ಬೆಂಗಳೂರು: ಸುಮಾರು 24 ಮಿತ್ರ ಪಕ್ಷಗಳ ಬೆಂಬಲ ಹೊಂದಿದ್ದ ‘ಯುಪಿಎ–1 ’ ಮತ್ತು ‘ಯುಪಿಎ–2’ಕ್ಕೆ ಹೋಲಿಸಿದರೆ 18 ಮಿತ್ರ ಪಕ್ಷಗಳ ಬೆಂಬಲ ಪಡೆದಿದ್ದ ಎನ್‌ಡಿಎ ಸರ್ಕಾರ ಶಾಸನ ರಚನೆಯಲ್ಲಿ ಮುಂಚೂಣಿಯಲ್ಲಿತ್ತು.
ಯುಪಿಎ ಮೊದಲನೇ ಮತ್ತು ಎರಡನೇ ಅವಧಿಯಲ್ಲಿ ಅನುಕ್ರಮವಾಗಿ 261 ಮತ್ತು 152 ಮಸೂದೆಗಳಿಗೆ ಸಂಸತ್ತಿನ ಒಪ್ಪಿಗೆ ದೊರೆತಿದೆ. ಆದರೆ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ 302 ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ದೊರಕಿತ್ತು.
ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನ (ಆರ್‌ಆರ್‌ಎಫ್) 15ನೇ ಲೋಕಸಭೆ ಅವಧಿಯಲ್ಲಿ ಶಾಸನ ರಚನೆ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿದೆ. ಎನ್‌ಡಿಎ ಸರ್ಕಾರದ ಅವಧಿಗೆ ಹೋಲಿಕೆ ಮಾಡಿದರೆ ಕಡಿಮೆ ಸಂಖ್ಯೆಯ ಮಸೂದೆಗಳಿಗೆ ಒಪ್ಪಿಗೆ ಪಡೆಯಲು ಮಾತ್ರ ಯುಪಿಎ ಯಶಸ್ವಿಯಾಗಿತ್ತು ಎಂಬ ಸಂಗತಿ ಸಂಶೋಧನಾ ವರದಿಯಲ್ಲಿದೆ.
ಸಮ್ಮಿಶ್ರ ಸರ್ಕಾರಗಳು ಅಧಿಕಾರದಲ್ಲಿದ್ದ ಬಹುತೇಕ ಸಂದರ್ಭಗಳಲ್ಲಿ ನಾಟಕೀಯವಾಗಿಯೇ ಮಸೂದೆಗಳಿಗೆ ಒಪ್ಪಿಗೆ ಪಡೆದಿರುವುದನ್ನು ಕಾಣಬಹುದು. ಸಮ್ಮಿಶ್ರ ಸರ್ಕಾರಗಳ ಯುಗವು ಶಾಸನ ರಚನೆಯನ್ನು ಬಲಹೀನಗೊಳಿಸುತ್ತಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ. ಲೋಕಸಭೆಯಲ್ಲಿ ಯಾವುದೇ ಪಕ್ಷಗಳಿಗೂ ಬಹುಮತ ಇಲ್ಲದ ಸಂದರ್ಭದಲ್ಲಿ ಸಂಸತ್ತಿನ ಕಲಾಪಗಳಿಗೆ ತೀವ್ರ ಅಡ್ಡಿಯಾಗುತ್ತದೆ ಮತ್ತು ಗುಣಮಟ್ಟರಹಿತ ಕಲಾಪ ನಡೆಯುತ್ತದೆ ಎಂಬುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ ಎಂದು ಆರ್‌ಆರ್‌ಎಫ್ ವರದಿಯಲ್ಲಿ ಉಲ್ಲೇಖಿಸಿದೆ.
ಬಾಕಿ ಮಸೂದೆಗಳು: 15ನೇ ಲೋಕಸಭೆ ಅವಧಿಯಲ್ಲಿ ಮಂಡನೆಯಾದ 58 ಮಸೂದೆಗಳು ಇನ್ನೂ ಸಂಸತ್ತಿನಲ್ಲಿ ಬಾಕಿ ಇವೆ. ಅಂದರೆ ಒಟ್ಟು ಮಂಡನೆಯಾದ ಮಸೂದೆಗಳಲ್ಲಿ ಶೇಕಡ 26ರಷ್ಟು ಬಾಕಿ ಉಳಿದಿವೆ. ಮಸೂದೆಗಳಿಗೆ ಒಪ್ಪಿಗೆ ಪಡೆಯುವ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಡುವೆ ಸಹಮತ ಮೂಡಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಇದಕ್ಕೆ ಮುಖ್ಯ ಕಾರಣ.
ಎಲ್ಲ ರಾಜಕೀಯ ಪಕ್ಷಗಳೂ ಸಂಸತ್ತಿನ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸಿರುವುದು ಕೂಡ ಇಷ್ಟೊಂದು ಸಂಖ್ಯೆಯ ಮಸೂದೆಗಳು ಒಪ್ಪಿಗೆ ಪಡೆಯದೇ ಉಳಿಯಲು ಕಾರಣ ಎಂಬ ಅಭಿಪ್ರಾಯ ವರದಿಯಲ್ಲಿದೆ.
ಶಾಸನರಚನೆಗೆ ಹಿನ್ನಡೆ: ಲೋಕಸಭೆಯ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ರಾಷ್ಟ್ರಪತಿ ಅವರ ಅಂಕಿತಕ್ಕೆ ಬಾಕಿ ಇರುವ ಹಾಗೂ ಸಂಸತ್ತಿನಲ್ಲಿ ಚರ್ಚೆಯಲ್ಲಿರುವ ಮಸೂದೆಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ. ಇದರಿಂದ ಶಾಸನರಚನೆಗೆ ನಡೆದ ಪ್ರಯತ್ನಕ್ಕೆ ಹಿನ್ನಡೆಯಾಗುತ್ತದೆ ಮತ್ತು ಇದಕ್ಕಾಗಿ ವ್ಯಯಿಸಿದ ಹಣ ವ್ಯರ್ಥವಾಗುತ್ತಿದೆ. ಇದೊಂದು ದುರದೃಷ್ಟಕರ ಸಂಗತಿ. ಲೋಕಸಭೆ ಅವಧಿ ಅಂತ್ಯವಾದ ತಕ್ಷಣ ಬಾಕಿ ಇರುವ ಮಸೂದೆಗಳು ಅಸ್ತಿತ್ವ ಕಳೆದುಕೊಳ್ಳುವಂತಹ ಪದ್ಧತಿಯನ್ನು ತೆಗೆದುಹಾಕಬೇಕು ಎಂದು ಆರ್‌ಆರ್‌ಎಫ್ ಸಲಹೆ ಮಾಡಿದೆ.
ತರಾತುರಿಗೆ ಉತ್ತರ: ಯುಪಿಎ ಸರ್ಕಾರವು ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿದು ಕೆಲವು ಮಸೂದೆಗಳನ್ನು ತರಾತುರಿಯಲ್ಲಿ ಸಂಸತ್ತಿನ ಮುಂದೆ ಇಟ್ಟಿತ್ತು. ಇಂತಹ ಮಸೂದೆಗಳನ್ನು ಹಿಂದಕ್ಕೆ ಕಳುಹಿಸಿ, ಪರಿಶೀಲನೆಗೆ ಒಳಪಡಿಸುವ ಅಧಿಕಾರ ಸಂಸತ್ತಿಗೆ ಇದೆ ಎಂಬುದು ಈ ಪ್ರಕರಣಗಳಲ್ಲಿ ಸಾಬೀತಾಗಿದೆ.
ತರಾತುರಿಯಲ್ಲಿ ಮಂಡಿಸಿದ ಆರು ಮಸೂದೆಗಳನ್ನು ಸರ್ಕಾರ ಹಿಂದಕ್ಕೆ ಪಡೆಯಿತು. ಕ್ರಿಮಿನಲ್ ಕಾನೂನು (ತಿದ್ದುಪಡಿ) ಮಸೂದೆ– 2012, ಲೋಕಪಾಲ ಮಸೂದೆ–2011, ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ– 2011, ಶತ್ರು ಆಸ್ತಿ (ತಿದ್ದುಪಡಿ) ಮಸೂದೆ– 2010, ಕಂಪೆನಿಗಳ ಮಸೂದೆ– 2009, ಸೆಬಿ (ತಿದ್ದುಪಡಿ) ಮಸೂದೆ– 2009 ಅನ್ನು ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಹಿಂದಕ್ಕೆ ಪಡೆಯಿತು.
ಸ್ಥಾಯಿ ಸಮಿತಿಗಳ ಪರಿಶೀಲನೆ ಬಳಿಕ ಈ ಆರು ಮಸೂದೆಗಳನ್ನೂ ಮತ್ತೆ ಮಂಡಿಸಲಾಯಿತು. ಈ ಪೈಕಿ ಶತ್ರು ಆಸ್ತಿ (ತಿದ್ದುಪಡಿ) ಮಸೂದೆ–2010ರ ಹೊರತಾಗಿ ಎಲ್ಲ ಮಸೂದೆಗಳಿಗೂ ಒಪ್ಪಿಗೆ ದೊರೆಯಿತು. ಪರಿಶೀಲನೆ ಬಳಿಕ ಮಂಡಿಸಿದ ಶತ್ರು ಆಸ್ತಿ (ತಿದ್ದುಪಡಿ) ಮಸೂದೆ–2012 ಇನ್ನೂ ಸಂಸತ್ತಿನಲ್ಲಿ ಬಾಕಿ ಇದೆ. ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸದೇ ಸರ್ಕಾರ ತರಾತುರಿಯಲ್ಲಿ ಮಂಡಿಸಿದ ಮಸೂದೆಗಳ ಅಂಗೀಕಾರ ಕಷ್ಟ. ಸ್ಥಾಯಿ ಸಮಿತಿಗಳು ಹೆಚ್ಚಿನ ಸಭೆ ನಡೆಸಿ, ಪರಿಶೀಲನೆ ನಡೆಸಿದಷ್ಟೂ ಮಸೂದೆಗಳ ಅಂಗೀಕಾರ ಸುಲಭವಾಗುತ್ತದೆ. ವಿವಿಧ ರಾಜಕೀಯ ಪಕ್ಷಗಳ ನಡುವೆ ಸಹಮತ ಮೂಡಿಸುವುದಕ್ಕೆ ಇದು ಸಹಕಾರಿಯಾಗುತ್ತದೆ ಎಂದು ಪ್ರತಿಷ್ಠಾನ ಅಭಿಪ್ರಾಯಪಟ್ಟಿದೆ.
ಖಾಸಗಿ ಮಸೂದೆಯಲ್ಲೂ ಹಿಂದಕ್ಕೆ: ಖಾಸಗಿ ಸದಸ್ಯರ ಮಸೂದೆಗಳ ಮಂಡನೆ ಮತ್ತು ಅಂಗೀಕಾರದಲ್ಲೂ 15ನೇ ಲೋಕಸಭೆ ಹಿಂದುಳಿದಿದೆ. 13ನೇ ಲೋಕಸಭೆಯಲ್ಲಿ 390 ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಲಾಗಿತ್ತು. ಈ ಪೈಕಿ 20 ಮಸೂದೆಗಳಿಗೆ (ಶೇ 5.13) ಸಂಸತ್ತಿನ ಒಪ್ಪಿಗೆ ದೊರಕಿತ್ತು. 14ನೇ ಲೋಕಸಭೆಯಲ್ಲಿ ಮಂಡನೆಯಾದ 406 ಖಾಸಗಿ ಸದಸ್ಯರ ಮಸೂದೆಗಳಲ್ಲಿ 22ಕ್ಕೆ (ಶೇ 5.42) ಅಂಗೀಕಾರ ಸಿಕ್ಕಿತ್ತು.
15ನೇ ಲೋಕಸಭೆಯ ಅವಧಿಯಲ್ಲಿ 373 ಖಾಸಗಿ ಸದಸ್ಯರ ಮಸೂದೆಗಳು ಮಂಡನೆಯಾಗಿದ್ದು ಕೇವಲ ಮೂರು ಮಸೂದೆಗಳಿಗೆ (ಶೇ 0.80) ಒಪ್ಪಿಗೆ ದೊರೆತಿದೆ ಎಂದು ಆರ್‌ಆರ್‌ಎಫ್ ತಿಳಿಸಿದೆ.
ಸಂಸತ್ತಿನ ದಾಖಲೆಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಮಂಡನೆಯಾದ ಖಾಸಗಿ ಸದಸ್ಯರ ಮಸೂದೆಗಳಲ್ಲಿ ಶೇ 90ರಷ್ಟು ಬಾಕಿ ಇವೆ. ಈ ಲೋಕಸಭೆಯ ಅವಧಿಯಲ್ಲಿ ಮಂಡನೆಯಾದ ಖಾಸಗಿ ಸದಸ್ಯರ ಮಸೂದೆಗಳಲ್ಲಿ ಶೇ 90ರಷ್ಟು ಬಾಕಿ ಇವೆ.
15ನೇ ಲೋಕಸಭೆ ಅವಧಿಯಲ್ಲಿ 84 ಸಂಸದರು 373 ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿದ್ದಾರೆ. ಈ ಪೈಕಿ ಮಹಾರಾಷ್ಟ್ರದ ಚಂದ್ರಪುರ ಕ್ಷೇತ್ರದ ಬಿಜೆಪಿ ಸಂಸದ ಹಂಸರಾಜ್ ಗಂಗಾರಾಂ ಅಹಿರ್ ಖಾಸಗಿ ಸದಸ್ಯರ ಮಸೂದೆ ಮಂಡನೆಯಲ್ಲಿ (31 ಮಸೂದೆ) ಅಗ್ರಸ್ಥಾನದಲ್ಲಿದ್ದಾರೆ. ಉಳಿದಂತೆ ದೆಹಲಿ ಈಶಾನ್ಯ ಕ್ಷೇತ್ರದ ಕಾಂಗ್ರೆಸ್ ಸಂಸದ ಜೈಪ್ರಕಾಶ್ ಅಗರವಾಲ್ (23), ರಾಜಸ್ತಾನದ ಬಿಕಾನೇರ್ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘ್ವಾಲ್ (20), ಗುಜರಾತ್‌ನ ಸಬರ್‌ಕಾಂತ ಕ್ಷೇತ್ರದ ಬಿಜೆಪಿ ಸಂಸದ ಡಾ.ಮಹೇಂದ್ರಸಿನ್ಹ ಚೌಹಾಣ್ (18) ಮತ್ತು ಪಶ್ಚಿಮ ಬಂಗಾಳದ ಬಹರಾಂಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ (18) ಹೆಚ್ಚು ಮಸೂದೆಗಳನ್ನು ಮಂಡಿಸಿದ್ದಾರೆ.
ಕಡ್ಡಾಯ ಸೇನಾ ತರಬೇತಿ, ಲಾಬಿ ನಡೆಸುವುದನ್ನು ಬಹಿರಂಗಪಡಿಸುವುದು, ಅಂತರರಾಜ್ಯ ನದಿಗಳ ರಾಷ್ಟ್ರೀಕರಣ, ನಿರುದ್ಯೋಗ ನಿರ್ಮೂಲನೆ, ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸುವುದು, ರೈತರಿಗೆ ವೃದ್ಧಾಪ್ಯ ವೇತನ, ಎರಡು ಮಕ್ಕಳ ನೀತಿ, ಭಿಕ್ಷಾಟನೆ ನಿಷೇಧ ಮತ್ತಿತರ ವಿಷಯಗಳ ಬಗ್ಗೆ ಖಾಸಗಿ ಸದಸ್ಯರ ಮಸೂದೆಗಳು ಮಂಡನೆಯಾಗಿದ್ದವು ಎಂಬ ಮಾಹಿತಿ ಆಧ್ಯಯನ ವರದಿಯಲ್ಲಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಮಾಜಿ ಸಚಿವೆ ಮನೇಕಾ ಗಾಂಧಿ, ಯುಪಿಎ ಸರ್ಕಾರದಲ್ಲಿ ಸಚಿವರಾಗಿರುವ ಶಶಿ ತರೂರ್, ಮನೀಶ್ ತಿವಾರಿ, ಎನ್‌ಸಿಪಿ ಮುಖ್ಯಸ್ಥ ಹಾಗೂ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮಂಡಿಸಿರುವ ಖಾಸಗಿ ಸದಸ್ಯರ ಮಸೂದೆಗಳೂ ಬಾಕಿ ಇವೆ ಎಂದು ವರದಿ ಉಲ್ಲೇಖಿಸಿದೆ. ಪರಿಸ್ಥಿತಿಯ ವ್ಯಂಗ್ಯ ಆಂಧ್ರಪ್ರದೇಶದ ವಿಜಯವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದ ಲಗಡಪಾಟಿ ರಾಜಗೋಪಾಲ್ ‘ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವುದನ್ನು ನಿಯಂತ್ರಿಸುವ’ ಖಾಸಗಿ ಸದಸ್ಯರ ಮಸೂದೆ ಮಂಡಿಸಿ ಹಿಂದೆ ಸುದ್ದಿಯಾಗಿದ್ದರು. ಇದೇ ಸಂಸದ ಇತ್ತೀಚೆಗೆ ತೆಲಂಗಾಣ ರಾಜ್ಯ ರಚನೆ ಮಸೂದೆ ಮಂಡನೆ ವೇಳೆ ಲೋಕಸಭೆಯೊಳಗೆ ‘ಪೆಪ್ಪರ್ ಸ್ಪ್ರೇ’ ಸಿಂಪಡಿಸಿದ ಕುಖ್ಯಾತಿ ಪಡೆದಿದ್ದಾರೆ.
‘ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಸಂಸದರಿಗೆ ದಿನಭತ್ಯೆ ಕಡಿತ ಮಾಡಬೇಕು ಎಂಬ ಪ್ರಸ್ತಾವವುಳ್ಳ ‘ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ (ಸದಸ್ಯರ ದಿನಭತ್ಯೆ ಕಡಿತ ಮತ್ತು ಸದಸ್ಯತ್ವದಿಂದ ಉಚ್ಛಾಟನೆ) ಮಸೂದೆ–2009 ಮಂಡಿಸಿದ್ದ ರಾಜಗೋಪಾಲ್, ಮೂರು ಬಾರಿ ಕಲಾಪಕ್ಕೆ ಅಡ್ಡಿಪಡಿಸುವವರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿದ್ದರು. ಇದೇ ಸಂಸದ ಈಗ ಸಂಸತ್ತಿನ ಘನತೆಯನ್ನು ಕುಗ್ಗಿಸಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ’ ಎಂದು ಆರ್‌ಆರ್‌ಎಫ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.