ADVERTISEMENT

ಶರ್ಮಾನದ್ದು ವ್ಯಾಪ್ತಿಗೆ ಬಾರದ ವಿಷಯ: ಶಶಿಕಿರಣ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST

ಬೆಂಗಳೂರು: 'ತೇಜರಾಜ್‌ ಶರ್ಮಾನ ದೂರಿನ ವಿಷಯಗಳು ನನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಲೋಕಾಯುಕ್ತರು, ಉಪ ಲೋಕಾಯುಕ್ತರು ಹಾಗೂ ಸಹಾಯಕ ರಿಜಿಸ್ಟರಾರ್‌ಗೆ ಅವರದ್ದೇ ಆದ ಕಾರ್ಯವ್ಯಾಪ್ತಿ ಇರುತ್ತದೆ. ಅದನ್ನು ತಿಳಿಯದೆ ನನ್ನನ್ನು ಕೊಲೆ ಮಾಡುವ ಹಂತಕ್ಕೆ ಬರುವಂಥದ್ದು ಆತನಿಗೆ ಏನಾಗಿತ್ತೋ ಎಂಬುದು ಗೊತ್ತಿಲ್ಲವೆಂದು ತಂದೆ ಹೇಳಿದ್ದಾರೆ’ ಎಂಬುದಾಗಿ ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ ಪುತ್ರ ವಕೀಲ ಶಶಿಕಿರಣ್ ತಿಳಿಸಿದರು.

ಮಲ್ಯ ಆಸ್ಪತ್ರೆ ಬಳಿ ’ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ. ಅದೃಷ್ಟವಶಾತ್‌ ಜೀವಕ್ಕೆ ಕುತ್ತು ಬರುವ ರೀತಿಯಲ್ಲಿ ಯಾವುದೇ ಅಂಗಾಂಗಕ್ಕೆ ಹಾನಿಯಾಗಿಲ್ಲ’ ಎಂದರು.

‘ದೂರುಗಳನ್ನು ಮುಕ್ತಾಯ ಮಾಡಿದ್ದರ ಬಗ್ಗೆ ಚರ್ಚಿಸಲೆಂದು ಶರ್ಮಾ, ನನ್ನ ಕೊಠಡಿಗೆ ಬಂದಿದ್ದ. ಕೆಲ ನಿಮಿಷ ವಾಗ್ವಾದ ನಡೆಸಿ, ನಂತರ ಏಕಾಏಕಿ ದಾಳಿ ಮಾಡಿದ. ರಕ್ಷಣೆಗಾಗಿ ಕೈಗಳನ್ನು ಮುಂದೆ ಒಡ್ಡಿದೆ. ಹೀಗಾಗಿ ಕೈಗಳಿಗೂ ಗಾಯವಾಯಿತೆಂದು ಘಟನೆ ಬಗ್ಗೆ ವಿವರಿಸಿದ್ದಾರೆ’ ಎಂದರು.

ADVERTISEMENT

‘ಈ ಸುದ್ದಿ ತಿಳಿದು ತಾಯಿ ಶಕುಂತಲಾ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ’ ಎಂದರು.

ಪೊಲೀಸರಿಗೆ ಹೇಳಿಕೆ ನೀಡಿರುವ ಕುಟುಂಬದವರು, ‘ನಮಗೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಗತ್ಯವಿಲ್ಲ’ ಎಂದಿದ್ದಾರೆ.

ಡಿಸಿಪಿ ಯೋಗೇಶ್ ಅಮಾನತು
ಬೆಂಗಳೂರು:
ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್‌ಶೆಟ್ಟಿಗೆ ಚಾಕು ಇರಿತ ಪ್ರಕರಣದಲ್ಲಿ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಯೋಗೇಶ್ ಅವರನ್ನು ಅಮಾನತು ಮಾಡಲಾಗಿದೆ.

ಲೋಕಾಯುಕ್ತ ಕಚೇರಿಯ ಭದ್ರತಾ ವೈಫಲ್ಯದಿಂದಲೇ ವಿಶ್ವನಾಥ್ ಶೆಟ್ಟಿ ಅವರ ಹತ್ಯೆಗೆ ಯತ್ನ ನಡೆದಿದೆ ಎಂದು ‌ಬೆಂಗಳೂರು ಪೊಲೀಸ್ ಕಮಿಷನರ್ ಟಿ. ಸುನೀಲ್‌ಕುಮಾರ್ ಗೃಹ ಇಲಾಖೆಗೆ ಗುರುವಾರ ವರದಿ ಕೊಟ್ಟಿದ್ದರು. ಅದನ್ನು ಆಧರಿಸಿ ಡಿಸಿಪಿ ಯೋಗೇಶ್ ಅಮಾನತಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.