ADVERTISEMENT

ಸಂಖ್ಯಾಶಾಸ್ತ್ರ ಆಧರಿಸಿ ರೇವಣ್ಣಗೆ ಕೊಠಡಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:07 IST
Last Updated 7 ಜೂನ್ 2018, 19:07 IST
ಮುಖ್ಯಮಂತ್ರಿ ಅಧಿಕೃತ ಕಚೇರಿಯಲ್ಲಿ ಗುರುವಾರ ನಡೆದ ಪೂಜೆ ವೇಳೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಸಿ.ಎಸ್‌.ಪುಟ್ಟರಾಜು ಮತ್ತು ಹಿರಿಯ ಅಧಿಕಾರಿಗಳು ಇದ್ದರು
ಮುಖ್ಯಮಂತ್ರಿ ಅಧಿಕೃತ ಕಚೇರಿಯಲ್ಲಿ ಗುರುವಾರ ನಡೆದ ಪೂಜೆ ವೇಳೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಸಿ.ಎಸ್‌.ಪುಟ್ಟರಾಜು ಮತ್ತು ಹಿರಿಯ ಅಧಿಕಾರಿಗಳು ಇದ್ದರು   

ಬೆಂಗಳೂರು: ಸಚಿವ ಎಚ್‌.ಡಿ.ರೇವಣ್ಣ ತಮ್ಮ ಸಹೋದರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಒತ್ತಡ ಹೇರಿ 316 ಸಂಖ್ಯೆಯ ಕೊಠಡಿಯನ್ನೇ ಪಡೆದಿದ್ದಾರೆ.

ನಿರ್ದಿಷ್ಟವಾಗಿ ಇದೇ ಕೊಠಡಿಯನ್ನು ಪಡೆಯಲು ಮುಖ್ಯಕಾರಣ ‘ಸಂಖ್ಯಾ ಶಾಸ್ತ್ರ’ದ ಪ್ರಕಾರ 3+1+6=10 ಆಗುತ್ತದೆ. ಶೂನ್ಯವನ್ನು ತೆಗೆದರೆ 1 ಉಳಿಯುತ್ತದೆ. ಇದು ತಮಗೆ ಶುಭಕರ ಎಂಬುದು ರೇವಣ್ಣ ಅವರ ಲೆಕ್ಕಾಚಾರ.

ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಬಳಿ ಪಟ್ಟು ಹಿಡಿದು ಕೊಠಡಿ ಪಡೆದುಕೊಂಡಿದ್ದಾರೆ. ಆ ಕೊಠಡಿಯೇ ಏಕೆ, ಬೇರೆ ಯಾವುದಾದರೂ ಕೊಠಡಿ ಪಡೆಯ ಬಹುದಲ್ಲ ಎಂಬ ಕುಮಾರ
ಸ್ವಾಮಿ ಸಲಹೆಯನ್ನು ರೇವಣ್ಣ ಒಪ್ಪಿಕೊಳ್ಳ ಲಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಗುರುವಾರ ರೇವಣ್ಣ ಅವರ ಕೊಠಡಿ ಮತ್ತು ಬಾಗಿಲನ್ನು ಹೂವುಗಳಿಂದ ಭವ್ಯವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ಅದ್ಧೂರಿಯಾಗಿ ಪೂಜೆಯನ್ನೂ ಮಾಡಲಾಯಿತು. ಪೂಜೆ ಮುಗಿಯುವ ತನಕ ಯಾರಿಗೂ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ಸಿಎಂ ಅಧಿಕೃತ ಕಚೇರಿಗೆ ಪ್ರವೇಶ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ಎರಡು ವಾರ ಕಳೆದರೂ ಮುಖ್ಯಮಂತ್ರಿ ಅಧಿಕೃತ ಕಚೇರಿಗೆ (ಸಂಖ್ಯೆ 323) ಕಾಲಿಟ್ಟಿರಲಿಲ್ಲ. ರೇವಣ್ಣ ಅವರ ಸಲಹೆಯಂತೆ ಕುಮಾರಸ್ವಾಮಿ ಗುರುವಾರ ಕಚೇರಿ
ಯೊಳಗೆ ಕಾಲಿಟ್ಟರು.

ತಾವು ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧದ ಮೆಟ್ಟಿಲು ಹತ್ತುವವರೆಗೆ ಆ ಕೊಠಡಿ ಪ್ರವೇಶಿಸಬಾರದು. ಆ ಬಳಿಕ ಒಳ್ಳೆಯ ದಿನ ನಿಗದಿ ಮಾಡಿದ ಬಳಿಕವೇ ಪ್ರವೇಶಿಸಬೇಕು ಎಂದು ತಾಕೀತು ಮಾಡಿದ್ದರು ಎಂದು ಮೂಲಗಳು ಹೇಳಿವೆ. ಮುಖ್ಯಮಂತ್ರಿ ಕಚೇರಿಯನ್ನೂ ಹೂವುಗಳಿಂದ ಭವ್ಯವಾಗಿ ಅಲಂಕರಿ ಸಲಾಗಿತ್ತು.

ಕೋಳಿವಾಡ ಕೊಠಡಿ ಸಿದ್ದರಾಮಯ್ಯಗೆ: ಹಿಂದಿನ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಇದ್ದ ಕೊಠಡಿಯನ್ನು (ಸಂಖ್ಯೆ125) ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ನೀಡಲು ನಿರ್ಧರಿಸಲಾಗಿದೆ. ವಿಧಾನಸಭೆ ಸ್ಪೀಕರ್‌ಗೆ ಹಿಂದಿನಿಂದಲೂ ಮೊದಲ ಮಹಡಿಯ ಕೊಠಡಿ ಸಂಖ್ಯೆ 119 ಮೀಸಲು. ಆದರೆ, ಕೋಳಿವಾಡ ಸ್ಪೀಕರ್‌ ಇದ್ದಾಗ 125 ಕೊಠಡಿಯನ್ನು ಅದ್ಧೂರಿಯಾಗಿ ನವೀಕರಣ ಮಾಡಲಾಗಿತ್ತು. ಹಾಲಿ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್ ತಮಗೆ 119 ಸಂಖ್ಯೆಯ ಕೊಠಡಿಯೇ ಸಾಕು.125 ಅನ್ನು ಸಿದ್ದರಾಮಯ್ಯ ಅವರಿಗೆ ನೀಡುವಂತೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.