ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಚುನಾವಣೆ ಕರಿನೆರಳು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಮಡಿಕೇರಿ: ಜನವರಿ 7ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಮತ್ತೊಂದು ವಿಘ್ನ ಎದುರಾಗಿದೆ. ಮಡಿಕೇರಿ ನಗರಸಭೆಗೆ ಡಿಸೆಂಬರ್‌ ತಿಂಗಳೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡುತ್ತಿರುವುದು ಕಸಾಪ ಪದಾಧಿಕಾರಿಗಳಲ್ಲಿ, ಸಾಹಿತ್ಯಾಸಕ್ತರಲ್ಲಿ ಆತಂಕ ಮೂಡಿಸಿದೆ.

ಆರು ತಿಂಗಳ ಹಿಂದೆ ನಗರಸಭೆಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ವಾರ್ಡ್‌ ಮೀಸಲಾತಿ­ಯನ್ನು ಪ್ರಕಟಿ­ಸಿತ್ತು. ಈ ಮೀಸಲಾತಿಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇ­ರಿದ್ದರು. ಇದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿದ್ದು, ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿದೆ ಎಂದು ಹೇಳಲಾಗುತ್ತಿದೆ.

‘ತಡೆಯಾಜ್ಞೆಯನ್ನು ನ್ಯಾಯಾಲಯ ತೆರವು­ಗೊಳಿಸಿದೆ ಎಂದು ನಾವು ಕೂಡ ಕೇಳಿದ್ದೇವೆ. ಆದರೆ, ಆದೇಶ ಇನ್ನೂ ನಮ್ಮ ಕೈಸೇರಿಲ್ಲ. ಹಾಗೊಂದು ವೇಳೆ ನ್ಯಾಯಾಲಯ ತಡೆಯಾಜ್ಞೆ ತೆರವು­ಗೊಳಿಸಿದ್ದು ನಿಜವೇ ಆದರೆ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾ­ಗುತ್ತದೆ’ ಎಂದು ಅಧಿಕಾರಿ­ಯೊಬ್ಬರು ತಿಳಿಸಿದರು.

ಇದಕ್ಕೆ ಪೂರಕ ಎನ್ನುವಂತೆ ರಾಜ್ಯ ಚುನಾವಣಾ ಆಯುಕ್ತ ಚಿಕ್ಕಮಠ ಅವರು ಮಡಿಕೇರಿಗೆ ಭೇಟಿ ಮಾಡಿ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ತಿಂಗಳು ನಡೆ­ಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅಧಿಕಾರಿಗಳು ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಸಾಹಿತ್ಯ ಸಮ್ಮೇಳನದ ಹಲವು ಸಮಿತಿಗಳಲ್ಲಿ ಅಧಿಕಾರಿಗಳು ಇದ್ದಾರೆ. ಚುನಾವಣೆ ಘೋಷಣೆ­ಯಾದರೆ ಅವರಿಗೆ ಸಮ್ಮೇಳನ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗು­ತ್ತದೆ ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳ ಪಾತ್ರ: ‘ಸಾಹಿತ್ಯ ಸಮ್ಮೇಳನ ಆಯೋಜನೆ­ಯಲ್ಲಿ ಅಧಿಕಾರಿಗಳ ಪಾತ್ರ ದೊಡ್ಡ­ದಾಗಿದೆ. ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡ­ದಿದ್ದರೆ ಒಂದು ಲಕ್ಷದಷ್ಟು ಜನರು ಸೇರುವ ಬೃಹತ್‌ ಮಟ್ಟದ ಸಮ್ಮೇಳನವನ್ನು ನಡೆಸುವುದು ಕಷ್ಟ­ವಾಗುತ್ತದೆ. ಈಗ ಚುನಾವಣೆ ದಿನಾಂಕ ಘೋಷಿಸಿ­ದರೆ ಚುನಾವಣಾ ನೀತಿ ಸಂಹಿತೆ ಜಾರಿಯಾಗು­ತ್ತದೆ. ಆನಂತರ ಅಧಿಕಾರಿಗಳು ಸಮ್ಮೇಳನದ ಕೆಲಸದಲ್ಲಿ ಭಾಗಿಯಾಗಲು ಹಿಂದೇಟು ಹಾಕು­ತ್ತಾರೆ’ ಎಂದು ಕಸಾಪ ಪದಾಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಹಾಗೂ ಸಂಚಾಲಕರಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯ­ನಿರ್ವಹಿಸುತ್ತಿದ್ದಾರೆ. ಸಮ್ಮೇಳನ ನಡೆಯುವ ಮಡಿಕೇರಿಯ ನೈರ್ಮಲ್ಯ ಕಾಪಾಡುವ ಜವಾಬ್ದಾರಿಯನ್ನು ನಗರಸಭೆಯ ಆಯುಕ್ತರು ಹೊತ್ತು­ಕೊಂಡಿದ್ದಾರೆ. ಸಂಚಾರ ಕಾನೂನು ಮತ್ತು ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷರಾಗಿ ಡಿವೈಎಸ್ಪಿ ನೇಮಕ­ಗೊಂಡಿದ್ದಾರೆ.

ಮುಖ್ಯವಾಗಿ ಸಮ್ಮೇಳನದ ವಿವಿಧ ಕಾರ್ಯಗಳಿಗೆ ಟೆಂಡರ್‌ ಕರೆಯುವ ಟೆಂಡರ್‌ ಸಮಿತಿಯ ಜವಾಬ್ದಾರಿಯು ಜಿಲ್ಲಾ ಯೋಜನಾ­ಧಿಕಾರಿ ಹಾಗೂ ಸಂಚಾಲಕ­ರಾದ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಸೇರಿದೆ.ಚುನಾವಣಾ ನೀತಿ ಸಂಹಿತೆ ಜಾರಿ­ಯಾದರೆ ಈ ಅಧಿಕಾರಿಗಳಿಗೆ ಸಮ್ಮೇಳನದ ಕೆಲಸದಲ್ಲಿ ಭಾಗಿಯಾ­ಗಲು ಅಡ್ಡಿಯಾಗಬಹುದು.

ಟೆಂಡರ್‌ ಆಹ್ವಾನ ಕಷ್ಟ:ಸಮ್ಮೇಳನ ಆಯೋಜಿಸಲು ಹಣದ ಕೊರತೆಯಿಂದಾಗಿ ಪರದಾಡುತ್ತಿರುವ ಸಮಿತಿಗೆ  ವಿವಿಧ ಕಾರ್ಯಗಳಿಗೆ ಟೆಂಡರ್‌ ಕರೆಯಲು ಸಾಧ್ಯವಾಗಿಲ್ಲ (ಆಹಾರ ಪೂರೈಕೆಗೆ ಮಾತ್ರ ಟೆಂಡರ್‌ ಕರೆಯಲಾಗಿದೆ). ಸಮ್ಮೇಳನಕ್ಕೆ  ಕೇವಲ 36 ದಿನಗಳು ಬಾಕಿ ಉಳಿದಿದ್ದು, ಇದುವರೆಗೆ ವೇದಿಕೆ ನಿರ್ಮಾಣ, ವಸತಿ ಸೌಕರ್ಯ, ಸಾರಿಗೆ ಸೌಕರ್ಯ, ಸ್ಮರಣ ಸಂಚಿಕೆ ಮುದ್ರಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಟೆಂಡರ್‌ ಕರೆಯಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಚುನಾವಣೆ ಘೋಷಣೆ­ಯಾದರೆ, ಟೆಂಡರ್‌ ಕರೆಯಲು ಸಾಧ್ಯವಾಗುವುದಿಲ್ಲ. ಎಲ್ಲ ಕೆಲಸಗಳು ಅರ್ಧಕ್ಕೆ ನಿಂತುಹೋಗಿ ಬಿಡುತ್ತದೆ ಎನ್ನುವ ಆತಂಕದಲ್ಲಿ ಕಸಾಪ ಪದಾಧಿಕಾರಿಗಳಿದ್ದಾರೆ.

‘ಸಿ.ಎಂ ಗಮನಕ್ಕೆ ತರುತ್ತೇನೆ’
ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಹಿತ್ಯ ಸಮ್ಮೇಳನ ಹೊಸ್ತಿಲಲ್ಲಿ ಬಂದು ನಿಂತಿದೆ. ಇಂತಹ ಸಮಯದಲ್ಲಿ ಚುನಾವಣೆ ಘೋಷಣೆ­ಯಾದರೆ ಸಮ್ಮೇಳನ ನಡೆಸುವುದು ಬಹಳ ಕಷ್ಟವಾಗುತ್ತದೆ. ನಮ್ಮ ಈ ಪರಿಸ್ಥಿತಿಯನ್ನು ಮುಖ್ಯ­ಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತು­ವಾರಿ ಸಚಿವ ಡಾ.ಮಹದೇವಪ್ಪ ಅವರ ಗಮನಕ್ಕೆ ತರುತ್ತೇನೆ.
–ಟಿ.ಪಿ. ರಮೇಶ್‌, ಜಿಲ್ಲಾ ಕಸಾಪ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT