ADVERTISEMENT

ಸಚಿವ ಸ್ಥಾನಕ್ಕೆ ಮತ್ತೆ ಲಾಬಿ ಆರಂಭ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಬೆಂಗಳೂರು: ಶಾಸಕ ಬಿ.ಶ್ರೀರಾಮುಲು ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಬಳ್ಳಾರಿಯ ಬಿಜೆಪಿ ಶಾಸಕರು ಮತ್ತು ಸಂಸದರು ಮತ್ತೆ ಲಾಬಿ ಆರಂಭಿಸಿದ್ದಾರೆ. ಈ ಸಂಬಂಧ ಶನಿವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿ ಮಾಡಿರುವ ಶಾಸಕರು, ಸಂಸದರ ನಿಯೋಗ ಒತ್ತಡ ಹೇರುವ ಪ್ರಯತ್ನ ನಡೆಸಿದೆ.

ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸದಾನಂದ ಗೌಡ ಅವರನ್ನು ಭೇಟಿ ಮಾಡಿದ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ, ಕೆ. ನೇಮಿರಾಜ ನಾಯ್ಕ, ಟಿ.ಎಚ್.ಸುರೇಶ್‌ಬಾಬು, ಬಿ.ನಾಗೇಂದ್ರ, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ ಮತ್ತಿತರರು ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಸಚಿವ ಸಂಪುಟದಲ್ಲಿ ಬಳ್ಳಾರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಬಳ್ಳಾರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರುವುದು ಮತ್ತು ಭಾನುವಾರ ಗದಗ ನಗರದಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭಕ್ಕೆ ಆಹ್ವಾನಿಸುವ ಕಾರಣ ನೀಡಿ ಈ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿತ್ತು. ದೀರ್ಘ ಕಾಲ ಸದಾನಂದ ಗೌಡ ಅವರ ಜೊತೆ ಚರ್ಚೆ ನಡೆಸಿದ ನಿಯೋಗದ ಸದಸ್ಯರು, ಶ್ರೀರಾಮುಲು ಸೇರಿದಂತೆ ಬಳ್ಳಾರಿಯ ಕನಿಷ್ಠ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಹೊರಬಂದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ನಿಯೋಗದ ಸದಸ್ಯರು, `ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ~ ಎಂದರು. ಶಾಸಕರಾದ ಜಿ.ಕರುಣಾಕರ ರೆಡ್ಡಿ, ಜಿ.ಸೋಮಶೇಖರ ರೆಡ್ಡಿ ಮತ್ತು ಆನಂದ್ ಸಿಂಗ್ ನಿಯೋಗದಲ್ಲಿ ಇರಲಿಲ್ಲ.
 

ಎರಡು ದಿನದಲ್ಲಿ ಇತ್ಯರ್ಥ

`ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಸಂಬಂಧಿಸಿದ ವಿವಾದ ಎರಡು ದಿನಗಳಲ್ಲಿ ಇತ್ಯರ್ಥವಾಗಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು. ಗೃಹ ಕಚೇರಿ `ಕೃಷ್ಣಾ~ದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, `ಪಕ್ಷದ ಮುಖಂಡರು ಶ್ರೀರಾಮುಲು ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತಾರೆ. ಒಂದೆರಡು ದಿನಗಳಲ್ಲಿ ವಿವಾದ ಇತ್ಯರ್ಥವಾಗುತ್ತದೆ~ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.