ಬೆಂಗಳೂರು: ರಾಜ್ಯದಲ್ಲಿ ಹತ್ತು ಲಕ್ಷಕ್ಕಿಂತ ಅಧಿಕ ಮೌಲ್ಯದ ಕಟ್ಟಡಗಳಿಗೆ ಶೇ 1ರಷ್ಟು ಸುಂಕ ವಿಧಿಸುವ ಮೂಲಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಲ್ಯಾಣ ಮಂಡಳಿಯಲ್ಲಿ 1,350 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಆದರೆ, 2007ರಿಂದ ಆಗಸ್ಟ್ ಆರಂಭದವರೆಗೆ ಫಲಾನುಭವಿಗಳಿಗೆ ವಿತರಿಸಿದ ಸಹಾಯಧನದ ಮೊತ್ತ 6.10 ಕೋಟಿ ರೂಪಾಯಿಗಳು ಮಾತ್ರ.
ಕಾನೂನು ಸೇವೆಗಳ ಪ್ರಾಧಿಕಾರ, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ, ಲೋಕೋಪಯೋಗಿ ಇಲಾಖೆ, ಕಾರ್ಮಿಕ ಇಲಾಖೆ, ಬಿಬಿಎಂಪಿ, ಮೆಟ್ರೊ, ಬಿಬಿಎಂಪಿ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ `ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ-1996~ ಕುರಿತ ಕಾರ್ಯಾಗಾರದಲ್ಲಿ ಈ ಕಳವಳಕಾರಿ ಅಂಶ ಬಹಿರಂಗಗೊಂಡಿತು.
`ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಅಧಿಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ಇದ್ದಾರೆ. ಆದರೆ, ಈವರೆಗೆ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡವರು 2,07,501 ಕಾರ್ಮಿಕರು. ತಿಳಿವಳಿಕೆಯ ಕೊರತೆಯಿಂದ ಕಾರ್ಮಿಕರ ನೋಂದಣಿ ಸಮರ್ಪಕವಾಗಿಲ್ಲ. ಹಾಗಾಗಿ ಫಲಾನುಭವಿಗಳಿಗೆ ಇದರ ಲಾಭ ಸಿಕ್ಕಿಲ್ಲ~ ಎಂದು ಕಾರ್ಯಾಗಾರದಲ್ಲಿ ಕಳವಳ ವ್ಯಕ್ತವಾಯಿತು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, `ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ 2007ರ ಅಕ್ಟೋಬರ್‌ನಿಂದ ಜಾರಿಯಲ್ಲಿದೆ. ಕಾರ್ಮಿಕರ ಹಿತ ಕಾಪಾಡಲು ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪಿಸಲಾಗಿದೆ. ಈ ನಿಧಿಯಿಂದ 11 ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಕಾರ್ಮಿಕರು ಕಾಯ್ದೆಯಡಿ ಹಮ್ಮಿಕೊಂಡಿರುವ ಸೌಲಭ್ಯಗಳನ್ನು ಪಡೆಯಬೇಕು. ಕಟ್ಟಡ ಕಾರ್ಮಿಕರು ಅಸಂಘಟಿತರಾಗಿರುವುದರಿಂದ ಶೋಷಣೆ ಪ್ರಮಾಣ ಹೆಚ್ಚಿದೆ. ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ~ ಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಅಲ್ತಮಸ್ ಕಬೀರ್ ಕಾರ್ಯಾಗಾರ ಉದ್ಘಾಟಿಸಿ, `ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡು ಕಾಯ್ದೆಯ ಉದ್ದೇಶವನ್ನು ಸಫಲಗೊಳಿಸಬೇಕು. ನೋಂದಾಯಿಸಿಕೊಂಡ ಕಾರ್ಮಿಕರು ಬೇರೆ ರಾಜ್ಯಕ್ಕೆ ವಲಸೆ ಹೋದರೂ ಗುರುತಿನ ಚೀಟಿಯ ನೆರವಿನಿಂದ ಆಯಾ ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು~ ಎಂದರು.
`ಕಾರ್ಮಿಕರು ವಲಸೆ ಪ್ರವೃತ್ತಿಯಿಂದ ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿಲ್ಲ. ಬಡತನದ ಕಾರಣದಿಂದ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಕಾರ್ಮಿಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಸಂಚಾರಿ ವಾಹನಕ್ಕೆ ಚಾಲನೆ ನೀಡಿದೆ~ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ತಿಳಿಸಿದರು.
ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಕೆ.ಶ್ರೀಧರರಾವ್, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಡಿ.ವಿ.ಶೈಲೇಂದ್ರಕುಮಾರ್ ಉಪಸ್ಥಿತರಿದ್ದರು.
`ಆನ್‌ಲೈನ್ ನೋಂದಣಿ ಜಾರಿ~
`ಆನ್‌ಲೈನ್ ಮೂಲಕವೇ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಗಳ ಹೆಸರು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬಂದಿದೆ~ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು.
`ಕಾರ್ಮಿಕರಿಗೆ ಸುರಕ್ಷತೆಯ ಕೊರತೆ, ಕಾರ್ಮಿಕರು ಹಾಗೂ ಮಾಲೀಕರ ನಡುವಿನ ಸಂಘರ್ಷ, ಅಭದ್ರತೆ ಸಮಸ್ಯೆ ಇದೆ. ಅವರಲ್ಲಿ ಉಳಿತಾಯ ಪ್ರವೃತ್ತಿ ಕಡಿಮೆ.
ವಲಸೆ ಪ್ರವೃತ್ತಿಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿಲ್ಲ. ಮಕ್ಕಳನ್ನು ತಮ್ಮಂದಿಗೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಾಲಕಾರ್ಮಿಕರ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ. ಕಾರ್ಮಿಕರಿಗೆ ನೆರವಾಗಲು ಈ ಕಾಯ್ದೆ ಜಾರಿಗೆ ಬಂದಿದೆ. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕಾಯ್ದೆಯ ಉದ್ದೇಶ. ಆದರೆ, ಅಧಿಕ ಪ್ರಮಾಣದಲ್ಲಿ ಕಾರ್ಮಿಕರ ನೋಂದಣಿ ಆಗುತ್ತಿಲ್ಲ. ಹೀಗಾಗಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ~ ಎಂದು ಅವರು ತಿಳಿಸಿದರು.
ಚಿಕಿತ್ಸೆಗೆ 50 ಸಾವಿರ ಧನಸಹಾಯ
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಪ್ರಮುಖ ಕಾಯಿಲೆಗಳ ಚಿಕಿತ್ಸೆಗೆ 50 ಸಾವಿರ ರೂಪಾಯಿ ಧನಸಹಾಯ ನೀಡಲಾಗುತ್ತದೆ. ಹೃದ್ರೋಗ ಆಪರೇಷನ್, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಆಪರೇಷನ್, ಪಾರ್ಶ್ವವಾಯು ಚಿಕಿತ್ಸೆ, ಮೂಳೆ ಆಪರೇಷನ್, ಗರ್ಭಕೋಶದ ಆಪರೇಷನ್, ಆಸ್ತಮ ಚಿಕಿತ್ಸೆ, ಗರ್ಭಪಾತದ ಪ್ರಕರಣಗಳು, ಪಿತ್ತಕೋಶದ ತೊಂದರೆ ಚಿಕಿತ್ಸೆ, ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವುದು, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆಗೆ ಈ ಧನಸಹಾಯ ನೀಡಲಾಗುವುದು.
ಸರ್ಕಾರಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ 2,000 ರೂಪಾಯಿ ಧನಸಹಾಯ ನೀಡಲಾಗುತ್ತದೆ.
ನೋಂದಣಿ ಹೇಗೆ?
ಕಟ್ಟಡ ನಿರ್ಮಾಣದಲ್ಲಿ ಕೂಲಿ, ಗಾರೆ, ಬಡಗಿ, ಪೇಂಟಿಂಗ್, ಪ್ಲಂಬಿಂಗ್ ಮತ್ತಿತರ ಕೆಲಸ ಮಾಡುವ ಕಾರ್ಮಿಕರು ಆರಂಭಿಕ ನೋಂದಣಿ ಶುಲ್ಕ 25 ರೂಪಾಯಿ ಹಾಗೂ ತಿಂಗಳಿಗೆ 10 ರೂಪಾಯಿ ಪಾವತಿ ಮಾಡಿ ಫಲಾನುಭವಿಗಳಾಗಬಹುದು. ಅದಕ್ಕಾಗಿ ಬೆಂಗಳೂರು ಜಿಲ್ಲೆಯ ಕಾರ್ಮಿಕ ಅಧಿಕಾರಿಗಳ ಕಚೇರಿ, ಹಿರಿಯ ಕಾರ್ಮಿಕ/ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.