ADVERTISEMENT

ಸದನದಲ್ಲಿ `ಕಾವೇರಿ' ಗದ್ದಲ: ವಿಧಾನಸಭೆ ವಿಸರ್ಜನೆಗೆ ವಿರೋಧಪಕ್ಷ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 11:42 IST
Last Updated 10 ಡಿಸೆಂಬರ್ 2012, 11:42 IST

ಬೆಳಗಾವಿ (ಪಿಟಿಐ): `ತಮಿಳುನಾಡಿಗೆ ಕಾವೇರಿ ನೀರು ಬಿಡುವ ಯಾವುದೇ ನೈತಿಕ ಹಕ್ಕು ನಿಮ್ಮ ಸರ್ಕಾರಕ್ಕೆ ಇಲ್ಲ. ನಿಮ್ಮದು ಬಹುಮತವಿಲ್ಲದ ಅಲ್ಪಮತದ ಭಂಡ ಸರ್ಕಾರ. ಆದಷ್ಟು ಬೇಗ ವಿಧಾನಸಭೆಯನ್ನು ವಿಸರ್ಜಿಸಿ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಸದನದಲ್ಲಿ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಾ ಆಗ್ರಹಿಸಿದರು.

ಇಲ್ಲಿನ ಸುವರ್ಣ ಸೌಧದಲ್ಲಿ ಬೆಳಿಗ್ಗೆ ವಿಧಾನಸಭಾ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೆ, ಸಭಾಧ್ಯಕ್ಷ ಕೆ.ಜಿ. ಬೋಪ್ಪಯ್ಯ ಅವರು `ಕಾವೇರಿ' ವಿಷಯದ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ತತ್ತ ಕ್ಷಣವೇ  ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿಯನ್ನೇ ಆರಂಭಿಸಿದರು.

`ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತವಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದಂತೆ ಇದೊಂದು ಸಮ್ಮಿಶ್ರ ಸರ್ಕಾರ. ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಬಿಜೆಪಿಯ 14 ಶಾಸಕರು ಭಾಗವಹಿಸಿದ್ದಾರೆ. ನಿಮಗೆ ಸರ್ಕಾರ ನಡೆಸುವ ನೈತಿಕ ಹಕ್ಕು ಇಲ್ಲ' ಎಂದು ಗುಡುಗಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಶೆಟ್ಟರ್ ಅವರೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು `ಕಾವೇರಿ' ವಿಷಯದ ಬಗ್ಗೆ ಮಾತ್ರ ಮಾತನಾಡಿ ಎಂದು ಕೂಗಿದರು. ಆದರೆ ಅವರ ಮಾತಿಗೆ ಕಿವಿಗೊಡದ ಸಿದ್ದರಾಮಯ್ಯ ; ಇದು ಸ್ಪಷ್ಟ ಬಹುಮತ ಇಲ್ಲದ ಅಲ್ಪ ಮತದ ಸರ್ಕಾರ. ಮುಖ್ಯಮಂತ್ರಿಗಳಿಗೆ ಸಂವಿಧಾನದ ಮೇಲೆ ಗೌರವವಿದ್ದರೆ ರಾಜೀನಾಮೆ ನೀಡಲೇ ಬೇಕು' ಒತ್ತಾಯಿಸಿದರು.

`ಕುರ್ಚಿ ಹೋದರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ನಾವು ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ಅಬ್ಬರಿಸಿದ್ದೀರಿ. ಈಗ ಮಾಡಿದ್ದಾದರೂ ಏನು?' ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಯವರನ್ನು  ಪ್ರಶ್ನಿಸಿದರು.

'ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದು ಈ ಸರ್ಕಾರವು ರಾಜ್ಯದ ಜನತೆಗೆ ಬಗೆದ ವಂಚನೆಯಾಗಿದೆ. ಅದರಲ್ಲೂ ಕಾವೇರಿ ನದಿ ತೀರದ ರೈತಾಪಿ ವರ್ಗಕ್ಕೆ ಬಗೆದ ದೊಡ್ಡ ದ್ರೋಹ. ಈ ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಿ' ಎಂದು ವಿರೋಧಪಕ್ಷ ಸದಸ್ಯರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸದನದ ಭಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ವಿಧಾನಸಭೆಯ ಸ್ಪೀಕರ್ ಮಧ್ಯಪ್ರವೇಶಿಸಿ ಕಲಾಪವನ್ನು ಸ್ವಲ್ಪ ಕಾಲ ಮುಂದೂಡಿದರು.

ಕಲಾಪ ಮತ್ತೆ ಆರಂಭವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿಯಿತು.

ಕಲಾಪ ಆರಂಭವಾಗುವುದಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, `ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡನೆ ಮಾಡುವುದಿಲ್ಲ. ಅದೊಂದು ಸ್ಪಷ್ಟ ಬಹುತಮವಿಲ್ಲದ ಅಲ್ಪಮತವಿರುವ ಸರ್ಕಾರವಾಗಿದ್ದು, ಅದೇ ಬಿದ್ದು ಹೋಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.