ಮೈಸೂರು: ಕನಿಷ್ಠ 8ನೇ ತರಗತಿವರೆಗೆ ಶಿಕ್ಷಣದ ಖಾಸಗಿ ದಂಧೆಗೆ ಅವಕಾಶ ಮಾಡಿಕೊಡದೇ, ಕಷ್ಟವಾದರೂ ಸಾರ್ವತ್ರಿಕ ಸಮಾನ ಶಿಕ್ಷಣ ಪದ್ಧತಿಯನ್ನು ಸರ್ಕಾರ ಜಾರಿಗೆ ತರುವ ಧೈರ್ಯ ಮಾಡಬೇಕು ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.
ಇಲ್ಲಿನ ಮೈಸೂರು ವಿಶ್ವವಿದ್ಯಾಲ-ಯದ ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದ 94ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮಕ್ಕಳನ್ನು ರೂಪಿಸಬೇಕಾಗಿದೆ. ಶಿಕ್ಷಣ ಪದ್ಧತಿಯ ಮೂಲಕ ಇದು ಸಾಧ್ಯವಿದ್ದು, ಈಗಾಗಲೇ ಸಾಕಷ್ಟು ವಿಳಂಬವಾಗಿದೆ ಎಂದರು.
ಪ್ರಾಥಮಿಕ ಶಿಕ್ಷಣದಲ್ಲಾದರೂ ಸಮೀಪ ಮತ್ತು ಸಮಾನ ಶಿಕ್ಷಣ ಪದ್ಧತಿ ಇಲ್ಲ. ಎಳೆಯ ಮಕ್ಕಳಲ್ಲಿ ಭಿನ್ನಭಾವ, ಅಂತಸ್ತು, ತಾರತಮ್ಯ ಉಂಟು ಮಾಡುವ ಚಾತುರ್ವರ್ಣದ ಸೋಂಕಿನಂತಿರುವ ಪಂಚವರ್ಣ ಶಿಕ್ಷಣ ಪದ್ಧತಿ ಇದೆ. ಇದೇ ವ್ಯವಸ್ಥೆ ನಾಳಿನ ಅಸಮಾನ ಭಾರತಕ್ಕೆ ಕಾರಣವಾಗುತ್ತದೆ. ಇಲ್ಲಿನ ಸಾಮಾಜಿಕ ವ್ಯವಸ್ಥೆಗೆ ಎಲ್ಲ ಜಾತಿ– ವರ್ಗದ ಮಕ್ಕಳು ಜೊತೆಗೂಡಿ ಒಡನಾಡುವುದೇ ಭಾರತಕ್ಕೆ ಬಲು ದೊಡ್ಡ ಶಿಕ್ಷಣ ಎಂಬ ಕನಿಷ್ಠ ತಿಳಿವಳಿಕೆಯಾದರೂ ನಮಗಿರಬೇಕಾಗಿತ್ತು.
ಸಮಾನ ಶಿಕ್ಷಣ ಪದ್ಧತಿಯಲ್ಲಿ ಉಂಟಾಗುವ ಸ್ಥಳೀಯ ಎಚ್ಚರದಿಂದಾಗಿ ಯಾವುದೇ ಕಳಪೆ ಸರ್ಕಾರಿ ಶಾಲೆಯೂ ತಂತಾನೇ ಉನ್ನತೀಕರಣಗೊಳ್ಳುತ್ತದೆ ಎಂಬುದಕ್ಕೆ ನಾವು ಕುರುಡಾಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) 1990ರ ದಶಕದಲ್ಲಿ ಸಂರಚನಾತ್ಮಕ ಹೊಂದಾಣಿಕೆ ನೀತಿಯ ಅಡಿ ಶಿಕ್ಷಣದ ಖರ್ಚು–ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಭಾರತಕ್ಕೆ ನಿರ್ದೇಶನ ನೀಡಿತ್ತು.
ಮನುಷ್ಯತ್ವ ಇಲ್ಲದ ದುಡ್ಡಿಗೆ, ಬಂಡವಾಳಶಾಹಿಗೆ ಶಿಕ್ಷಣವೂ ಲಾಭರಹಿತ ಅನುತ್ಪಾದಕ ಕ್ಷೇತ್ರವಾಗಿ ಕಾಣಿಸುತ್ತದೆ. ಇದಕ್ಕೆ ಅನುಗುಣವಾಗಿ ನಮ್ಮ ಸರ್ಕಾರ ಕೂಡ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಬಾಯಿಗೆ ಹಾಕುತ್ತಾ ದುಡ್ಡು ಮಾಡುವ ದಂಧೆಯನ್ನಾಗಿಸಿಬಿಟ್ಟಿದೆ. ಇದು ಉದ್ಧಾರವೇ, ಅಧಃಪತನವೇ ಎಂಬುದಕ್ಕೆ ವಿದ್ಯಾವಂತ ಸಮುದಾಯ ಉತ್ತರ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಮುಂದುವರಿದು ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ ಎಂಬ ಅಂಬೇಡ್ಕರ್ ಅವರ ಕಳವಳ ಈಗ ನಿಜವಾಗಿದೆ. ಇಂತಹ ಆಪತ್ತಿನ ಅಂಚಿಗೆ ದೇಶ ತಲುಪಿದ್ದು, ಯಮಪಾಶ ಎದುರಿಗಿದೆ. ಸಾಮಾಜಿಕ ಪ್ರತ್ಯೇಕತೆಯನ್ನು ಹೆಚ್ಚಿಸುವ ಜಾತಿ ‘ಟೌನ್ಷಿಪ್್ ಕ್ಯಾನ್ಸರ್’ನಂತೆ ಹೆಚ್ಚುತ್ತಿದೆ. ಜತೆಗೆ ರಾಷ್ಟ್ರದ ಅರ್ಧದಷ್ಟು ಆಸ್ತಿ ಕೇವಲ 100 ಕುಟುಂಬಗಳ ವಶದಲ್ಲಿದೆ. 100 ಕೋಟಿಗೆ ಅರ್ಧ ಸಂಪತ್ತಾದರೆ, ನೂರು ಜನರಿಗೆ ಇನ್ನರ್ಧ! ಹೀಗಾದರೆ ಪ್ರಜಾಸತ್ತೆ, ಜನತಂತ್ರ ವ್ಯವಸ್ಥೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಪ್ರಧಾನಮಂತ್ರಿ ಸಲಹೆಗಾರ ಸ್ಯಾಮ್ ಪಿತ್ರೋಡಾ, ಕೃಷಿಕ್ ಸರ್ವೋದಯ ಫೌಂಡೇಷನ್ ಸಂಸ್ಥಾಪಕ ನಿವೃತ್ತ ಐಎಎಸ್ ಅಧಿಕಾರಿ ವೈ.ಕೆ. ಪುಟ್ಟಸೋಮೇಗೌಡ, ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಕುಲಸಚಿವ ಪ್ರೊ.ಸಿ. ಬಸವರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.