ADVERTISEMENT

ಶ್ರೀ ನಂದನ ನಾಮ ಸಂವತ್ಸರದ ರಾಶಿ ಭವಿಷ್ಯ

ದೈವಜ್ಞ ಕೆ.ಎನ್.ಸೋಮಯಾಜಿ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

23, ಮಾರ್ಚ್ 2012 ರಿಂದ 10, ಏಪ್ರಿಲ್ 2013ರ ವರೆಗೆ 

ಧಾರಾಳ ಮಳೆ, ಧಾನ್ಯ ಸಮೃದ್ಧಿ

ಈ ಶ್ರೀ ನಂದನ ಸಂವತ್ಸರದಲ್ಲಿ ಸರಕಾರದ ಬೊಕ್ಕಸವು ತುಂಬಿರುತ್ತದೆ. ಧಾರಾಳ ಮಳೆಯುಂಟಾಗಿ ಭೂಮಿಯು ಫಲ, ಸಸ್ಯ ಸಂಕುಲಗಳಿಂದ ಕಂಗೊಳಿಸಲಿದೆ. ಜನರು ಸುಖ ಶಾಂತಿಯಿುಂದ ಇರುತ್ತಾರೆ. ಶುಕ್ರನು ರಾಜನಾದುದರಿಂದ ಭೂಮಿಯಲ್ಲಿ ಜಲಾಶಯಗಳು ನೀರಿನಿಂದ ತುಂಬಿರುತ್ತವೆ. ಜನರು ನಿರ್ಭಯರೂ, ಧನವಂತರೂ ಆಗುವರು.

ಫಲಧಾನ್ಯಾದಿಗಳು ವೃದ್ಧಿ ಆಗುತ್ತದೆ. ಕುಜನು ರಸಾಧಿಪನಾದ್ದರಿಂದ ಬೆಲ್ಲ, ತೈಲ, ತುಪ್ಪ ಇತ್ಯಾದಿ ಕಡಿಮೆಯಾಗುವುದು. ರತ್ನ, ಮುತ್ತು, ಬಂಗಾರದ ಬೆಲೆ ಕಡಿಮೆಯಾಗುತ್ತದೆ. ರವಿಯು ನೀರಸಾಧಿಪತಿಯಾಗಿರುವುದರಿಂದ ತಾಮ್ರ, ಚಂದನ, ಮಾಣಿಕ್ಯ ಮತ್ತು ಬಂಗಾರ ಇತ್ಯಾದಿ ಸಮೃದ್ಧವಾಗಿ ಸಿಗುತ್ತವೆ.

ದಂಢಾಧಿಪ ಗುರುವಾಗಿರುವುದರಿಂದ ಮಂತ್ರಿಗಳು ಸರಕಾರವನ್ನು ಧರ್ಮದ ನೆಲೆಯಲ್ಲಿ ನಡೆಸುವರು. ಗುರುವು ಅರ್ಘಾಧಿಪತಿಯಾದ್ದರಿಂದ ಭೂಮಿಯು ಧಾನ್ಯ ಸಂಪತ್ತುಗಳಿಂದಾಗಿ ಕೂಡಿರುತ್ತದೆ. ರೈತಾಪಿ ವರ್ಗಕ್ಕೆ ಅನುಕೂಲವಿದೆ. ಕಪ್ಪು ಧಾನ್ಯದ ಬೆಳೆ ಹೆಚ್ಚಾದರೆ, ಬಿಳಿ ಧಾನ್ಯದ ಬೆಳೆ ಕಡಿಮೆಯಾಗುವುದು. ಸುಗಂಧ ದ್ರವ್ಯ, ರಸಪದಾರ್ಥ, ಸಕ್ಕರೆ, ಕರ್ಪೂರ, ಇಂಗು ಮೊದಲಾದವುಗಳು ತುಟ್ಟಿಯಾಗಲಿವೆ. ಈ ವರ್ಷ ಹಣ್ಣು, ತರಕಾರಿಗಳು ಕಡಿಮೆ ಬೆಲೆಯಲ್ಲಿ ದೊರಕಲಿವೆ.

ಕಬ್ಬಿಣ, ಕಲ್ಲಿದ್ದಲು, ಕಪ್ಪುಧಾನ್ಯ, ಕಂಬಳಿ, ತ್ಯಾಜ್ಯವಸ್ತು, ಗೊಬ್ಬರ, ದಂತ, ಕರಕುಶಲವಸ್ತುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಲಾಭವಿದೆ. ಸುಗಂಧ ದ್ರವ್ಯಗಳು, ಅಲಂಕಾರಿಕ ಸಾಮಗ್ರಿಗಳು, ಚಿನ್ನಾಭರಣ, ತರಕಾರಿ, ಹಣ್ಣು ಹಣ್ಣಿನರಸ ಮಾರುವವರಿಗೆ, ಸಿಹಿತಿಂಡಿ ಅಂಗಡಿಯವರಿಗೆ ಅಧಿಕ ಲಾಭ. ರಬ್ಬರ್, ಕಬ್ಬು, ಬಾಳೆ, ತೆಂಗು, ಕುಂಬಳಕಾಯಿ, ಸಿಹಿತಿಂಡಿ ಮಾರಾಟ ಮಾಡುವವರು ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುತ್ತಾರೆ.

ಶೇರು ವ್ಯವಹಾರ ಮಾಡುವವರು, ಮದ್ಯ, ಸೇಂದಿ ಮಾರಾಟಗಾರರು, ವಸ್ತ್ರವ್ಯಾಪಾರಿಗಳಿಗೆ ಅಧಿಕ ಲಾಭ. ಸುಗಂಧ ದ್ರವ್ಯ,  ಪ್ರಸಾಧನ ವಸ್ತುಗಳು ಹೇರಳವಾಗಿ ಮಾರಾಟವಾಗುತ್ತದೆ. ಈ ವರ್ಷ ಜಮೀನು, ಮನೆ , ಹಲವು ಸ್ಥಿರಾಸ್ತಿಗಳ ಖರೀದಿಯಾಗುತ್ತವೆ.  ಕಬ್ಬಿಣ ಜೆಲ್ಲಿ, ಸಿಮೆಂಟು ಖನಿಜ ಪದಾರ್ಥಗಳ ಮಾರಾಟಗಾರರಿಗೆ ಅಧಿಕ ಲಾಭ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.