ADVERTISEMENT

ಸಾಹಿತಿ ಸುಜನಾ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 16 ಮೇ 2011, 16:35 IST
Last Updated 16 ಮೇ 2011, 16:35 IST

ಮೈಸೂರು: ‘ಸುಜನಾ’ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಸಾಹಿತಿ ಪ್ರೊ.ಎಸ್.ನಾರಾಯಣ ಶೆಟ್ಟಿ (80) ಅವರು ಅನಾರೋಗ್ಯದಿಂದ  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಏಪ್ರಿಲ್ 13, 1931ರಂದು ಜನಿಸಿದ್ದ ಇವರು ಮೈಸೂರಿನ ಯುವರಾಜ ಮತ್ತು ಮಹಾರಾಜ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1985-90 ರ ಅವಧಿಯಲ್ಲಿ ಯುವರಾಜ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು.

ಒಂದೂವರೆ ವರ್ಷ ಮೈಸೂರು ವಿ.ವಿ. ಕುಲ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ‘ಯುಗ ಸಂಧ್ಯಾ’ ಕಾವ್ಯಕ್ಕೆ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ‘ಭಾರತ ಕಥಾಮಂಜರಿ’, ‘ಕುಮಾರವ್ಯಾಸ’ (ವಿಮರ್ಶಾ ಕಿರುಹೊತ್ತಿಗೆ), ವಿಮರ್ಶೆ ಕೃತಿಗಳಾದ ‘ಹೃದಯ ಸಂವಾದ’, ‘ಪರಂಪರೆ’, ‘ಕುವೆಂಪು , ಪು.ತಿ.ನ.ಸಾಹಿತ್ಯದ ಹೊಳವುಗಳು’, ‘ಚಿಲಿಪಿಲಿ’ ಮಕ್ಕಳ ಕವನ ಸಂಕಲನ, ‘ಇಬ್ಬನಿ ಆರತಿ’ ವಚನ ಕವನ ಸಂಕಲನ, ‘ಕಣಗಳು’  ಏಜಾಕ್ಸ್ (ಅನುವಾದಿತ ನಾಟಕ), ‘ಬಾಲಕಾಂಡ ವಾಲ್ಮೀಕಿ ರಾಮಾಯಣ’ ಅನುವಾದಿತ ಕೃತಿಯನ್ನು ಇವರು ರಚಿಸಿದ್ದರು. ಪತ್ನಿ ಲಕ್ಷ್ಮಿ, ಪುತ್ರರಾದ ರಂಗನಾಥ್, ಶ್ರೀಧರ್, ಗುರುದೇವ್, ಪುತ್ರಿ ಸುಚಿಸ್ಮಿತ ಅವರನ್ನು ಅಗಲಿದಾರೆ. 

ಅಂತ್ಯಕ್ರಿಯೆಯು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಸೋಮವಾರ  ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.