ADVERTISEMENT

ಶಾಸಕರ ಸಂಖ್ಯಾಬಲ ಹೆಚ್ಚಳಕ್ಕೆ ಬಿಎಸ್‌ವೈ ತಂತ್ರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಬೆಂಗಳೂರು: `ನಾಯಕತ್ವ ಬದಲಾವಣೆ ಇಲ್ಲ~ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ ನಂತರ ವಿಚಲಿತಗೊಂಡಿರುವ ಬಿ.ಎಸ್.ಯಡಿಯೂರಪ್ಪ ಅವರು ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಆದರೆ ಪ್ರಯತ್ನ ಕೈಬಿಡದೆ ಬೆಂಬಲಿಗ ಶಾಸಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ.

ಪಕ್ಷ ಆಯೋಜಿಸಿದ್ದ ಚಿಂತನ-ಮಂಥನ ಸಭೆ ಮುಗಿಸಿ ರೇಸ್‌ಕೋರ್ಸ್ ರಸ್ತೆಯ ನಿವಾಸಕ್ಕೆ ಬಂದ ಯಡಿಯೂರಪ್ಪ, ಸಂಜೆವರೆಗೂ ತಮ್ಮ ಬೆಂಬಲಿಗ ಸಚಿವರು ಮತ್ತು ಶಾಸಕರ ಸಭೆ ನಡೆಸಿದರು. ಬೆಂಬಲಿಗರ ಸಂಖ್ಯೆ ಹೆಚ್ಚಿಸುವ ಪ್ರಕ್ರಿಯೆಯ ಉಸ್ತುವಾರಿಗೆ ಆಪ್ತರನ್ನು ನಿಯೋಜಿಸಿದ್ದಾರೆ. ತಮ್ಮ 70ನೇ ಹುಟ್ಟುಹಬ್ಬದ ಅಂಗವಾಗಿ ಫೆ. 27ರ ರಾತ್ರಿ ಎಲ್ಲ ಶಾಸಕರು ಮತ್ತು ಸಂಸದರನ್ನು ಊಟಕ್ಕೆ ಮನೆಗೆ ಆಹ್ವಾನಿಲಿದ್ದು, ಅಲ್ಲಿ ಮುಂದಿನ ನಡೆ ನಿರ್ಧಾರವಾಗಲಿದೆ.
 
ಗಡ್ಕರಿ ಹೇಳಿಕೆಯಿಂದ ಯಡಿಯೂರಪ್ಪ ಪರ ಸಚಿವರು ಮತ್ತು ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. `ಲೋಡ್ ಮಾಡಿದ ರಿವಾಲ್ವರ್ ಅನ್ನು ಬಳಸದೆ ಜೇಬಿನಲ್ಲಿ ಇಟ್ಟುಕೊಂಡರೆ ಅಪಾಯ. ಆದಷ್ಟು ಬೇಗ ಫೈರ್ ಮಾಡಬೇಕು~ ಎಂದು ಶಾಸಕ ಶಿವನಗೌಡ ನಾಯಕ ಸೇರಿದಂತೆ ಹಲವರು ಪಕ್ಷದ ವಿರುದ್ಧ ಹೋರಾಟಕ್ಕೆ ಸಜ್ಜಾಗುವಂತೆ ಸಲಹೆ ಮಾಡಿದರು ಎನ್ನಲಾಗಿದೆ.

ಹಿಂದುಳಿದ ವರ್ಗಗಳ ವೇದಿಕೆ ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ತೋಟದಪ್ಪ ಛತ್ರದಲ್ಲಿ ಸೋಮವಾರ ಬೆಳಿಗ್ಗೆ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿದೆ. ಈ ವೇದಿಕೆಯನ್ನು ಹೈಕಮಾಂಡ್ ವಿರುದ್ಧ ವಾಗ್ದಾಳಿಗೆ ಬಳಸುವ ಲೆಕ್ಕಾಚಾರ ನಡೆದಿದೆ. 

ಎಲ್ಲರ ಜತೆಗೂ ಪ್ರತ್ಯೇಕವಾಗಿಯೇ ಮಾತನಾಡಲಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಕನಿಷ್ಠ 80 ಮಂದಿ ಶಾಸಕರು ಇರುವಂತೆ ನೋಡಿಕೊಳ್ಳಬೇಕು ಎಂದು ತಮ್ಮ ಆಪ್ತ ಸಚಿವರಿಗೆ ಯಡಿಯೂರಪ್ಪ ಕಟ್ಟಾಜ್ಞೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಮುರುಗೇಶ ನಿರಾಣಿ, ಸಿ.ಎಂ.ಉದಾಸಿ, ಶೋಭಾ ಕರಂದ್ಲಾಜೆ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಶಾಸಕರನ್ನು  ಸೆಳೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಆದರೆ, ರೆಸಾರ್ಟ್ ಕೇಂದ್ರಿತ ರಾಜಕೀಯದಿಂದ ದೂರ ಇದ್ದೇ ಬೆಂಬಲ ಕ್ರೋಡೀಕರಿಸುವ ಪ್ರಯತ್ನ ಸಾಗಿದೆ.

ಹುಟ್ಟುಹಬ್ಬದ ಔತಣದಲ್ಲಿ ಮುಂದಿನ ನಡೆ ಸ್ಪಷ್ಟವಾಗಲಿದೆ. ತಕ್ಷಣವೇ ಪಕ್ಷದ ವಿರುದ್ಧ ತಿರುಗಿಬೀಳದಿದ್ದರೂ ಮುಖ್ಯಮಂತ್ರಿ ಗಾದಿಗಾಗಿ ಒತ್ತಡ ಹೇರುವ ಪ್ರಕ್ರಿಯೆ ಮುಂದುವರಿಯಲಿದೆ. ಮಾರ್ಚ್ 3ರ  ನಂತರ ವರಿಷ್ಠರ ಮುಂದೆ ಶಾಸಕರನ್ನು ಪೆರೇಡ್ ಮಾಡಿಸಿ ಪಟ್ಟು ಬಿಗಿಗೊಳಿಸುವ ವ್ಯೆಹ ರಚನೆ ನಡೆದಿದೆ.

ಸಹವಾಸ ಬೇಡ: ವರಿಷ್ಠರ ವರ್ತನೆಯಿಂದ ಬೇಸತ್ತ ಶಾಸಕರು ನೇರವಾಗಿ ರಾಜ್ಯಪಾಲರ ಬಳಿ ಹೋಗಿ `ಸದಾನಂದಗೌಡರ ಮೇಲೆ ವಿಶ್ವಾಸ ಇಲ್ಲ~ ಎಂದು ಪತ್ರ ಕೊಡುವುದರ ಬಗ್ಗೆಯೂ ಯೋಚನೆ ಮಾಡಿದ್ದರು. ಆದರೆ, ರಾಜ್ಯಪಾಲರು ತಮಗೆ ಅನುಕೂಲವಾಗಿ ನಡೆದುಕೊಳ್ಳಲಾರರು ಎಂಬ ಭೀತಿಯಿಂದ ಈ ಸಾಹಸಕ್ಕೆ ಕೈಹಾಕದಿರಲು ನಿರ್ಧರಿಸಿದ್ದಾರೆ.

ಬದಲಿಗೆ ಪಕ್ಷದ ವರಿಷ್ಠರಿಗೇ ಪತ್ರ ನೀಡಿ ಒತ್ತಡ ಹೇರಲಿದ್ದಾರೆ. ವರಿಷ್ಠರ ನಿಲುವನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಯಡಿಯೂರಪ್ಪ ಬಣ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.