ADVERTISEMENT

ಶಾಸಕಾಂಗ ಸಭೆಗೆ ಡಿವಿಎಸ್ ನಕಾರ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST

ಬೆಂಗಳೂರು: ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಡಳಿತಾರೂಢ ಬಿಜೆಪಿಯ 38 ಶಾಸಕರು ತೀವ್ರ ಒತ್ತಡ ಹೇರುತ್ತಿದ್ದರೂ, ಸಭೆ ಕರೆಯಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಬರೆದಿರುವ ಪತ್ರದ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಒತ್ತಾಯಿಸಿ ಶಾಸಕರು ಬರೆದಿರುವ ಪತ್ರ ಕೈಸೇರಿದೆ. ಪಕ್ಷದ ವಿದ್ಯಮಾನಗಳ ಬಗ್ಗೆ ಅಧ್ಯಕ್ಷರಿಗೆ ನೀಡಿದ ಮಾಹಿತಿ ಕುರಿತು ತಾವು ಶಾಸಕರೊಂದಿಗೆ ಚರ್ಚಿಸುವ ಮತ್ತು ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯ ಇಲ್ಲ ಎಂದು ಅವರು ತಮ್ಮ ಗೃಹ ಕಚೇರಿ `ಕೃಷ್ಣಾ~ದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

19 ಶಾಸಕರು ಸಹಿ ಮಾಡಿದ ಪತ್ರ ಬುಧವಾರ ಮುಖ್ಯಮಂತ್ರಿಯವರಿಗೆ ರವಾನೆ ಆಗಿತ್ತು. ಅಷ್ಟೇ ಸಂಖ್ಯೆಯ ಶಾಸಕರ ಸಹಿಯುಳ್ಳ ಎರಡನೆಯ ಪತ್ರವನ್ನು ಗುರುವಾರ ರವಾನಿಸಲಾಗಿದೆ. ಮಾಜಿ ಮುಖ್ಯಮಂತಿ ಬಿ.ಎಸ್. ಯಡಿಯೂರಪ್ಪ ಬಣದ 6 ಮಂದಿ ಸಚಿವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದಿರುವ ಪತ್ರದ ವಿವರಗಳು ಬಹಿರಂಗವಾದ ನಂತರ ರಾಜ್ಯ ಬಿಜೆಪಿ ಪಾಳೆಯದಲ್ಲಿ `ಬಣ ರಾಜಕೀಯ~ ಈ ರೂಪದಲ್ಲಿ ಮತ್ತೆ ಭುಗಿಲೆದ್ದಿದೆ.

ಬಿಜೆಪಿ ಸಂಸದರ ಸಭೆಗೆ ಒತ್ತಾಯ
ನವದೆಹಲಿ:
ರಾಜ್ಯ ಬಿಜೆಪಿಯೊಳಗೆ ಭುಗಿಲೆದ್ದಿರುವ `ಬಣ ರಾಜಕಾರಣ~ ದೆಹಲಿಗೂ ಕಾಲಿಟ್ಟಿದ್ದು, ತಕ್ಷಣವೇ ಬಿಜೆಪಿ ಸಂಸದರ ಸಭೆ ಕರೆಯುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವ 13 ಮಂದಿ ಸಂಸದರು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
`ನೀವು ಮತ್ತು ಕೆ.ಎಸ್. ಈಶ್ವರಪ್ಪ ಮಾರ್ಚ್ 26ರಂದು ಹೈಕಮಾಂಡ್‌ಗೆ ಬರೆದಿರುವ ಪತ್ರ ತೀವ್ರ ರಾಜಕೀಯ ಪರಿಣಾಮಗಳನ್ನು ಉಂಟುಮಾಡಿದ್ದು, ಈ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ಸಂಸದರ ಸಭೆ ಕರೆಯಬೇಕೆಂದು ಒತ್ತಾಯ ಮಾಡಿದ್ದಾರೆ.
ಪಕ್ಷದೊಳಗಿನ ಬೆಳವಣಿಗೆ ಮುಂಬರುವ ಚುನಾವಣೆ ಮೇಲೆ ಭಾರಿ ಪ್ರಭಾವ ಬೀರಲಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಹಾಗೂ ಚುನಾವಣೆ ದೃಷ್ಟಿಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ತಕ್ಷಣ ಬಿಜೆಪಿ ಸಂಸದರ ಸಭೆ ಕರೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಸುರೇಶ್ ಅಂಗಡಿ  `ಲೆಟರ್‌ಹೆಡ್~ನಲ್ಲಿ ಬರೆಯಲಾಗಿರುವ ಪತ್ರಕ್ಕೆ ಸಂಸದರಾದ ಶಿವಕುಮಾರ ಉದಾಸಿ, ಜನಾರ್ದನಸ್ವಾಮಿ, ಬಸವರಾಜ ಪಾಟೀಲ್ ಸೇಡಂ, ಪಿ.ಸಿ.ಮೋಹನ್, ಶಿವರಾಮಗೌಡ, ಗದ್ದಿಗೌಡರ್, ಸುರೇಶ್ ಅಂಗಡಿ, ಜಿ.ಎಂ.ಸಿದ್ದೇಶ್, ಬಿ.ವೈ. ರಾಘವೇಂದ್ರ, ಜಿ.ಎಸ್. ಬಸವರಾಜ್, ಡಿ.ಬಿ. ಚಂದ್ರೇಗೌಡ, ಆಯನೂರು ಮಂಜುನಾಥ್ ಮತ್ತು ರಮೇಶ್ ಕತ್ತಿ ಸಹಿ ಹಾಕಿದ್ದಾರೆ. ಪತ್ರವನ್ನು ಮುಖ್ಯಮಂತ್ರಿಗೆ ಫ್ಯಾಕ್ಸ್ ಮಾಡಿದ್ದಾರೆ.
ಬ್ಲಾಕ್‌ಮೇಲ್ ಮುಖ್ಯಮಂತ್ರಿ:
ಪಕ್ಷದ ವರಿಷ್ಠರಿಗೆ ಬರೆದಿರುವ ಪತ್ರವನ್ನು ಸದಾನಂದಗೌಡ ಮತ್ತು ಈಶ್ವರಪ್ಪ ಸೋರಿಕೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿಗೆ ನಿಷ್ಠರಾದ ಸಚಿವರನ್ನು `ಬ್ಲಾಕ್ ಮೇಲ್~ ಮಾಡುತ್ತಿದ್ದಾರೆ. ಸಂಪುಟದಿಂದ ಕೈಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಬಣ ರಾಜಕಾರಣದಿಂದ ಬಿಜೆಪಿ ಕೀಳುಮಟ್ಟಕ್ಕೆ ಇಳಿದಿದೆ. ಹೈಕಮಾಂಡ್ ಇದನ್ನೆಲ್ಲ ನೋಡಿಕೊಂಡು ಮೌನವಾಗಿ ಕುಳಿತಿದೆ ಎಂದು ಜಿ.ಎಸ್. ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಚ್ಚಾಡುವ ನಾಯಕರಿಗೆ ಜನರೇ ಬುದ್ದಿ ಕಲಿಸುತ್ತಾರೆ. ರಾಜ್ಯ ಕಾಂಗ್ರೆಸ್ ನಾಯಕರು ಕಚ್ಚಾಡಿ ಬೆಲೆ ತೆತ್ತಿದ್ದಾರೆ. ಬಿಜೆಪಿ ನಾಯಕರು ಇದನ್ನು ನೋಡಿಕೊಂಡು ಪಾಠ ಕಲಿಯಬೇಕು ಎಂದು ಬಸವರಾಜ್ ಕಿವಿ ಮಾತು ಹೇಳಿದರು. ಮುಖ್ಯಮಂತ್ರಿ ತಕ್ಷಣ ಬಿಜೆಪಿ ಶಾಸಕಾಂಗ ಮತ್ತು ಸಂಸದರ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದರು.
ಮುಖ್ಯಮಂತ್ರಿ ಸ್ವತಂತ್ರರು:
`ಸಂಪುಟದಲ್ಲಿ ಯಾರು ಇರಬೇಕೆಂದು ತೀರ್ಮಾನಿಸಲು ಮುಖ್ಯಮಂತ್ರಿ ಸ್ವತಂತ್ರರು. ಈ ವಿಷಯದಲ್ಲಿ ಪಕ್ಷದ ಹೈಕಮಾಂಡಿಗೂ ಅಧಿಕಾರವಿದ್ದು, ನಾನೇನು ಹೇಳುವುದಿಲ್ಲ~ ಎಂದು ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಅಭಿಪ್ರಾಯಪಟ್ಟರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಆಗಮಿಸಿದ್ದ ಶೋಭಾ. `ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರು ಹೈಕಮಾಂಡ್‌ಗೆ ಪತ್ರ ಬರೆದಿಲ್ಲ ಎಂಬ ಭಾವನೆ ನನಗಿದೆ~ ಎಂದು  ಹೇಳಿದರು.
`ನಾನು ಮೀರ್‌ಸಾದಿಕ್ ಮತ್ತು ಮಲ್ಲಪ್ಪಶೆಟ್ಟಿ ಎಂದು ಟೀಕಿಸಿದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು. ನಮ್ಮನ್ನೇ ಉದ್ದೇಶಿಸಿ ಈ ಮಾತು ಹೇಳಿದ್ದಾರೆಂದು ಸದಾನಂದಗೌಡ ಮತ್ತು ಈಶ್ವರಪ್ಪ ಯಾಕೆ ಭಾವಿಸಬೇಕು~ ಎಂದು ಅವರು ಕೇಳಿದರು. `ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಆಲೋಚನೆ ಇಲ್ಲ. ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅನುಭವವಿದೆ~ ಎಂದು ಶೋಭಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ರಾಜ್ಯ ಬಿಜೆಪಿಯೊಳಗಿನ ಭುಗಿಲೆದ್ದಿರುವ ಬಣ ರಾಜಕಾರಣದ ಬಗ್ಗೆ ಬಿಜೆಪಿ ವರಿಷ್ಠರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ನಾಗಪುರದಲ್ಲಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.



`ಪಕ್ಷದ ವಿದ್ಯಮಾನಗಳ ಬಗ್ಗೆ ನಾನು ಮತ್ತು ಪಕ್ಷದ ಅಧ್ಯಕ್ಷರು ಬರೆದಿರುವ ಪತ್ರದ ವಿವರಗಳನ್ನು ವರಿಷ್ಠರು ಹೊರತುಪಡಿಸಿ ಬೇರೆ ಯಾರ ಜತೆಗೂ ಚರ್ಚಿಸುವ ಅಗತ್ಯ ಇಲ್ಲ. ಈ ವಿಷಯವನ್ನು ಪತ್ರ ಬರೆದಿರುವ ಶಾಸಕರಿಗೆ ಮನವರಿಕೆ ಮಾಡಿಕೊಡುತ್ತೇನೆ~ ಎಂದು ಮುಖ್ಯಮಂತ್ರಿಯವರು ಹೇಳಿದರು.

`ಪಕ್ಷದ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ತಾವು ಬರೆದಿರುವ ಪತ್ರ ತೀರಾ ಹಳೆಯದು. ಅದು ಮಾಧ್ಯಮಗಳಲ್ಲಿ ಈಗ ಪ್ರಕಟವಾಗಿರುವುದರಿಂದ ಗೊಂದಲ ಉಂಟಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಪಕ್ಷದ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರುವುದು ನನ್ನ ಕರ್ತವ್ಯ. ಅದನ್ನೇ ಪತ್ರದಲ್ಲಿ ವಿವರಿಸಿದ್ದೇನೆ. ವರಿಷ್ಠರಿಗೆ ಎಲ್ಲವೂ ಗೊತ್ತಿದೆ~ ಎಂದರು. ಸಹಿ ಸಂಗ್ರಹ ಗುರುವಾರ ಕೂಡ ಮುಂದುವರಿದಿತ್ತು.
 
ಪತ್ರದ ಒಕ್ಕಣೆಯಲ್ಲಿ `ಗಡ್ಕರಿ ಅವರಿಗೆ ಪತ್ರ ಬರೆದಿರುವುದು ನೋವಿನ ಸಂಗತಿ~ ಎಂಬ ಉಲ್ಲೇಖ ಇದೆ. ಮುಖ್ಯಮಂತ್ರಿಯಾಗಿ ಒಂಬತ್ತು ತಿಂಗಳಾಗಿದೆ. ಒಮ್ಮೆಯೂ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಅಗತ್ಯವಿದ್ದು, ಕೂಡಲೇ ಸಭೆ ಕರೆಯಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಈ ಪತ್ರಕ್ಕೆ ಸಚಿವ ರಾಜುಗೌಡ, ಶಾಸಕರಾದ ಜಿ.ಕರುಣಾಕರ ರೆಡ್ಡಿ, ಬಿ.ಸುರೇಶ ಗೌಡ, ತಿಪ್ಪೇಸ್ವಾಮಿ, ಚಿಕ್ಕನಗೌಡ್ರ, ಕೆ.ಜಿ.ಕುಮಾರಸ್ವಾಮಿ, ಮಾಡಾಳು ವಿರೂಪಾಕ್ಷಪ್ಪ, ಅಪ್ಪಚ್ಚು ರಂಜನ್, ಡಾ.ವಿಶ್ವನಾಥ್, ಪ್ರಹ್ಲಾದ್ ರೇಮಾನಿ, ಎಸ್.ವಿ.ರಾಮಚಂದ್ರ, ಸಿ.ಸಿ.ಪಾಟೀಲ, ನೆಹರು ಓಲೇಕಾರ್, ಜಗದೀಶ ಮೆಟಗುಡ್ ಮತ್ತು ವಿಧಾನ ಪರಿಷತ್‌ನ ನಾಲ್ವರು ಸದಸ್ಯರು ಸಹಿ ಹಾಕಿದ್ದಾರೆ.

ಬಿಎಸ್‌ವೈ ಮನೆಯಲ್ಲಿ ಚಟುವಟಿಕೆ: ತೀವ್ರ ಬಳಲಿಕೆ ಕಾರಣ ಬುಧವಾರ ರಾತ್ರಿ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪ ಗುರುವಾರ ಮಧ್ಯಾಹ್ನ ಮನೆಗೆ ವಾಪಸಾದರು. ನಂತರ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡವು.

ಸಚಿವರು, ಶಾಸಕರು ಅವರನ್ನು ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಉಮೇಶ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಸಿ.ಎಂ.ಉದಾಸಿ  ಸೇರಿದಂತೆ ಹಲವರು ಯಡಿಯೂರಪ್ಪ ಜತೆ ಮಾತುಕತೆ ನಡೆಸಿದರು.

ನೀವೇ ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳ್ಳಿರಿಸಿದ ವ್ಯಕ್ತಿ ಈಗ ತಮ್ಮ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇನ್ನೂ ಸುಮ್ಮನಿರುವುದು ಸರಿಯಲ್ಲ. ದೃಢ ರಾಜಕೀಯ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಬೆಂಬಲಿಗರು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಏನನ್ನೂ ಹೇಳದ ಯಡಿಯೂರಪ್ಪ ಎಲ್ಲರ ಅನಿಸಿಕೆಗಳನ್ನೂ ತಾಳ್ಮೆಯಿಂದ ಆಲಿಸಿದರು. ಸಂಯಮ ಕಳೆದುಕೊಳ್ಳದಂತೆ ಆಪ್ತರಿಗೆ ಸೂಚಿಸಿದರು. ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮಾಡಿರುವ ಶಿಫಾರಸುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ತೀರ್ಮಾನ ಆಧರಿಸಿ ಅವರ ಮುಂದಿನ ನಡೆ ನಿರ್ಧಾರವಾಗಲಿದೆ ಎಂದು ಯಡಿಯೂರಪ್ಪ ಆಪ್ತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಯಡಿಯೂರಪ್ಪ ಅವರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಸುರೇಶಗೌಡ, `ನಾವು ಯಡಿಯೂರಪ್ಪ ಬಣದಲ್ಲಿ ಇದ್ದೇವೆ ಎನ್ನುವ ಕಾರಣಕ್ಕೆ ನಮ್ಮ ಕ್ಷೇತ್ರಗಳನ್ನು ಮುಖ್ಯಮಂತ್ರಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಂಥ ವಿಚಾರಗಳೂ ಚರ್ಚೆಯಾಗುವ ಅಗತ್ಯ ಇರುವುದರಿಂದ ಶಾಸಕಾಂಗ ಪಕ್ಷದ ಸಭೆ ಕರೆಯಬೇಕಾಗಿದೆ. ಇದಕ್ಕೆ ಮುಖ್ಯಮಂತ್ರಿ ಸ್ಪಂದಿಸಬೇಕು~ ಎಂದು ಆಗ್ರಹಪಡಿಸಿದರು.

ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿ, `ನಾವು ಎಂದೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಈ ಕುರಿತು ಗಡ್ಕರಿ ಅವರಿಗೆ ಪತ್ರ ಬರೆದಿರುವುದು ನೋವು ತಂದಿದೆ~ ಎಂದು ಹೇಳಿದರು. `ಪತ್ರ ಬರೆದಿದ್ದಕ್ಕೆ ನಮ್ಮ ವಿರೋಧ ಇಲ್ಲ. ರಾಜೀನಾಮೆ ಕೇಳಿದರೆ ಕೊಡುವುದಕ್ಕೂ ಸಿದ್ಧ~ ಎಂದು ಬೊಮ್ಮಾಯಿ ಹೇಳಿದರು.

ರೇಣುಕಾಚಾರ್ಯ ಮಾತನಾಡಿ, `ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಾವು ಎಂದೂ ಮುಖ್ಯಮಂತ್ರಿ ವಿರುದ್ಧ ಇಲ್ಲ. ನಾವು ಮತ ಹಾಕಿದ್ದರಿಂದಲೇ ಅವರು ಮುಖ್ಯಮಂತ್ರಿಯಾಗಿದ್ದಾರೆ~ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ಬಾಕ್ಸ್‌ಗೆ.....
ಸಂಪುಟ ವಿಸ್ತರಣೆಗೂ ಹೆಚ್ಚಿದ ಒತ್ತಡ
ಬೆಂಗಳೂರು: ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದ ಪತ್ರ ಪಕ್ಷದಲ್ಲಿ ಒಂದೆಡೆ ಸಂಚಲನ ಉಂಟು ಮಾಡಿದ್ದರೆ, ಮತ್ತೊಂದು ಕಡೆ ನಿಷ್ಠಾವಂತರೆಂದು ಹೇಳಿಕೊಳ್ಳುವ ಶಾಸಕರು ಸಂಪುಟ ವಿಸ್ತರಣೆಗೆ ಒತ್ತಾಯಿಸಿ ಶಾಸಕರ ಸಹಿ ಸಂಗ್ರಹವನ್ನು ಮುಂದುವರಿಸಿದ್ದಾರೆ.

ಸಿ.ಟಿ.ರವಿ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಯುತ್ತಿದೆ. ಇದುವರೆಗೂ ಒಟ್ಟು 74 ಶಾಸಕರು ಸಹಿ ಹಾಕಿದ್ದಾರೆ. ಅದರ ಪ್ರತಿಯನ್ನು ಯಡಿಯೂರಪ್ಪ ಅವರಿಗೆ ಗುರುವಾರ ಸಲ್ಲಿಸಲಾಯಿತು.ರೇಸ್‌ಕೋರ್ಸ್ ರಸ್ತೆ ಮನೆಗೆ ತೆರಳಿ ಮನವಿ ಪತ್ರ ನೀಡಿದ್ದೇವೆ. ಆದಷ್ಟು ಬೇಗ ಸಂಪುಟ ವಿಸ್ತರಣೆಗೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಆಗ್ರಹಪಡಿಸಲಾಗಿದೆ. ಇದಕ್ಕೆ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರವಿ ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರದ ನಂತರ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೂ ಮನವಿ ಪತ್ರ ನೀಡುತ್ತೇವೆ. ನಂತರ ವರಿಷ್ಠರಿಗೂ ನೀಡಲಾಗುವುದು ಎಂದು ಹೇಳಿದರು. ಸಂಪುಟ ವಿಸ್ತರಣೆಗೆ ತಡಮಾಡಿದಷ್ಟೂ ಪಕ್ಷಕ್ಕೇ ನಷ್ಟ. ಆದಷ್ಟು ಬೇಗ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.