ಮೈಸೂರು: ಇಲ್ಲಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸುವ ಪ್ರಯತ್ನ ಕಾರ್ಯರೂಪಕ್ಕೆ ಬರುವ ಕಾಲ ಸನ್ನಿಹಿತವಾಗಿದೆ.
ಬೆಂಗಳೂರು ಅಥವಾ ಮೈಸೂರಿನಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ, ಕೇಂದ್ರದ ನಿರ್ದೇಶಕ ಪಿ.ಕೆ.ಖಂಡೋಬಾ ನೇತೃತ್ವದ ದ್ವಿ–ಸದಸ್ಯ ಸಮಿತಿಯು ತಾತ್ಕಾಲಿಕ ಮೀಸಲು ಜಾಗವನ್ನು ವೀಕ್ಷಿಸಿದ್ದು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.
ಕನ್ನಡಕ್ಕೆ ಸಿಕ್ಕಿರುವ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ಪ್ರಶ್ನಿಸಿ, ಚೆನ್ನೈನ ಹಿರಿಯ ವಕೀಲ ಆರ್.ಗಾಂಧಿ ಅವರು ಮದ್ರಾಸ್ ಹೈ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ‘ಸಿಐಐಎಲ್’ ಅಧೀನದಿಂದ ಬೇರ್ಪಡಿಸುವ ಕಾರ್ಯವೂ ಚುರುಕಾಗಿದೆ.
ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ನೇತೃತ್ವದ ನಿಯೋಗವೊಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ, ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿತ್ತು.
ಸಂಶೋಧಕ ಎಂ.ಚಿದಾನಂದಮೂರ್ತಿ ಸೇರಿ ಅನೇಕರು ಇದಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಳಿಕ ಮೈಸೂರಿನ ಸಾಹಿತಿಗಳಾದ ಪ್ರೊ.ಜಿ.ಎಚ್.ನಾಯಕ, ಪ್ರೊ.ಬಿ.ಎನ್.ಶ್ರೀರಾಮ, ಸಂಸದ ಪ್ರತಾಪಸಿಂಹ, ಕಾಂಗ್ರೆಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್ ಅವರು ಸಂಸ್ಥೆಯು ಮೈಸೂರಿನಲ್ಲೇ ಉಳಿಯಬೇಕು ಎಂದು ಒತ್ತಡ ಹೇರಿದ್ದರು.
ಇದರ ಬೆನ್ನಲ್ಲೇ, ಕೇಂದ್ರಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ತನ್ನ ಆವರಣದ ಶತಮಾನೋತ್ಸವ ಕಟ್ಟಡ ಅಥವಾ ರಾಷ್ಟ್ರೀಯ ಸೇವಾ ಯೋಜನೆ ಆವರಣದಲ್ಲಿ ಸ್ಥಳ ನೀಡುವುದಾಗಿ ತಿಳಿಸಿತ್ತು. ಅತ್ತ ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯ ಕನ್ನಡ ಭವನದ ಆವರಣದಲ್ಲಿ ಸ್ಥಳ ನೀಡುವುದಾಗಿ ಘೋಷಣೆಯಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಇಲಾಖೆಯು ಸಮಿತಿಯೊಂದನ್ನು ರಚಿಸಿ, ವರದಿ ನೀಡುವಂತೆ ಸೂಚನೆ ನೀಡಿತ್ತು.
ಸಮಿತಿಯ ಸದಸ್ಯರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಹಾಗೂ ಲೇಖಕ ಪ್ರೊ.ಎನ್.ಎಸ್.ತಾರಾನಾಥ ಅವರು ಬೆಂಗಳೂರು ಹಾಗೂ ಮೈಸೂರಿನ ಎರಡೂ ಸ್ಥಳಗಳನ್ನು ವೀಕ್ಷಿಸಿದ್ದಾರೆ.
ತಮ್ಮ ಶಿಫಾರಸಿನ ವರದಿಯನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಶಕ ಪಿ.ಕೆ.ಖಂಡೋಬಾ ಅವರಿಗೆ ಎರಡು ದಿನಗಳಲ್ಲಿ ಸಲ್ಲಿಸಲಿದ್ದು, ಆ ವರದಿಯನ್ನು ‘ಸಿಐಐಎಲ್’ ನಿರ್ದೇಶಕ ಅವಧೇಶಕುಮಾರ್ ಮಿಶ್ರಾ ಅವರು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ರವಾನಿಸಲಿದ್ದಾರೆ.
ಕಿರಿಕ್ ತಪ್ಪಿದೆ–ಮುಖ್ಯಮಂತ್ರಿ ಚಂದ್ರು: ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಪ್ರಶ್ನಿಸಿ ಚೆನ್ನೈನ ವಕೀಲ ಗಾಂಧಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ 2008ರಲ್ಲಿ ಹೂಡಿದ್ದ ದಾವೆಗಳು ವಜಾಗೊಂಡಿರುವುದಕ್ಕೆ ಮುಖ್ಯಮಂತ್ರಿ ಚಂದ್ರು ಸಂತೋಷ ವ್ಯಕ್ತಪಡಿಸಿದ್ದಾರೆ.
‘ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಸಮಯದಲ್ಲಿ ಈ ಬಗ್ಗೆ ಪ್ರಾಧಿಕಾರದ ವತಿಯಿಂದ ಕೋರ್ಟ್‌ಗೆ ಅರ್ಜಿ ಹಾಕಿಸಿದ್ದೆ. ಇದೀಗ ಕೋರ್ಟ್ ಆದೇಶವು ಕನ್ನಡದ ಭಾಷೆಯ ಅಭಿವೃದ್ಧಿಗೆ ಹೆಚ್ಚಿನ ಅನುವು ಮಾಡಿಕೊಟ್ಟಿದೆ’ ಎಂದು ತಿಳಿಸಿದರು.
ಹೆಚ್ಚುವರಿ ಅನುದಾನವಿಲ್ಲ...
ಕನ್ನಡಕ್ಕೆ ಸಿಕ್ಕಿರುವ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ಪ್ರಶ್ನಿಸಿ, ಚೆನ್ನೈನ ಹಿರಿಯ ವಕೀಲ ಆರ್.ಗಾಂಧಿ ಅವರು ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅನುದಾನವೇನೂ ಬರುವುದಿಲ್ಲ.
‘ಬದಲಿಗೆ, ಈ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ, ಕೇಂದ್ರದಿಂದ ಯಾವುದೇ ಅನುದಾನವನ್ನು ಪಡೆಯುವಾಗ ‘ಷರತ್ತುಗಳು ಅನ್ವಯಿಸುತ್ತವೆ’ ಎಂಬ ಕಡಿವಾಣ ಇರುತ್ತಿತ್ತು. ಇದೀಗ ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಕನ್ನಡದ ಕೆಲಸಗಳು ಹೆಚ್ಚು ಚುರುಕಾಗುತ್ತವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.