ADVERTISEMENT

ಶಬರಿಮಲೆ: ಕರ್ನಾಟಕ ಭವನಕ್ಕೆ ಜನವರಿ 7ರಂದು ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಸಿದ್ದಾಪುರ (ಕುಂದಾಪುರ ತಾ.): ಕರ್ನಾಟಕದಿಂದ ವಾರ್ಷಿಕ 90 ಸಾವಿರ ಭಕ್ತರು ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದು, ಕರ್ನಾಟಕದ ಯಾತ್ರಿಕರ ಅನುಕೂಲಕ್ಕಾಗಿ ಕೇರಳ ಸರ್ಕಾರದ ಸಹಯೋಗದೊಂದಿಗೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಶಬರಿಮಲೆ ಸಮೀಪದ ನೀಲಿಕ್ಕಲ್‌ನಲ್ಲಿ ಕರ್ನಾಟಕ ಭವನಕ್ಕೆ ಇದೇ 7ರಂದು ಶಿಲಾನ್ಯಾಸ ನಡೆಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲೆಯ ಹಿಲಿಯಾಣದಲ್ಲಿ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ತುರ್ತು ಸಂದರ್ಭದಲ್ಲಿ ಉಪಯೋಗಕ್ಕಾಗಿ ಕರ್ನಾಟಕ ಗಡಿಯಿಂದ ಶಬರಿಮಲೆ ಮಾರ್ಗ ಮಧ್ಯೆ 100 ಹಾಸಿಗೆಗಳ ಮೂರು ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಆಸ್ಪತ್ರೆಯಲ್ಲಿ 2 ಅಂಬುಲೆನ್ಸ್‌ಗಳು ಮತ್ತು ಪ್ರತ್ಯೇಕವಾಗಿ 90 ಜನ ಪೊಲೀಸರು, 30 ಮಂದಿ  ಕ್ಷಿಪ್ರ ಕಾರ್ಯಪಡೆ ಪೊಲೀಸರು 24 ಗಂಟೆ ಕಾರ್ಯ ನಿರ್ವಹಿಸುತ್ತಾರೆ ಎಂದರು. 

ಸರ್ಕಾರದಿಂದ ಶಬರಿಮಲೆ ಯಾತ್ರೆಯಲ್ಲಿ ಕರ್ನಾಟಕದ ಭಕ್ತರು ಯಾವುದೇ ಸೌಲಭ್ಯ ವಂಚಿತರಾಗಿ ದುರಂತಗಳು ಸಂಭವಿಸಬಾರದು. ಯಾತ್ರಿಕರ ಪ್ರವಾಸ  ಸುಗಮಪಡಿಸುವ ಉದ್ದೇಶದಿಂದ ಸರ್ಕಾರ ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಾರ್ಗ ಮಧ್ಯೆ ಸೇವಾ ಕೇಂದ್ರಗಳನ್ನು ನಿರ್ಮಾಣ ಮಾಡಲು ಸರ್ಕಾರ ಚಿಂತಿಸಿದ್ದು, ಇಲ್ಲಿ ಹತ್ತು ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.

ಕನ್ನಡ ಬಲ್ಲ ಅಧಿಕಾರಿಗಳು, ಪೊಲೀಸರು ಮತ್ತು ವೈದ್ಯರನ್ನು ಸರ್ಕಾರದಿಂದ ಕೇರಳದಲ್ಲಿ ನಿಯೋಜನೆ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.