ADVERTISEMENT

ಶೀಘ್ರ ನಾಗರಿಕ ಸನ್ನದು ಜಾರಿ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಈಶ್ವರಮಂಗಲ (ದಕ್ಷಿಣ ಕನ್ನಡ):  ಆಡಳಿತದಲ್ಲಿ ಚುರುಕು ಮೂಡಿಸುವ ಸಲುವಾಗಿ ರಾಜ್ಯದಲ್ಲಿ ಶೀಘ್ರವೇ `ನಾಗರಿಕ ಸನ್ನದು~ ಜಾರಿಗೆ ತರಲಾಗುವುದು. ಇದು ಜಾರಿಗೆ ಬಂದ ನಂತರ ಒಂದು ಕೆಲಸವನ್ನು 15 ದಿನಗಳ ಒಳಗೆ ಮಾಡಿಕೊಡದ ಅಧಿಕಾರಿ ದಂಡ ಪಾವತಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಮಂಗಳವಾರ ಸಂಜೆ ಇಲ್ಲಿನ ಪಂಚಮುಖಿ ಆಂಜನೇಯ ದೇವಸ್ಥಾನದ ವಠಾರದಲ್ಲಿ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಗರಿಕ ಸನ್ನದಿನ ಬಗ್ಗೆ ತಾವು ಈಗಾಗಲೇ ಕಾನೂನು ಸಚಿವ ಸುರೇಶ್ ಕಮಾರ್ ಸಹಿತ ಇತರ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅದನ್ನು ಶೀಘ್ರ ಜಾರಿಗೆ ತರಲಾಗುವುದು. 15 ದಿನದೊಳಗೆ ಕೆಲಸ ಮಾಡಿಕೊಡದ ಅಧಿಕಾರಿ  ಪ್ರತಿದಿನಕ್ಕೆ  100 ರೂಪಾಯಿಯಂತೆ ದಂಡವನ್ನು ನಾಗರಿಕರಿಗೆ ಪಾವತಿ ಮಾಡಬೇಕಾಗುತ್ತದೆ ಎಂದರು.

`ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನನ್ನ ಕಚೇರಿಯಿಂದಲೇ ಆರಂಭವಾಗಬೇಕು ಎಂಬ ಕಾರಣಕ್ಕೆ ಶೀಘ್ರವೇ ನನ್ನ ಗೃಹ ಕಚೇರಿ ಮತ್ತು ವಿಧಾನಸೌಧದ ನನ್ನ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅಲ್ಲಿ ನಡೆಯುವ ಪ್ರತಿ ಚಟುವಟಿಕೆಯೂ ಇನ್ನು ಮುಂದೆ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಅದನ್ನು ವೆಬ್‌ಸೈಟ್ ಮೂಲಕ ಜನರಿಗೆ ತೋರಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು. ಜನರ ದುಃಖ ದುಮ್ಮಾನ ಹೇಳಿಕೊಳ್ಳಲಿಕ್ಕಾಗಿಯೇ ಇನ್ನು 10 ದಿನದಲ್ಲಿ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲಿದ್ದೇವೆ~ ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.