ADVERTISEMENT

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಗೆ ಚಿಂತನೆ

ಒಂದು ಭಾಷೆಯಾಗಿ ಇಂಗ್ಲಿಷ್‌ ಕಲಿಸಲು ನಿರ್ಧಾರ: ಸಿ.ಎಂ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರು. ಸಚಿವ ಕೃಷ್ಣ ಭೈರೇಗೌಡ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಇದ್ದಾರೆ   –ಪ್ರಜಾವಾಣಿ ಚಿತ್ರ
ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರು. ಸಚಿವ ಕೃಷ್ಣ ಭೈರೇಗೌಡ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪೋಷಕರು ಮತ್ತು ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಂತದಿಂದಲೇ ಮಕ್ಕಳಿಗೆ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸಲಾಗುವುದು ಎಂದೂ ಅವರು ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತರುವುದರ ಕಡೆಗೆ ಇದೊಂದು ಮಹತ್ವ ಹೆಜ್ಜೆ ಆಗಲಿದೆ ಎಂದು ಹೇಳಿದರು.

ADVERTISEMENT

‘ಕನ್ನಡ ಭಾಷೆಯ ಉಳಿವು ಸರ್ಕಾರದ ಆದ್ಯತೆ. ಯಾವುದೇ ಕಾರಣಕ್ಕೂ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ. ಅವುಗಳನ್ನು ಮುಂದುವರಿಸುವ ಜತೆಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ವಾತಾವರಣ ಸೃಷ್ಟಿ ಆಗಬೇಕಿದೆ. ಇದಕ್ಕಾಗಿ ಮೂಲಸೌಕರ್ಯ ಮತ್ತು ಬೋಧನಾ ಮಟ್ಟವನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಏರಿಸುತ್ತೇವೆ. ಇವೆಲ್ಲ ಅಂಶಗಳನ್ನು ಒಳಗೊಂಡ ಹೊಸ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದು ಅವರು ಹೇಳಿದರು.

ಖಾಸಗಿ ಶಾಲೆಗಳು ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿದರೆ, ಮಾನ್ಯತೆ ರದ್ದು ಮಾಡಲಾಗುವುದು. ಅಲ್ಪಸಂಖ್ಯಾತರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಏನು ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಿದೆ ಎಂದೂ ಅವರು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಾತನಾಡಿ, ಸರ್ಕಾರಿ ಶಾಲೆಗಳಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಶಾಲೆಗೆ ಐದು ಅಥವಾ ಆರು ವಿದ್ಯಾರ್ಥಿಗಳು ಬಂದರೆ ಏನು ಮಾಡುವುದು. ಇದರಿಂದ ಸಾಕಷ್ಟು ಶಾಲೆಗಳು ಮುಚ್ಚುವ ಹಂತ ತಲುಪಿವೆ ಎಂದು ಹೇಳಿದರು.

ಜಿಲ್ಲಾ ಉದ್ಯೋಗ ಸಮಿತಿ: ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಮಟ್ಟದಲ್ಲಿ ಉದ್ಯೋಗ ಸಮಿತಿಗಳನ್ನು ರಚಿಸಲು ಅವರು ಸೂಚನೆ ನೀಡಿದರು.

ಈ ಸಮಿತಿಯು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ, ಎಸ್ಪಿ, ಕೈಗಾರಿಕೆ ಇಲಾಖೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರಬೇಕು. ಸಮಿತಿಯು ಜಿಲ್ಲೆಗಳಲ್ಲಿರುವ ಉದ್ಯಮಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ಸಂಗ್ರಹಿಸಿ ಮಾತುಕತೆ ನಡೆಸಬೇಕು ಎಂದರು.

ಕೌಶಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಅದನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

5 ಲಕ್ಷ ಮನೆ ನಿರ್ಮಾಣ: ರಾಜ್ಯದ ವಿವಿಧ ನಗರಗಳಲ್ಲಿ ಬಡವರಿಗಾಗಿ ಒಟ್ಟು 5 ಲಕ್ಷ ಮನೆಗಳ ನಿರ್ಮಾಣದ ಗುರಿ ಹಾಕಿಕೊಳ್ಳಬೇಕು. ಬೆಂಗಳೂರಿನಲ್ಲಿ 2 ಲಕ್ಷ, ಉಳಿದ ನಗರಗಳಲ್ಲಿ 3 ಲಕ್ಷ ಮನೆಗಳನ್ನು ನಿರ್ಮಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರ 2022ರ ವೇಳೆಗೆ ಎಲ್ಲರಿಗೂ ಮನೆ ಕಟ್ಟಿಕೊಡುವ ಗುರಿ ಹಾಕಿಕೊಂಡಿದೆ. ಇದರಡಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ರಾಜ್ಯದಲ್ಲಿ ಮನೆಗಳ ನಿರ್ಮಾಣಕ್ಕೆ ಭೂಮಿಯ ಅಗತ್ಯವಿದೆ. ಎಲ್ಲೆಲ್ಲಿ ಸರ್ಕಾರಿ ಭೂಮಿ ಲಭ್ಯವಿದೆ ಎಂಬುದನ್ನು ಪರಿಶೀಲಿಸಬೇಕು. ಸರ್ಕಾರಿ ಭೂಮಿ ಇಲ್ಲದ ಕಡೆಗಳಲ್ಲಿ ಖಾಸಗಿ ಜಮೀನು ಖರೀದಿಸಿ ಮನೆ ನಿರ್ಮಿಸಬೇಕು. ಈ ಸಂಬಂಧ ಎರಡು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದೂ ಅವರು ನಿರ್ದೇಶನ ನೀಡಿದರು.

ಮಳೆ ಹಾನಿಗೆ ಪರಿಹಾರ

ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿಯ ಪರಿಹಾರಕ್ಕೆ ಹೆಚ್ಚುವರಿಯಾಗಿ ₹ 22 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ನೈಸರ್ಗಿಕ ವಿಕೋಪ ನಿಧಿಯಡಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹186.54 ಕೋಟಿ ಅನುದಾನ ಲಭ್ಯವಿದೆ. ಸರ್ಕಾರದ ಮಾರ್ಗಸೂಚಿಯಂತೆ
₹ 9.08 ಕೋಟಿ ಪರಿಹಾರ ಪಾವತಿಸಲಾಗಿದೆ ಎಂದು ಹೇಳಿದರು.

ಮಳೆ, ಪ್ರವಾಹ ಮತ್ತು ಸಿಡಿಲಿನ ಹೊಡೆತಕ್ಕೆ ಸಿಲುಕಿ 105 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಿಗೆ ತಲಾ ₹ 5 ಲಕ್ಷ ಪರಿಹಾರ ಪಾವತಿಸಲಾಗಿದೆ. 2814 ಮನೆಗಳಿಗೆ ಹಾನಿಯಾಗಿದ್ದು ₹ 3.78 ಕೋಟಿ ಪರಿಹಾರ ಪಾವತಿಸಲಾಗಿದೆ ಎಂದು ಅವರು ತಿಳಿಸಿದರು.

ಡಿಡಿಪಿಐ ಅಮಾನತು: ಖಾಸಗಿ ಶಾಲೆಗಳ ಜತೆ ಶಾಮೀಲಾಗಿ ಆರ್‌ಟಿಇ(ಶಿಕ್ಷಣ ಹಕ್ಕು) ದುರುಪಯೋಗ ಮಾಡುತ್ತಿದ್ದ ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಐ ಅನ್ನು ಅಮಾನತು ಮಾಡಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಈ ಡಿಡಿಪಿಐ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಅಧಿಕಾರಿಗೆ ಎರಡು– ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ತಮ್ಮ ಚಾಳಿ ಮುಂದುವರಿಸಿದ್ದರು ಎಂದು ಅವರು ಹೇಳಿದರು.

‘ಬಡ ಮಕ್ಕಳ ಅನುಕೂಲಕ್ಕೆಂದು ಜಾರಿಗೆ ತಂದಿರುವ ಆರ್‌ಟಿಇಯ ದುರ್ಬಳಕೆ ನಡೆಯುತ್ತಿದೆ. ಇದರಲ್ಲಿ ಕೆಲವು ಡಿಡಿಪಿಐಗಳು ಮತ್ತು ಬಿಇಒಗಳು ಶಾಮೀಲು ಆಗಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ’ ಎಂದರು.

* ನಾವೆಲ್ಲ ಬಾಲ್ಯದಲ್ಲಿ ಸರ್ಕಾರಿ ಶಾಲೆಗಳಲ್ಲೇ ಓದಿದ್ದು. ಈಗ ಹಳ್ಳಿ ಹಳ್ಳಿಗೂ ಕಾನ್ವೆಂಟ್‌ಗಳು ಬಂದಿವೆ.

–ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.