ADVERTISEMENT

‘ಶುಲ್ಕ ಹೆಚ್ಚಿಸದಿದ್ದರೆ ದಾಖಲಾತಿ ಇಲ್ಲ’

ಶೇ 50ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 19:03 IST
Last Updated 28 ಏಪ್ರಿಲ್ 2018, 19:03 IST

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಶೇ50ರಷ್ಟು ಹೆಚ್ಚಿಸಲು ಅನುಮತಿ ನೀಡಬೇಕು ಎಂದು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿ ಸಂಘ, ಮುಂಬರಲಿರುವ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ತಯಾರಿ ನಡೆಸಿದೆ.

ರಾಜ್ಯದಲ್ಲಿ ಚುನಾವಣಾ ನಡೆಯುತ್ತಿದೆ. ಶುಲ್ಕ ಏರಿಕೆ ಕುರಿತು ಚರ್ಚಿಸಲು ಅಧಿಕಾರಿಗಳು ಸಿದ್ಧರಿಲ್ಲ. ಹೀಗಾಗಿ, ಚುನಾವಣೆ ಮುಗಿದು ಹೊಸ ಸರ್ಕಾರ ಬರುವವರೆಗೆ ಕಾದುನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಘದ ಕಾರ್ಯದರ್ಶಿ ಎಂ.ಕೆ. ಪಾಂಡುರಂಗಶೆಟ್ಟಿ ‘ಸರ್ಕಾರ ಯಾವುದೇ ಬರಲಿ, ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಶೇ 50ರಷ್ಟು ಏರಿಸಲು ಅನುಮತಿ ನೀಡಲೇಬೇಕು. ಇಲ್ಲವಾದಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್‌ ಪ್ರವೇಶಾತಿಯನ್ನೇ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.

ADVERTISEMENT

‘ಕಳೆದ ವರ್ಷವೂ ನಾನಾ ಕಾರಣಗಳನ್ನು ನೀಡಿ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಿಲ್ಲ. ಚುನಾವಣೆಯಲ್ಲಿ ಗೆದ್ದು ಬಂದರೆ ಈಗಿನ ಪ್ರಸ್ತಾವನೆಯನ್ನು ಮಂಜೂರು ಮಾಡಿಕೊಡುವುದಾಗಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಭರವಸೆ ನೀಡಿದ್ದಾರೆ. ಆದರೆ, ಯಾವ ಸರ್ಕಾರ ಬರುತ್ತದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿಯಮದ ಪ್ರಕಾರ ಕಾಲೇಜುಗಳಲ್ಲಿ ಪಿಎಚ್‌.ಡಿ ಪದವೀಧರರನ್ನೇ ನೇಮಕ ಮಾಡಿಕೊಳ್ಳಬೇಕು. ಉಪನ್ಯಾಸಕರು ಹೆಚ್ಚು ವೇತನ ಅಪೇಕ್ಷಿಸುತ್ತಿದ್ದಾರೆ. ಈ ವರ್ಷವಷ್ಟೇ ಅವರಿಗೆ ಶೇ 25ರಷ್ಟು ಸಂಬಳ ಹೆಚ್ಚಿಸಲಾಗಿದೆ. ಅದರ ಜತೆಗೆ ಪಿ.ಎಫ್‌ ಮುಂತಾದ ಸೌಲಭ್ಯಗಳನ್ನೂ ನೀಡಬೇಕು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಯಾದ ನಂತರ ವಸ್ತುಗಳ ಬೆಲೆ ಏರಿಕೆ ಆಗಿದೆ. ಹೀಗಿರುವಾಗ ಕಾಲೇಜುಗಳು ಪೋಷಕರಿಂದ ಹಣ ಕೇಳದೆ ಇನ್ನೇನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

‘ಶೇ 50ರಷ್ಟು ಶುಲ್ಕ ಹೆಚ್ಚಿಸುವುದು ಪೋಷಕರಿಗೆ ಹೊರೆ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ ಶಿಕ್ಷಕರಿಗೆ ಸಂಬಳ ನೀಡಲು, ಅಗತ್ಯ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿಗಳು ಕಟ್ಟಿದ ಶುಲ್ಕದಿಂದ ಮಾತ್ರ ಸಾಧ್ಯ. ನಮಗೆ ಲಾಭ ಬೇಡ, ಕನಿಷ್ಠ ಆಡಳಿತ ನಿರ್ವಹಣೆಯ ಖರ್ಚುವೆಚ್ಚ ನೀಡಿದರೆ ಸಾಕು. ಸಾಲ ಮಾಡಿಕೊಂಡು ಕಾಲೇಜು ನಡೆಸುವ ಪರಿಸ್ಥಿತಿಯಲ್ಲಿ ಯಾವ ಶೈಕ್ಷಣಿಕ ಸಂಸ್ಥೆಗಳೂ ಇಲ್ಲ’ ಎಂದರು.

‘ಈ ವರ್ಷ ದೇಶಾದ್ಯಂತ 400 ಎಂಜಿನಿಯರಿಂಗ್‌ ಕಾಲೇಜುಗಳು ಮುಚ್ಚಿವೆ. ಮುಂದಿನ ವರ್ಷ ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಕಾಲೇಜುಗಳು ಇದೇ ಹಾದಿ ಹಿಡಿಯಬೇಕಾಗುತ್ತದೆ. ಹೇಗಿದ್ದರೂ ಗುಣಮಟ್ಟದ ಶಿಕ್ಷಣ ಇಲ್ಲ ಎನ್ನುತ್ತಿದ್ದಾರೆ, ಕಾಲೇಜುಗಳನ್ನೇ ಮುಚ್ಚಿದರಾಯಿತು ಬಿಡಿ’ ಎಂದು ಅವರು ಹೇಳಿದರು.

‘ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸರ್ಕಾರ ರಚನೆಯಾಗುತ್ತದೆ. ಕೂಡಲೇ ಪ್ರಸ್ತಾವನೆ ಸಲ್ಲಿಸುತ್ತೇವೆ. ಅದನ್ನು ಅಂಗೀಕರಿಸಲು ಆಗಸ್ಟ್‌ವರೆಗೂ ಸಮಯವಿರುತ್ತದೆ’ ಎಂದರು.
**
₹49,000– ₹55,000
ಸರ್ಕಾರಿ ಕೋಟಾ ಸೀಟಿನ ಶುಲ್ಕ

₹1.21ಲಕ್ಷ– 1.70 ಲಕ್ಷ 
ಕಾಮೆಡ್‌ಕೆ ಕೋಟಾ ಸೀಟಿನ ಶುಲ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.