ADVERTISEMENT

ಸಚಿವರ ಅಕ್ರಮ ಆಸ್ತಿ: ಶೀಘ್ರ ದಾಖಲೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಕೊಪ್ಪಳ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಂಪುಟದಲ್ಲಿರುವ 3-4 ಸಚಿವರು ಅಕ್ರಮವಾಗಿ ಸಂಪಾದಿಸಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕುರಿತು ಕೆಲವೇ ದಿನಗಳಲ್ಲಿ ಪಕ್ಷವು ದಾಖಲೆ ಬಿಡುಗಡೆ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತಿಳಿಸಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಅವರ ಸಂಪುಟದಲ್ಲಿ ಅನೇಕ ಸಚಿವರು ಅಕ್ರಮ ಆಸ್ತಿ ಹೊಂದಿದ್ದು ಪ್ರಸ್ತಾಪವಾಗಿತ್ತಲ್ಲದೆ ಕೆಲವರ ವಿರುದ್ಧ ವಿಚಾರಣೆ ಸಹ ನಡೆಯುತ್ತಿದೆ. ಈಗಿನ ಮುಖ್ಯಮಂತ್ರಿ ಡಿ.ಸಿ. ಸದಾನಂದಗೌಡ ಅವರ ಸಂಪುಟದಲ್ಲಿನ 3-4 ಜನ ಸಚಿವರು ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದಾರೆ. ಈ ಕುರಿತಂತೆ ದಾಖಲೆ ಸಮೇತ ನಾಡಿನ ಜನತೆಗೆ ಮಾಹಿತಿ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಯೋಗೀಶ್ವರ್ ವಂಚನೆ: ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ ವಂಚನೆ ಆರೋಪವಿದೆ. ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಧೀನ ಸಂಸ್ಥೆಯಾದ ಎಸ್‌ಎಫ್‌ಐಒ (ಸೀರಿಯಸ್ ಫ್ರಾಡ್ ಇನ್‌ವೆಸ್ಟಿಗೇಟಿಂಗ್ ಆಫೀಸ್) ಈ ಸಂಬಂಧ 2009ರಿಂದ ತನಿಖೆ ನಡೆಸಿದ್ದು, ಸಚಿವ  ಯೋಗೀಶ್ವರ್ ವಿರುದ್ಧ  ಆಪಾದನೆ ಮಾಡಿದೆ. ಮೆಗಾಸಿಟಿ ಪ್ರಾಜೆಕ್ಟ್ ಹೆಸರಿನಲ್ಲಿ 9 ಸಾವಿರ ಜನರಿಂದ 71 ಕೋಟಿ ರೂ ಸಂಗ್ರಹಿಸಿರುವ ಯೋಗೀಶ್ವರ್, ಗ್ರಾಹಕರಿಗೆ ಏನೂ ನೀಡದೇ ವಂಚನೆ ಮಾಡಿದ್ದಾರೆಂದು ಎಸ್‌ಎಫ್‌ಐಒ ವರದಿ ಹೇಳಿದೆ ಎಂದರು.

ಅಲ್ಲದೆ, ಸಚಿವ ಯೋಗೀಶ್ವರ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದೂ ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.