ADVERTISEMENT

ಶೇ 25ರಷ್ಟು ನೂತನ ಸದಸ್ಯರಿಗೆ ಬಡ್ಡಿ ರಹಿತ ಸಾಲ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಹೊನ್ನಾಳಿ (ದಾವಣಗೆರೆ ಜಿಲ್ಲೆ): ಸಹಕಾರಿ ಸಂಘಗಳ ಶೇ 25ರಷ್ಟು ನೂತನ ಸದಸ್ಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ತಿಳಿಸಿದರು.

ಹಿಂದಿನಿಂದಲೂ ಹಳೆಯ ಸದಸ್ಯರೇ ಸಾಲ ಪಡೆಯುತ್ತಿದ್ದಾರೆ. ಕೆಲವೊಮ್ಮೆ ಸಾಲ ನೀಡಲು ಸಹಕಾರಿ ಸಂಘಗಳಲ್ಲಿ ಹಣವೇ ಇರುವುದಿಲ್ಲ. ಹೀಗಾಗಿ, ಹೊಸ ಸದಸ್ಯರಿಗೆ ಸಾಲ ಸಿಗುತ್ತಿಲ್ಲ. ಇದನ್ನು ಗಮನಿಸಿ, ಇನ್ನು ಮುಂದೆ ಶೇ 25ರಷ್ಟು ನೂತನ ಸದಸ್ಯರಿಗೆ ಬಿಡ್ಡಿರಹಿತ ಸಾಲ ವಿತರಿಸಲು ನಿರ್ಧರಿಸಲಾಗಿದೆ. ಶೇ 25ರಷ್ಟು ಮಹಿಳಾ ಸದಸ್ಯರಿಗೆ ಆದ್ಯತೆ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬ ಉದ್ದೇಶದಿಂದ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ಸಂಘಗಳು ಬಲವರ್ಧನೆಗೊಳ್ಳಲಿವೆ. ಸಹಕಾರಿ ಸಂಘಗಳು ‘ಆಡಿಟ್‌’ ಇಲ್ಲದೇ ಸಾಮಾನ್ಯ ವಾರ್ಷಿಕ ಮಹಾಸಭೆ ನಡೆಸಿದರೆ ಅಂತಹ ಸಂಘಗಳನ್ನು ‘ಸೂಪರ್‌ಸೀಡ್‌’ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್‌ನ ಹೊನ್ನಾಳಿ ಶಾಖೆಯಲ್ಲಿ ನಡೆದಿರುವ ಹಣ ದುರ್ಬಳಕೆ ಕುರಿತ ತನಿಖೆ ಪ್ರಗತಿಯಲ್ಲಿದೆ. ಸಹಕಾರ ಸಂಘಗಳ ಜಂಟಿ ನಿಬಂಧಕರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.