ADVERTISEMENT

ಶೇ 75ರಷ್ಟಕ್ಕೆ ಅಪ್ಪ–ಅಮ್ಮ ಇಲ್ಲ!

ರಾಜಕೀಯ ಪಕ್ಷಗಳ ಹಣಕಾಸು ಮೂಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ಪಡೆಯುವ ಹಣದಲ್ಲಿ ಹೆಚ್ಚಿನ ಪಾಲು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ!
ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ), ಸಿಪಿಐ ಮತ್ತು ಸಿಪಿಎಂ ಎಲ್ಲಿಂದ ಹಣ ಪಡೆದುಕೊಂಡಿವೆ ಎಂಬ ವಿವರಗಳನ್ನು ರಾಷ್ಟ್ರೀಯ ಚುನಾವಣಾ ಕಣ್ಗಾವಲು ಸಂಸ್ಥೆ (ಎನ್‌ಇಡಬ್ಲ್ಯೂ) ಮತ್ತು ಅಸೋಸಿಯೇಷನ್ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆಗಳು ಪರಿಶೀಲಿಸಿವೆ. ಇದರ ಪ್ರಕಾರ, ಈ ಪಕ್ಷಗಳು ಪಡೆಯುವ ಶೇಕಡ 75ರಷ್ಟು ದೇಣಿಗೆಯನ್ನು ನೀಡಿದವರು ಯಾರು ಎಂಬುದಕ್ಕೆ ಉತ್ತರವೇ ಇಲ್ಲ.

2004–05ರಿಂದ 2011–12ರವರೆಗೆ ಈ ಆರು ಪಕ್ಷಗಳು ಪಡೆದಿರುವ ದೇಣಿಗೆಯ ವಿವರಗಳನ್ನು ಎಡಿಆರ್‌ ಮತ್ತು ಎನ್‌ಇಡಬ್ಲ್ಯೂ ಪರಿಶೀಲನೆಗೆ ಒಳಪಡಿಸಿವೆ. ಈ ಅವಧಿಯಲ್ಲಿ ಪಕ್ಷಗಳು ಒಟ್ಟು ರೂ 4,895.96 ಕೋಟಿ ದೇಣಿಗೆ ಪಡೆದುಕೊಂಡಿವೆ. ಇದರಲ್ಲಿ  ಚುನಾವಣಾ ಟ್ರಸ್ಟ್‌ಗಳಿಂದ ₨ 105.86 ಕೋಟಿ (ಶೇ 2.16ರಷ್ಟು) ದೇಣಿಗೆ ಬಂದಿದೆ.

ದಾನಿಗಳಿಂದ ಒಟ್ಟುರೂ 435.85  (ಶೇ 8.90) ಕೋಟಿ ದೊರೆತಿದೆ. ಸದಸ್ಯತ್ವ ಶುಲ್ಕ, ಆಸ್ತಿ ಮಾರಾಟ, ಬ್ಯಾಂಕ್‌ ಠೇವಣಿಗೆ ದೊರೆಯುವ ಬಡ್ಡಿ ಮತ್ತಿತರ ಮೂಲಗಳಿಂದ ಒಟ್ಟು ರೂ 785.60 ಕೋಟಿ (ಶೇ 16.05) ಹಣ ರಾಜಕೀಯ ಪಕ್ಷಗಳಿಗೆ ದೊರೆತಿದೆ ಎಂದು ಎಡಿಆರ್‌ ಮತ್ತು ಎನ್‌ಇಡಬ್ಲ್ಯೂ ಸಂಸ್ಥೆಗಳ
ವಿಶ್ಲೇಷಣೆ ಹೇಳಿದೆ.

ಆದರೆ ಇನ್ನುಳಿದ ರೂ 3,674.50 (ಶೇ 75.05ರಷ್ಟು) ಕೋಟಿ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ. ಈಗಿರುವ ನಿಯಮದ ಪ್ರಕಾರ, ರೂ 20 ಸಾವಿರ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ದೇಣಿಗೆ ನೀಡುವ ವ್ಯಕ್ತಿ ಅಥವಾ ಸಂಸ್ಥೆಯ ಹೆಸರನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕಿಲ್ಲ.

ಪ್ರಜಾಪ್ರಭುತ್ವ ಮತ್ತು ಚುನಾವಣಾ ಸುಧಾರಣೆ ಕುರಿತು ಕೆಲಸ ಮಾಡುತ್ತಿರುವ ಸ್ಟಾಕ್‌ಹೋಂ ಮೂಲದ ಸಂಸ್ಥೆ ‘ಐಡಿಯಾ’ ಬಿಡುಗಡೆ ಮಾಡಿರುವ ವಿವರದ ಅನ್ವಯ, ದೇಣಿಗೆ ಸಂಗ್ರಹ ಮಾಡಿಯೂ, ಅದು ಎಲ್ಲಿಂದ ಬಂತು ಎಂಬುದನ್ನು ಬಹಿರಂಗ ಮಾಡಬೇಕಿಲ್ಲ ಎಂಬ ನಿಯಮ ಇರುವ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು ಎಂದು ಎಡಿಆರ್‌ ಮತ್ತು ಎನ್‌ಇಡಬ್ಲ್ಯೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.