ADVERTISEMENT

‘ಶ್ರಮಬಿಂದು ಸಾಗರ’ದ ರೂವಾರಿ ಇನ್ನು ನೆನಪು ಮಾತ್ರ

ಮೊದಲ ಸ್ಪರ್ಧೆಯಲ್ಲೇ ರಾಮಕೃಷ್ಣ ಹೆಗಡೆ ಮಣಿಸಿದ್ದ ಸಿದ್ದು ನ್ಯಾಮಗೌಡ

ವೆಂಕಟೇಶ್ ಜಿ.ಎಚ್
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ನಿರ್ಮಾಣಗೊಂಡ ಚಿಕ್ಕಪಡಸಲಗಿ ಬ್ಯಾರೇಜ್ (ಸಂಗ್ರಹ ಚಿತ್ರ)
ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ನಿರ್ಮಾಣಗೊಂಡ ಚಿಕ್ಕಪಡಸಲಗಿ ಬ್ಯಾರೇಜ್ (ಸಂಗ್ರಹ ಚಿತ್ರ)   

ಬಾಗಲಕೋಟೆ: ಅದು 80ರ ದಶಕದ ಕೊನೆಯ ಭಾಗ. ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಜಮಖಂಡಿ ಭಾಗದ ರೈತರು ತಾವೇ ಸಂಘಟಿತರಾಗಿ ವಂತಿಗೆ ಸಂಗ್ರಹಿಸಿ, ಕೃಷ್ಣೆಗೆ ಚಿಕ್ಕಪಡಸಲಗಿ ಸಮೀಪ ಬ್ಯಾರೇಜ್ ಕಟ್ಟಿದ್ದರು. ಅಲ್ಲಿ ಹಿಡಿದಿಟ್ಟ ನೀರು ಮುಂದೆ ಸುತ್ತಲಿನ ಸಾವಿರಾರು ಎಕರೆ ಒಣಭೂಮಿಗೆ ಹರಿದು, ಆ ಭಾಗ ‘ಕಬ್ಬಿನ ಕಣಜ’ವಾಗಿ ರೂಪುಗೊಂಡಿತು.

ಈ ಯಶೋಗಾಥೆ ಹಿಂದಿನ ರೂವಾರಿ ಸಿದ್ದು ನ್ಯಾಮಗೌಡ. ಇದು ಅವರನ್ನು ಕೃಷ್ಣೆಯ ತೀರದಿಂದ ಸಂಸತ್‌ನ ಅಂಗಳಕ್ಕೆ ಕರೆದೊಯ್ದಿತ್ತು.

ರೈತರ ಸಂಘಟನೆ: ಮನೆಯ ಅಂಗಳದಲ್ಲಿ ಕೃಷ್ಣೆ ಹರಿದರೂ ಅದು ಹೊಲಕ್ಕೆ ಬಾರದೇ ಮಳೆಗಾಗಿ ಮುಗಿಲತ್ತ ನೋಡಬೇಕಿದ್ದ ದಿನಮಾನಗಳಲ್ಲಿ ಅಲ್ಲಿನ ಕಡಕೋಳ ಗ್ರಾಮದ ಸಿದ್ದು ನ್ಯಾಮಗೌಡ ಹಾಗೂ ಸ್ನೇಹಿತರು, ನದಿಗೆ ಅಡ್ಡಲಾಗಿ ಬ್ಯಾರೇಜ್ ಕಟ್ಟಿ ಹರಿಯುವ ನೀರು ಹಿಡಿದಿಡುವ ಕನಸು ಕಂಡಿದ್ದರು. ಆ ಬಗ್ಗೆ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು. ಮುಂದೆ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದಲ್ಲಿ ಆ ಪ್ರದೇಶ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ ಎಂಬ ಕಾರಣಕ್ಕೆ ಬ್ಯಾರೇಜ್ ನಿರ್ಮಾಣಕ್ಕೆ ಹಣ ನೀಡಲು ಸರ್ಕಾರ ಒಪ್ಪಿರಲಿಲ್ಲ. ಆದರೂ ಪಟ್ಟು ಬಿಡದೇ 1987ರಲ್ಲಿ ಕೃಷ್ಣಾ ತೀರದ ರೈತ ಸಂಘ ಹುಟ್ಟು ಹಾಕಿ, ಕೃಷಿಕರನ್ನು ಸಂಘಟಿಸಿ ವಂತಿಗೆ ಸಂಗ್ರಹಿಸಿದರು. ಎರಡು ವರ್ಷಗಳಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್ ಎದ್ದು ನಿಂತಿತು. ಸಾವಿರಾರು ಎಕರೆಗೆ ನೀರು ಹರಿದು ಕಬ್ಬಿನ ಬೆಳೆ ಮುಗಿಲತ್ತ ಮುಖ ಮಾಡತೊಡಗಿತು.

ADVERTISEMENT

ಈ ಪರಿಶ್ರಮದ ಹಿಂದೆ ಆರ್ಥಿಕ ನೆರವು ಮಾತ್ರವಲ್ಲದೇ ಸ್ಥಳೀಯ ರೈತರ ದೈಹಿಕ ಶ್ರಮವೂ ಧಾರೆಯಾಗಿತ್ತು. ಹಾಗಾಗಿ ‘ರೈತರ ಶ್ರಮಬಿಂದು ಸಾಗರ’ ಎಂಬ ಹೆಸರೇ ಬ್ಯಾರೇಜ್‌ಗೆ ಅನ್ವರ್ಥವಾಯಿತು. ರಾತ್ರಿ ಕಳೆದು ಬೆಳಗಾಗುವುದರಲ್ಲಿ ನ್ಯಾಮಗೌಡ ಮನೆಮಾತಾಗಿದ್ದರು. ಈ ಬಗ್ಗೆ ಬಿ.ಬಿ.ಸಿ ಕೂಡ ವಿಶೇಷ ಕಾರ್ಯಕ್ರಮ ರೂಪಿಸಿತ್ತು. ರೈತರ ಸಂಘಟನೆಯ ಈ ಅಸ್ಮಿತೆಗೆ ಈಗ ಮೂರು ದಶಕಗಳ ಸಂಭ್ರಮ.

ಹೆಗಡೆ ಮಣಿಸಿದ್ದರು: 1991ರ ಲೋಕಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕಣ್ಣಿಗೆ ಬಿದ್ದಿದ್ದು ಸಿದ್ದು ನ್ಯಾಮಗೌಡ. ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸಿದ್ದರು. ಬ್ಯಾರೇಜ್‌ನ ಯಶೋಗಾಥೆ ಹಾಗೂ ಈ ಭಾಗದಲ್ಲಿ ಪ್ರಬಲ ಗಾಣಿಗ ಸಮುದಾಯ ಬೆನ್ನಿಗೆ ನಿಂತ ಪರಿಣಾಮ ದೈತ್ಯ ಮುತ್ಸದ್ಧಿಯನ್ನು ಮಣಿಸಿ ಮತ್ತೊಮ್ಮೆ ದೇಶದ ಗಮನ ಸೆಳೆದಿದ್ದರು. ಅದರ ಫಲ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಸ್ಥಾನ ಅನಾಯಾಸವಾಗಿ ಒಲಿದಿತ್ತು.

ಹಿಂದಿ, ಇಂಗ್ಲಿಷ್‌ ಬಾರದೇ ಸಂವಹನದ ತೊಡಕಿನಿಂದ ಒಂದೇ ವರ್ಷದಲ್ಲಿ ಸಚಿವ ಸ್ಥಾನ ಕಳೆದುಕೊಂಡರು. ಮುಂದೆ 1996, 1997ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡ ನ್ಯಾಮಗೌಡ, 2003ರಲ್ಲಿ ಬಾಗಲಕೋಟೆ– ವಿಜಯಪುರ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. 2013ರಲ್ಲಿ ಜಮಖಂಡಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿದ್ದ ಅವರನ್ನು ಈ ಬಾರಿಯೂ ಮತದಾರರು ಕೈ ಬಿಟ್ಟಿರಲಿಲ್ಲ.

ಯಶಸ್ವಿ ಉದ್ಯಮಿ: ಚಿಕ್ಕಪಡಸಲಗಿ ಬ್ಯಾರೇಜ್ ನೀರು ಬಳಕೆ ಮಾಡಿಕೊಂಡು ರೈತರು ಕಬ್ಬು ಬೆಳೆದರೂ ಅದನ್ನು ನುರಿಸಲು ಕಾರ್ಖಾನೆಯ ಅಗತ್ಯ ಅರಿತ ನ್ಯಾಮಗೌಡ, ಕೃಷ್ಣಾ ತೀರದ ರೈತ ಸಂಘದ ಹೆಸರಿನಲ್ಲಿಯೇ ಷೇರು ಹಣ ಸಂಗ್ರಹಿಸಿ ಹಿರೇಪಡಸಲಗಿ ಬಳಿ ಜಮಖಂಡಿ ಶುಗರ್ಸ್ ಆರಂಭಿಸಿದರು. 2003ರಲ್ಲಿ ಈ ಕಾರ್ಖಾನೆ ಆರಂಭೋತ್ಸವಕ್ಕೆ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಬಂದಿದ್ದರು. ನಂತರದ ದಿನಗಳಲ್ಲಿ ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕಿನ ನಾದ ಬಿ.ಕೆ ಗ್ರಾಮದ ಬಳಿಯೂ ಜಮಖಂಡಿ ಶುಗರ್ಸ್‌ನ ಮತ್ತೊಂದು ಘಟಕ ಆರಂಭಿಸಿದ್ದರು.

ಸೈಕ್ಲಿಂಗ್ ಪ್ರೇಮಿ ಸಂಘಟಕ

ಸೈಕ್ಲಿಂಗ್‌ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಸಿದ್ದು ನ್ಯಾಮಗೌಡ ಜಮಖಂಡಿಯಲ್ಲಿ ಕೃಷ್ಣಾ ತೀರದ ಸಂಘ ಹಾಗೂ ಅಲ್ಲಿನ ಕನ್ನಡ ಸಂಘದ ನೇತೃತ್ವದಲ್ಲಿ ಮೂರು ಬಾರಿ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಿ ಕ್ರೀಡಾಪ್ರಿಯರ ಮನಗೆದ್ದಿದ್ದರು. ಜೊತೆಗೆ ಈ ಭಾಗದಲ್ಲಿ ಸೈಕ್ಲಿಂಗ್ ಚಟುವಟಿಕೆ ಕ್ರಿಯಾಶೀಲಗೊಳ್ಳಲು ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.