ADVERTISEMENT

ಸಚಿವ ಶಿವಣ್ಣರಿಂದ ಸುಳ್ಳು ಮಾಹಿತಿ

ಚುನಾವಣೆ ಆಯೋಗ, ಲೋಕಾಯುಕ್ತಕ್ಕೆ ಆಸ್ತಿ ವರದಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಂಗಳೂರು: `ಸಚಿವ ಸೊಗಡು ಶಿವಣ್ಣ ತುಮಕೂರು ಜಿಲ್ಲೆಯಾದ್ಯಂತ ಅಕ್ರಮವಾಗಿ ಆಸ್ತಿಯನ್ನು ಹೊಂದಿದ್ದು, ಚುನಾವಣೆ ಆಯೋಗ ಹಾಗೂ ಲೋಕಾಯುಕ್ತಕ್ಕೆ ತಮ್ಮ ಆಸ್ತಿಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು' ಎಂದು ಕಾಂಗ್ರೆಸ್ ಮುಖಂಡ ಪಿ.ಎನ್. ಕೃಷ್ಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, `ಸಚಿವರು 50 ಕೋಟಿ ರೂಪಾಯಿಗಿಂತ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ತುಮಕೂರು ಜಿಲ್ಲೆಯ ದೇವರಾಯಪಟ್ಟಣ, ಚಿಕ್ಕಪೇಟೆ ಸೇರಿದಂತೆ 7 ಕಡೆಗಳಲ್ಲಿ ಅಕ್ರಮ ಭೂಮಿ ಮತ್ತು 12 ಕಡೆಗಳಲ್ಲಿ ಭಾರಿ ಬೆಲೆಯ ನಿವೇಶನಗಳನ್ನು ಹೊಂದಿದ್ದಾರೆ.

ಪತ್ನಿ ಮತ್ತು ಪುತ್ರನ ಹೆಸರಿನಲ್ಲಿ ಅಕ್ರಮ ಆಸ್ತಿಯಿದ್ದು, ಅವುಗಳನ್ನು ಆಸ್ತಿ ಘೋಷಣೆ ಮಾಡುವ ಸಂದರ್ಭದಲ್ಲಿ ತಿಳಿಸದೇ ಕೇವಲ ನಾಲ್ಕು ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯ ಮಾಹಿತಿಯನ್ನು ಮಾತ್ರ ನೀಡಿದ್ದಾರೆ' ಎಂದು ಆರೋಪಿಸಿದರು. `1994 ಮತ್ತು 95ರಲ್ಲಿ ಕೇವಲ 7 ಎಕರೆ ಜಮೀನು ಹೊಂದಿದ್ದ ಶಿವಣ್ಣ, ಹಲವು ವರ್ಷಗಳ ರಾಜಕೀಯ ಜೀವನದಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಸಂಪಾದಿಸಿದ್ದಾರೆ.

ಚಿಕ್ಕ ಪ್ರಮಾಣದಲ್ಲಿ ವ್ಯಾಪಾರವನ್ನು ನಡೆಸಿಕೊಂಡಿರುವ ಅವರು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿಗಳಿಸಲು ಹೇಗೆ ಸಾಧ್ಯವಾಯಿತು. ಇದು ಅಕ್ರಮವಾಗಿ ಸಂಪಾದಿಸಿದ ಆಸ್ತಿ' ಎಂದು ಅವರು ಆರೋಪಿಸಿದರು.`ತಪ್ಪು ಮಾಹಿತಿಯನ್ನು ನೀಡಿರುವ ಸಚಿವರನ್ನು ಕೂಡಲೇ ಮುಖ್ಯಮಂತ್ರಿಯವರು ಸಂಪುಟದಿಂದ ಕೈಬಿಡಬೇಕು. ಈ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯ ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು' ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲ ಬ್ರಹ್ಮಾನಂದ ರೆಡ್ಡಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.