ADVERTISEMENT

ಸಕ್ರೆಬೈಲಿನಲ್ಲಿ ಮೈನವಿರೇಳಿಸಿದ ಆನೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಸಕ್ರೆಬೈಲಿನಲ್ಲಿ ಮೈನವಿರೇಳಿಸಿದ ಆನೆ ಸ್ಪರ್ಧೆ
ಸಕ್ರೆಬೈಲಿನಲ್ಲಿ ಮೈನವಿರೇಳಿಸಿದ ಆನೆ ಸ್ಪರ್ಧೆ   

ಶಿವಮೊಗ್ಗ: ಆನೆಗಳು ಕ್ರಿಕೆಟ್, ಫುಟ್‌ಬಾಲ್ ಆಡಿದವು. ರನ್ನಿಂಗ್ ರೇಸ್, ಪಥ ಸಂಚಲನ ನಡೆಸಿದವು. ಹಾಡಿಗೆ ಹೆಜ್ಜೆ ಹಾಕಿದವು. ತಿನ್ನುವ ಸ್ಪರ್ಧೆಯಲ್ಲೂ ಪಾಲ್ಗೊಂಡು ನೆರೆದ ಜನರನ್ನು ರಂಜಿಸಿದವು.

ಶಿವಮೊಗ್ಗ ತಾಲ್ಲೂಕಿನ ಸಕ್ರೆಬೈಲು ಗ್ರಾಮದ ಆನೆ ಬಿಡಾರದಲ್ಲಿ ಭಾನುವಾರ ಆನೆಗಳದ್ದೇ ಅಬ್ಬರ. 58ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಆನೆ ದಿನಾಚರಣೆಯ ನೋಟವಿದು.

ಅತ್ಯಂತ ಕಿರಿಯ ವಯಸ್ಸಿನ ನಾಲ್ಕು ವರ್ಷದ ಆಲೆಯಿಂದ ಹಿಡಿದು 79 ವರ್ಷದ ಹಿರಿಯಕ್ಕ ಇಂದಿರಾ ಆನೆ ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜನ ಮೆಚ್ಚುಗೆಗೆ ಪಾತ್ರವಾದವು.

 ಆಲೆ, ಅಮೃತಾರ ಕ್ರಿಕೆಟ್, ಫುಟ್‌ಬಾಲ್ ಆಟ ಜನರ ಮನಸೆಳೆಯಿತು. ಆನೆಗಳೆಲ್ಲವೂ ಸಾಮೂಹಿಕವಾಗಿ ಬಾಯಿಯಿಂದ ನೀರಿನ ಕಾರಂಜಿ ಹಾರಿಸಿದ್ದು, ಜನರತ್ತ ತಿರುಗಿ ಕಾಲೆತ್ತಿ ಸಲ್ಯೂಟ್ ಮಾಡಿದ್ದು, ಒಂದರ ಮೇಲೊಂದು ಕಾಲಿಟ್ಟು ಚಿನ್ನಾಟವಾಡಿದ್ದು, ಆಯಾಸಗೊಂಡ ಮಾವುತನನ್ನು ಸೊಂಡಿಲಲ್ಲೇ ಹೊತ್ತು ತರುವ ರೀತಿ ಕುತೂಹಲ ಮೂಡಿಸಿತು.

ಅಮೃತಾ `ಬಂದಾ ಜಯಸಿಂಹ...~ ಹಾಡಿಗೆ ಹೆಜ್ಜೆ ಹಾಕಿದ್ದು ಮನಮೋಹಕವಾಗಿತ್ತು. ಅಲ್ಲದೇ, ಕುಂಟೆಬಿಲ್ಲೆ, ಮುಂಬದಿ ಓಟ, ಕಮಾಂಡಿಂಗ್ ಸೇರಿದಂತೆ ಎಲ್ಲ ಸ್ಪರ್ಧೆಗಳಲ್ಲಿಯೂ ಅಮೃತ ಪ್ರಥಮ ಸ್ಥಾನ ಪಡೆದಳು. ಹಿಂಬದಿ ಓಟದಲ್ಲಿ ಸಾಗರ ಪ್ರಥಮ ಸ್ಥಾನ ಪಡೆಯಿತು.

ಆಟದಲ್ಲಿ ಹಿಂದುಳಿದಿದ್ದ ಆನೆಗಳು ಕಬ್ಬು- ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಮುಂದೆ ಬಂದವು. ಆನೆಗಳ ಆಟಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಆನೆ ಬಿಡಾರದ 14 ಆನೆಗಳಲ್ಲಿ ಎಂಟು ಆನೆಗಳು ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಕಾವೇರಿ, ಗೀತಾ, ಗಂಗಾ ಹಾಗೂ ಕಪಿಲಾ ಆನೆಗಳು ಕೂಡ ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.