು ಕುಟುಂಬಗಳು, ಹರಿಹರದ ಎರಡು-ಮೂರು ಕುಟುಂಬಗಳು, ಕೋಣಗೇರಿ, ಹೈಸೊಡ್ಲುರು, ತಾವಳಗೇರಿಯಲ್ಲಿರುವ ಒಂದೆರಡು ಕುಟುಂಬಗಳು ಅದೃಷ್ಟಶಾಲಿ ಕುಟುಂಬಗಳಾಗಿರಲಿಲ್ಲ. ತಮ್ಮ ಬದುಕಿಗೆ ಆಧಾರವಾಗಿದ್ದ ಸುಮಾರು 24 ಜಾನುವಾರುಗಳನ್ನು ಕಳೆದುಕೊಂಡು ಕುಟುಂಬದ ಸದಸ್ಯರು ಮರುಗುತ್ತಿದ್ದಾರೆ.

ನಾಗರಹೊಳೆ ಅರಣ್ಯದಿಂದ ಹೊರಬಂದಿರಬಹುದು ಎಂದು ಹೇಳಲಾಗುತ್ತಿರುವ ಹುಲಿರಾಯ ಕಳೆದ ತಿಂಗಳು 20ರಂದು ಕೋತೂರಿನ ತಮ್ಮಯ್ಯ ಎನ್ನುವವರ ಕೊಟ್ಟಿಗೆಯಲ್ಲಿದ್ದ ಹೋರಿಯ ನೆತ್ತರನ್ನು ನೆಕ್ಕುವ ಮೂಲಕ ಜಾನುವಾರಗಳ ಬೇಟೆಯಾರಂಭಿಸಿತು. ಇಲ್ಲಿವರೆಗೆ ಹೋರಿ, ಹಸು, ಕರು, ಮೇಕೆ ಸೇರಿದಂತೆ 24 ಜಾನುವಾರಗಳ ಜೊತೆ ಎರಡು ನಾಯಿಗಳ ರಕ್ತದ ರುಚಿಯನ್ನೂ ನೋಡಿದೆ. ಆದರೆ, ಈ ಹುಲಿಯು ಕೋಣ, ಎಮ್ಮೆಗಳನ್ನು ಮೂಸಿಯೂ ನೋಡುತ್ತಿಲ್ಲ.

ಬದಲಾದ ಚಿತ್ರಣ: ಹುಲಿಯ ಆಗಮನದಿಂದ ಈ ಭಾಗದ ಜನರ ದಿನಚರಿಯೇ ಬದಲಾಗಿದೆ. ಈ ಭಾಗದ ಸುತ್ತ ಕಾಫಿ ತೋಟಗಳಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವಿಸುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಹುಲಿಯ ಭೀತಿಯಿಂದ ಅವರ‌್ಯಾರೂ ತೋಟಗಳತ್ತ ಮುಖ ಮಾಡುತ್ತಿಲ್ಲ. ಕಾಫಿ ತೋಟಗಳೆಲ್ಲ ಸೂಕ್ತ ನಿರ್ವಹಣೆಯಿಲ್ಲದೇ, ಕಸದ ಕೊಂಪೆಯಂತೆ ಕಾಣುತ್ತಿವೆ. 

ಮತ್ತೊಂದೆಡೆ ಮಕ್ಕಳು ಶಾಲೆಯನ್ನು ಮರೆತುಬಿಟ್ಟಂತಿದೆ. ಹುದಿಕೇರಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 48 ವಿದ್ಯಾರ್ಥಿಗಳ ಪೈಕಿ ಕೇವಲ ನಾಲ್ಕೈದು ಮಕ್ಕಳು ಮಾತ್ರ ಹಾಜರಾಗುತ್ತಿದ್ದಾರೆ.

ಸಂಜೆಯಾಗುತ್ತಿದ್ದಂತೆ ಜನರ ಓಡಾಟ ಕಡಿಮೆಯಾಗಿದೆ. ಎಷ್ಟರಮಟ್ಟಿಗೆ ಎಂದರೆ, ಹೆಂಡದಂಗಡಿಯತ್ತ ಸಹ ಯಾರೂ ಹೆಜ್ಜೆಹಾಕುತ್ತಿಲ್ಲ. ಈಗ ರಾತ್ರಿಯಿಡೀ ಮನೆಮಂದಿಯೆಲ್ಲ ಜಾಗರಣೆ ಮಾಡಿಕೊಂಡು, ದನದ ಕೊಟ್ಟಿಗೆ ಮುಂದೆ ಬೆಂಕಿ ಹಾಕಿ, ಶಬ್ದ ಮಾಡುತ್ತ ಕೂಡುತ್ತಿದ್ದಾರೆ. ಪಾತ್ರೆ ಬಾರಿಸುವುದು, ನಗಾರಿ ಬಾರಿಸುವುದು ಮಾಡುತ್ತಿದ್ದಾರೆ. ಹುಲಿ ಇತ್ತ ತಲೆಹಾಕಬಾರದು ಎಂದು ಕೆಲವರು ಪಟಾಕಿ ಸಿಡಿಸುತ್ತಿದ್ದಾರೆ. ಹುಲಿ ದಾಳಿ ಮಾಡಿದ ಕೊಟ್ಟಿಗೆ ಬಳಿ ಬೋನಿಟ್ಟು ಕಾಯುವುದು, ಮರಗಳಲ್ಲಿ ಗೋಪುರ (ವಾಚ್ ಟವರ್) ಕಟ್ಟುವುದು, ಅರಿವಳಿಕೆ ಮದ್ದಿನ ಬಂದೂಕು ಹಿಡಿದುಕೊಂಡು ಅರಣ್ಯ ಸುತ್ತುವುದು, ಕೊನೆಗೆ ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ~ಅಭಿಮನ್ಯು~ ಆನೆಯ ನೆರವನ್ನು ಕೂಡ ಅರಣ್ಯ ಇಲಾಖೆಯವರು ಪಡೆದದ್ದೇ ಬಂತು. ಫಲಿತಾಂಶ ಮಾತ್ರ ಶೂನ್ಯ.

ಮಡಿಕೇರಿ, ತಿತಿಮತಿ, ಪೊನ್ನಂಪೇಟೆ, ಮಾಕುಟ್ಟ, ನಾಗರಹೊಳೆ ಸೇರಿದಂತೆ ವಿವಿಧ ವಿಭಾಗಗಳ ಸುಮಾರು 40ರಿಂದ 50 ಜನ ಅರಣ್ಯಾಧಿಕಾರಿಗಳು ಹಗಲು-ರಾತ್ರಿ ಎನ್ನದೇ ಹುಡುಕಿದರೂ ಹುಲಿ ಹೆಜ್ಜೆಗಳು ಕಂಡಿವೆ ಹೊರತು ಹುಲಿ ಕಂಡಿಲ್ಲ.

ಗುಂಡಿಕ್ಕಲು ಅನುಮತಿ ನೀಡಿ: ~ನಾವು ಕೊಡವರು. ಕಾಡಿನಲ್ಲಿ ಹುಲಿ ಬೇಟೆಯಾಡುತ್ತಿದ್ದ ವಂಶ ನಮ್ಮದು. ಇಷ್ಟೊಂದು ಜನರಿಗೆ ತೊಂದರೆ ನೀಡುತ್ತಿರುವ ಹುಲಿಯನ್ನು ಕೊಲ್ಲಲು ನಮಗೆ ಅನುಮತಿ ನೀಡಿ, ನಮ್ಮ ಬಳಿ ಇರುವ ಕೋವಿಯಿಂದಲೇ ಅದನ್ನು ಹೊಡೆದು ಸಾಯಿಸುತ್ತೇವೆ~ ಎನ್ನುವ ಹಿರಿಯಜ್ಜ ನಂಜಪ್ಪ ಅವರ ಮಾತುಗಳು ಹತಾಶೆಯ ಮಾತುಗಳಂತೆ ಕಂಡುಬಂದರೂ, ಅರಣ್ಯ ಇಲಾಖೆಗೆ ಸವಾಲು ಹಾಕುವಂತಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.