ADVERTISEMENT

‘ಸರ್ಕಾರದ ಕಾರ್ಯಕ್ರಮ ತಲುಪಿಸಲು ವಿಫಲವಾದ ಆಡಳಿತ’

ಮಂತ್ರಿಗಳು, ಅಧಿಕಾರಿಗಳು ಇದಕ್ಕೆ ಕಾರಣ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
‘ಸರ್ಕಾರದ ಕಾರ್ಯಕ್ರಮ ತಲುಪಿಸಲು ವಿಫಲವಾದ ಆಡಳಿತ’
‘ಸರ್ಕಾರದ ಕಾರ್ಯಕ್ರಮ ತಲುಪಿಸಲು ವಿಫಲವಾದ ಆಡಳಿತ’   

ಬೆಂಗಳೂರು: ‘ರಾಜ್ಯ ಸರ್ಕಾರದ  ಉತ್ತಮ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಮಂತ್ರಿಗಳು, ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.

‘ನಮ್ಮ ರಾಜಕೀಯ ವಿರೋಧಿಗಳು ತಪ್ಪು ಮಾಹಿತಿಗಳನ್ನು ಜನರಿಗೆ ನೀಡುತ್ತಿದ್ದು, ಆ ಬಗ್ಗೆ ಅರಿವು ಮೂಡಿಸುವ ಕೆಲಸವೂ ಸರ್ಕಾರದ ಕಡೆಯಿಂದ ಆಗಿಲ್ಲ’ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಮರ್ಥ ಆಡಳಿತಕ್ಕೆ ಮಾಧ್ಯಮದ ಜತೆ ಜನರೆಡೆಗೆ’ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಹೇಳಿದರು.

‘ಅನ್ನಭಾಗ್ಯದಿಂದ ಜನರ ಸೋಮಾರಿಗಳಾಗುತ್ತಾರೆ. ಕೂಲಿಗೆ ಯಾರೂ ಬರುವುದಿಲ್ಲ ಎಂಬುದಾಗಿ ಅಪಪ್ರಚಾರ ಮಾಡಲಾಯಿತು. ಮಾಧ್ಯಮಗಳಲ್ಲೂ ಇಂತಹ ಪ್ರಚಾರ ನಡೆಯಿತು. ಅದು ಸತ್ಯ ಅಲ್ಲ. ಯೋಜನೆಯಿಂದ ಆದ ಪ್ರಯೋಜನಗಳನ್ನು ಜನರಿಗೆ ಹೇಳುವ   ಕೆಲಸವನ್ನು ಮಾಧ್ಯಮಗಳು ಮಾಡಲಿಲ್ಲ’ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರದ ಕಾರ್ಯಕ್ರಮಗಳನ್ನು ಜಾರಿ ಮಾಡುವಾಗ ಮಾಧ್ಯಮದಲ್ಲಿ ನಕಾರಾತ್ಮಕ ಪ್ರಚಾರ ಮತ್ತು ತಪ್ಪು ಮಾಹಿತಿ ಪ್ರಕಟವಾದಾಗ ಅದಕ್ಕೆ ಉತ್ತರ ಕೊಡುವವರು ಯಾರು. ಮಂತ್ರಿಗಳು ಮತ್ತು ಅಧಿಕಾರಿಗಳು ಉತ್ತರ ನೀಡಬೇಕು. ಆ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಸತ್ಯವನ್ನು ತಿಳಿಸುವ ಕೆಲಸ ಮಾಡಿದರೆ ಸಮಾಜಕ್ಕೂ ಒಳ್ಳೆಯದು. ಮಾಧ್ಯಮಗಳು ಸರ್ಕಾರ ಮತ್ತು ಜನತೆ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸರ್ಕಾರ ದಿವಾಳಿಯಲ್ಲ:
‘ಮಲೆಮಹದೇಶ್ವರ ಬೆಟ್ಟ ದೇವಸ್ಥಾನದ ಹಣ ಅಪೆಕ್ಸ್‌ ಬ್ಯಾಂಕಿನಲ್ಲಿ ಇಟ್ಟರೆ ತಪ್ಪೇನು. ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ. ಆದರೆ, ವಿರೋಧ ಪಕ್ಷದ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಲು ಹಣ ಇಟ್ಟಿಲ್ಲ. ಈ ಕಾರಣಕ್ಕೆ ಅಪೆಕ್ಸ್‌ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದೇವೆ. ಆ ಹಣ ಸರ್ಕಾರದ್ದು, ಬ್ಯಾಂಕ್‌ನಲ್ಲಿ ಇಟ್ಟರೆ ಬಡ್ಡಿ ಬರುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಸರ್ಕಾರ ದಿವಾಳಿ ಆಗಿದೆ ಎಂದು ಟೀಕಿಸುತ್ತಾರೆ. ರಾಜ್ಯದ ಆರ್ಥಿಕ ವ್ಯವಸ್ಥೆ ಬಗ್ಗೆ ಡಾ.ಮನಮೋಹನ್‌ ಸಿಂಗ್‌ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಮಾಧ್ಯಮಗಳು ಅದನ್ನು ಎತ್ತಿ ಹೇಳುವ ಕೆಲಸ ಮಾಡಬೇಕು ಎಂದೂ ಅವರು ತಿಳಿಸಿದರು.

***
40 ತಿಂಗಳ ಮೋದಿ ಆಡಳಿತ ಕರಾಳ:

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ 40 ತಿಂಗಳ ಆಡಳಿತ ಕರಾಳವಾದುದು. ವಾಕ್‌ ಸ್ವಾತಂತ್ರ್ಯ ದಮನ ಮಾಡಲಾಗಿದ್ದು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ದಲಿತರು ಮತ್ತು ಮುಸ್ಲಿಮರ ಮೇಲೆ ದಾಳಿ ಹೆಚ್ಚಾಗಿದೆ ಎಂದು ಪ್ರಧಾನ ಭಾಷಣ ಮಾಡಿದ ಪತ್ರಕರ್ತ ಕೃಷ್ಣಪ್ರಸಾದ್‌ ಕಿಡಿಕಾರಿದರು.

ಈ ಸರ್ಕಾರದ ಅವಧಿಯಲ್ಲಿ ಜೆಎನ್‌ಯುನಲ್ಲಿ ಶೇ 84 ರಷ್ಟು ಸಂಶೋಧನಾ ಸೀಟುಗಳನ್ನು ಕಡಿತ ಮಾಡಲಾಗಿದೆ. ಕ್ಯಾಂಪಸ್‌ನಲ್ಲಿ ಯುದ್ಧದ ಟ್ಯಾಂಕ್ ತಂದು ನಿಲ್ಲಿಸಿದ್ದಾರೆ. ದಲಿತ ವಿದ್ಯಾರ್ಥಿಗಳಿಗೆಂದು ನಿಗದಿ ಮಾಡಿರುವ ₹ 2.84 ಲಕ್ಷ ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ ಎಂದರು.

ಈ ಅವಧಿಯಲ್ಲಿ ಮ್ಯಾನ್‌ಹೋಲ್‌ ಸ್ವಚ್ಚತೆ ಮಾಡುವಾಗ 21 ಮಂದಿ ಸತ್ತು ಹೋಗಿದ್ದಾರೆ. ಗೌರಿ ಲಂಕೇಶ್‌ ಹತ್ಯೆ ಆದರೂ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಲಿಲ್ಲ. ಜನ ಹೇಗೆ ಪ್ರಾರ್ಥಿಸಬೇಕು, ಏನು ತಿನ್ನಬೇಕು , ಹೇಗೆ ಬದುಕಬೇಕು, ಯಾರನ್ನು ಮದುವೆ ಆಗಬೇಕು, ಯಾರನ್ನು ಆಗಬಾರದು ಎಂಬುದನ್ನು ಇವರು ನಿರ್ಧರಿಸುತ್ತಾರೆ. ಭಾರತದ ಅಂತಃಸತ್ವನ್ನೇ ನಾಶ ಮಾಡಿದ್ದಾರೆ ಎಂದರು.

***
3 ಲಕ್ಷ ಹಿಂಬಾಲಕರು:
‘ಮುಖ್ಯಮಂತ್ರಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ 3 ಲಕ್ಷ ಹಿಂಬಾಲಕರಿದ್ದಾರೆ. ಇದು ‘ಸಹಜ ಹಿಂಬಾಲಕರ ಪಡೆ’. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಆಸ್ಥೆ ಇದ್ದವರು ಮಾತ್ರ ಪ್ರತಿಕ್ರಿಯಿಸುತ್ತಿದ್ದಾರೆ. ಟ್ವಿಟರ್‌ ಮತ್ತು ಫೇಸ್‌ಬುಕ್‌ ಜನಪ್ರಿಯತೆ ಹೆಚ್ಚುತ್ತಿದೆ’ ಎಂದು ಮುಖ್ಯಮಂತ್ರಿ ಜಾಲತಾಣ ವಿಭಾಗದ ಕಾರ್ಯಕರ್ತರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.