ADVERTISEMENT

ಸಮ್ಮೇಳನಕ್ಕೆ ಬರುವವರು ಕೋಲು-ಟಾರ್ಚ್ ತನ್ನಿ!

​ಪ್ರಜಾವಾಣಿ ವಾರ್ತೆ
Published 14 ಜನವರಿ 2013, 19:59 IST
Last Updated 14 ಜನವರಿ 2013, 19:59 IST
ವಿಜಾಪುರದ ಹುತಾತ್ಮ (ಮೀನಾಕ್ಷಿ) ಚೌಕ್‌ನಲ್ಲಿ ಹದಗೆಟ್ಟ ರಸ್ತೆ. ರಸ್ತೆಯ ಪಕ್ಕವೇ ಬಿದ್ದಿರುವ ಕಸದ ರಾಶಿಯಲ್ಲಿ ಹಂದಿಗಳನ್ನು ಕಾಣಬಹುದು. ಚಿತ್ರ: ಸಂಜೀವ ಅಕ್ಕಿ
ವಿಜಾಪುರದ ಹುತಾತ್ಮ (ಮೀನಾಕ್ಷಿ) ಚೌಕ್‌ನಲ್ಲಿ ಹದಗೆಟ್ಟ ರಸ್ತೆ. ರಸ್ತೆಯ ಪಕ್ಕವೇ ಬಿದ್ದಿರುವ ಕಸದ ರಾಶಿಯಲ್ಲಿ ಹಂದಿಗಳನ್ನು ಕಾಣಬಹುದು. ಚಿತ್ರ: ಸಂಜೀವ ಅಕ್ಕಿ   

ವಿಜಾಪುರ: `ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ; ಬರುವಾಗ ನಿಮ್ಮ ಆಸರೆಗಾಗಿ ಒಂದು ಕೋಲು, ಟಾರ್ಚ್ ಮರೆಯದೇ ತನ್ನಿ'ಫೆಬ್ರುವರಿ 9ರಿಂದ 11ರ ವರೆಗೆ ಇಲ್ಲಿ ನಡೆಯಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲಿರುವ ಸಾಹಿತ್ಯಾಸಕ್ತರಿಗೆ ಪ್ರಜ್ಞಾವಂತರು ನೀಡುತ್ತಿರುವ ಸಲಹೆ ಇದು!

`ಇಲ್ಲಿ ಮಂದಿಗಿಂತ ಹಂದಿಗಳು ಹೆಚ್ಚು. ಗುಂಡಿ ಬಿದ್ದ ರಸ್ತೆ, ಚರಂಡಿ ಇಲ್ಲದ್ದರಿಂದ ರಸ್ತೆಯಲ್ಲಿಯೇ ನಿಲ್ಲುವ ಕೊಳಚೆ ನೀರು. ಬೀದಿ ತುಂಬೆಲ್ಲ ಹರಡಿಕೊಂಡಿರುವ ಕಸದ ರಾಶಿ. ಕಸ-ಕೊಚ್ಚೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಹಂದಿ-ಬೀದಿ ನಾಯಿಗಳ ಹಾವಳಿ. ಇದಲ್ಲದೆ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ.  ಒಳಚರಂಡಿ ಕಾಮಗಾರಿಗಾಗಿ ಅಗೆದು ರಸ್ತೆಯಲ್ಲಿಯೇ ಗುಡ್ಡೆಹಾಕಿರುವ ಮಣ್ಣಿನ ರಾಶಿ... ಇದು ವಿಜಾಪುರದ ಈಗಿನ ವಿಶೇಷತೆ' ಎಂದು ಕುಹಕವಾಡುತ್ತಾರೆ ಅವರು.

`ಅಕ್ಷರ ಜಾತ್ರೆಗಾಗಿ ನಗರ ಅಲಂಕಾರ, ಗೋಡೆ ಬರಹ, ಬಹುಮುಖ್ಯವಾಗಿ ಆಗಬೇಕಿರುವ ರಸ್ತೆ ದುರಸ್ತಿ ಕೆಲಸ ಇನ್ನೂ ಆಗಿಯೇ ಇಲ್ಲ. ಸಮ್ಮೇಳನಕ್ಕೆ ಕೇವಲ 25 ದಿನ ಬಾಕಿ ಉಳಿದಿದೆ. ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ತೀವ್ರತೆ ಕಾಣುತ್ತಿಲ್ಲ. ಸಮ್ಮೇಳನದ ಸಂದರ್ಭದಲ್ಲಿಯೂ ನಗರ ಇದೇ ಸ್ಥಿತಿಯಲ್ಲಿ ಇದ್ದರೆ ಸಮ್ಮೇಳನಕ್ಕೆ ಬರುವ ಹಿರಿಯರು ಆಸರೆಗೆ ಕೋಲು-ಬೆಳಕಿಗೆ ಟಾರ್ಚ್  ತರುವುದು ಅನಿವಾರ್ಯವಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗರದ ಹಿರಿಯ ಸಾಹಿತಿಯೊಬ್ಬರು.ಏತನ್ಮಧ್ಯೆ ತಮ್ಮ ವೇತನ ಬಾಕಿ ಪಾವತಿಗೆ ಆಗ್ರಹಿಸಿ ನಗರದ ಕಸ ಗುಡಿಸುವ ಗುತ್ತಿಗೆ ಕಾರ್ಮಿಕರು ಮೂರು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಹಂದಿ ಹೆಚ್ಚು: `ನಗರದಲ್ಲಿರುವ ಹಂದಿ-ಬೀಡಾಡಿ ದನಗಳ ಬಗ್ಗೆ ಸಮೀಕ್ಷೆಯೇ ಆಗಿಲ್ಲ. ಸಾವಿರಕ್ಕೂ ಹೆಚ್ಚು ಬೀಡಾಡಿ ದನಗಳು, 15 ಸಾವಿರಕ್ಕೂ ಹೆಚ್ಚು ಹಂದಿ ಇರುವ ಅಂದಾಜಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನನ್ನ ವಾರ್ಡ್‌ನಲ್ಲಿ ಜನರಿಗಿಂತ ಹಂದಿಗಳೇ ಹೆಚ್ಚಿವೆ. ಅವು ಜನರನ್ನು ಕಚ್ಚುತ್ತಿವೆ. ಹಂದಿಗಳನ್ನು ಬೇರೆಡೆ ಸಾಗಿಸುವ ಇಲ್ಲವೇ ಸಾಯಿಸುವ ಕಾರ್ಯಾಚರಣೆ ನಡೆದೇ ಇಲ್ಲ. ಬೀದಿ ದೀಪಗಳ ನಿರ್ವಹಣೆ, ಸೊಳ್ಳೆಗಳ ನಿರ್ಮೂಲನೆ ಕಾರ್ಯಾಚರಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ' ಎಂದು ನಗರಸಭೆ ಸದಸ್ಯ ರವೀಂದ್ರ ಕುಲಕರ್ಣಿ ದೂರುತ್ತಾರೆ.

`ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸುವ ಹೊಣೆಯನ್ನು ಮಾನಸಾ ಪ್ರಾಣಿ ದಯಾ ಸಂಘದವರಿಗೆ ವಹಿಸಲಾಗಿದ್ದು, ವಾರದಲ್ಲಿ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಹಂದಿಗಳ ನಿರ್ಮೂಲನೆಗೆ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ' ಎನ್ನುತ್ತಾರೆ ನಗರಸಭೆಯ ಪರಿಸರ ಎಂಜಿನಿಯರ್ ಜಗದೀಶ.

ಸಮ್ಮೇಳನಕ್ಕೆ ಬರುವವರು ಕೋಲು-ಟಾರ್ಚ್ ತನ್ನಿ!

ಸಂಚಾರಿ ಶೌಚಾಲಯ ಇಲ್ಲ: `ನಗರಸಭೆಯಲ್ಲಿ ಒಂದೂ ಸಂಚಾರಿ ಶೌಚಾಲಯ ಇಲ್ಲ. ಅದೂ ಸೇರಿದಂತೆ ಸಮ್ಮೇಳನ ನಡೆಯುವ ಸ್ಥಳದಲ್ಲಿ ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲುರೂ35 ಲಕ್ಷ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದ್ದೇವೆ. ನಗರಸಭೆಯ ಸಂಪನ್ಮೂಲದಲ್ಲಿಯೇ ಇದನ್ನೆಲ್ಲ ಕೈಗೊಳ್ಳಿ ಎಂದು ಅವರು ಸೂಚಿಸಿದ್ದಾರೆ. ಮೂರು ತಿಂಗಳ ಬಾಕಿ ವೇತನ ಪಾವತಿಗಾಗಿ ಕಸ ಗುಡಿಸುವ ಗುತ್ತಿಗೆ ಕಾರ್ಮಿಕರೂ ಮುಷ್ಕರ ನಡೆಸುತ್ತಿದ್ದಾರೆ' ಎಂಬುದು ನಗರಸಭೆಯ ಅಧ್ಯಕ್ಷ ಪರಶುರಾಮ ರಜಪೂತ ಅವರ ಅಸಹಾಯಕತೆ.

ಯುಜಿಡಿ ಸ್ಥಗಿತ: `ಒಳಚರಂಡಿ ಕಾಮಗಾರಿಗಾಗಿ ನಗರದ ರಸ್ತೆಗಳನ್ನು ಅಗೆಯುತ್ತಿರುವುದು ನಿಜ. ಸಮ್ಮೇಳನ ನಡೆಯುವ ಸಮಯದಲ್ಲಿ ರಸ್ತೆಗಳನ್ನು ಅಗೆದು ಗುಂಡಿ ತೋಡುವುದು ಸರಿಯಲ್ಲ. ಮುಖ್ಯ ರಸ್ತೆ ಹಾಗೂ ನಗರ ವ್ಯಾಪ್ತಿಯಲ್ಲಿ ಇದೇ 20ರಿಂದ ಕಾಮಗಾರಿಯನ್ನು ಸಮ್ಮೇಳನ ಮುಗಿಯುವವರೆಗೆ ಸ್ಥಗಿತಗೊಳಿಸಬೇಕು. ಈಗ ಅಗೆದಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ' ಎನ್ನುತ್ತಾರೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ.

ರೂ 41 ಕೋಟಿ ಕಾಮಗಾರಿ: `ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿರೂ 30 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿ ವಹಿಸಿಕೊಟ್ಟಿದ್ದೇವೆ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ರೂ 11 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆದು ಶೀಘ್ರ ಆ ಕಾಮಗಾರಿಯನ್ನೂ ಆರಂಭಿಸಲಾಗುವುದು' ಎಂಬುದು ನಗರ ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT