ADVERTISEMENT

‘ಸಣ್ಣಪುಟ್ಟ ತಪ್ಪುಗಳಿದ್ದರೆ ವಾಪಸು’

ಮದ್ಯದಂಗಡಿ ಪರವಾನಗಿ ಅಮಾನತು ಪ್ರಶ್ನಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

ಬೆಂಗಳೂರು: ‘ಗಂಭೀರ ಪ್ರಮಾಣದ ಷರತ್ತು ಉಲ್ಲಂಘನೆ ಮಾಡದೇ ಇರುವಂತಹ ಮದ್ಯದ ಅಂಗಡಿಗಳ ಪರವಾನಗಿ ಅಮಾನತು ಆದೇಶ ವಾಪಸು ಪಡೆಯಲು ರಾಜ್ಯದಾದ್ಯಂತ ಜಿಲ್ಲಾ ಅಬಕಾರಿ ಡಿ.ಸಿಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ’ ಎಂದು ಅಬಕಾರಿ ಆಯುಕ್ತರು ಹೈಕೋರ್ಟ್‌ಗೆ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿದ್ದಾರೆ.

ಈ ಕುರಿತಂತೆ ಹೆಚ್ಚುವರಿ ಅಡ್ವೊ ಕೇಟ್ ಜನರಲ್ ಎ.ಜಿ.ಶಿವಣ್ಣ ಅವರು ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಗುರುವಾರ ಮುಚ್ಚಳಿಕೆ ನೀಡಿ ವಿವರಿಸಿದರು.

‘ಈಗಾಗಲೇ ಏ.25ರಂದೇ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದ್ದು, ಎಲ್ಲ ಅಬಕಾರಿ ಡಿ.ಸಿಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ಪರಿಶೀಲನೆ ನಡೆಸಿ ಸಣ್ಣಪುಟ್ಟ ತಪ್ಪುಗಳಿಗೆ ಅಮಾನತು ಮಾಡಲಾದ ಅಂಗಡಿಗಳ ಪರವಾನಗಿ ವಾಪಸು ನೀಡಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನಿಯಮ ಮತ್ತು ಷರತ್ತು ಉಲ್ಲಂಘಿಸುವವರ ಪರವಾನಗಿ ಅಮಾನತುಗೊಳಿಸಲು ಏ.18ರಂದು ಆದೇಶ ಹೊರಡಿಸಿ, ಜಿಲ್ಲಾ ಅಬಕಾರಿ ಡಿ.ಸಿಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿತ್ತು. ಅದರಂತೆ ಡಿ.ಸಿ.ಗಳು ಕೆಲವು ಪರವಾನಗಿ ಅಮಾನತುಗೊಳಿಸಿದ್ದಾರೆ. ಇದೀಗ ಅವುಗಳನ್ನು ಮೂರು ವರ್ಗಗಳ ಅಡಿಯಲ್ಲಿ ವರ್ಗೀಕರಿಸಿ ಪರಿಶೀಲಿಸಲಾಗುವುದು’ ಎಂದು ಮೆಮೊದಲ್ಲಿ ವಿವರಿಸಲಾಗಿದೆ.

‘ಮೊದಲ ವರ್ಗದಲ್ಲಿ ಸರಿಯಾದ ಸಮಯಕ್ಕೆ ಅಂಗಡಿ ಬಾಗಿಲು ತೆರೆಯದ ಅಥವಾ ಮುಚ್ಚದ ಹಾಗೂ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬಂತಹ ಕಾರಣಗಳಿಗೆ ಅಮಾನತು ಮಾಡಲಾದ ಅಂಗಡಿಗಳ ಪರವಾನಗಿ ವಾಪಸು ನೀಡಲಾಗುವುದು ಎಂದು ಶಿವಣ್ಣ ತಿಳಿಸಿದರು.

ಮೂರನೇ ವರ್ಗದಲ್ಲಿ ಅನಧಿಕೃತ ವಾಗಿ ಮದ್ಯ ಮಾರಾಟ ಮಾಡಿದ ಆರೋಪಗಳಿದ್ದರೆ ಅಂತಹ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು. ಇವುಗಳನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಲಾಗುವುದು’ ಎಂದು ಅವರು ವಿವರಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಈ ಸಂಬಂಧ ಸಲ್ಲಿಕೆಯಾಗಿದ್ದ 25ಕ್ಕೂ ಹೆಚ್ಚು ರಿಟ್ ಅರ್ಜಿಗಳನ್ನು ವಿಲೇವಾರಿ ಮಾಡಿದೆ.

‘ಸಣ್ಣಪುಟ್ಟ ತಪ್ಪುಗಳಿಗೆ ನಮ್ಮ ಮದ್ಯದ ಅಂಗಡಿಗಳ ಪರವಾನಗಿ ಯನ್ನು ಅಮಾನತುಗೊಳಿಸಿದ್ದಾರೆ’ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.