ADVERTISEMENT

ಸಿಎಂ ಬಳಿಗೆ ಶೀಘ್ರವೇ ಸಚಿವರು, ಸಂಸದರ ನಿಯೋಗ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು:  ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಈ ಜಿಲ್ಲೆಗಳ ಶಾಸಕರು, ಸಚಿವರು ಹಾಗೂ ಸಂಸದರ ನಿಯೋಗ ಜ. 30ರೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಯೋಜನೆ ಅನುಷ್ಠಾನಕ್ಕೆ ಸುಮಾರು 15ರಿಂದ 16 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರದಿಂದಲೂ ಹಣ ಒದಗಿಸಿಕೊಡುವುದಾಗಿ ಸಚಿವರಾದ ಎಂ. ವೀರಪ್ಪ ಮೊಯಿಲಿ ಹಾಗೂ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿನ ಬಜೆಟ್‌ನಲ್ಲಿಯೇ ಪ್ರಸ್ತಾವ ಸೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು. ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಎತ್ತಿನಹೊಳೆಯಿಂದ 25ರಿಂದ 40 ಟಿಎಂಸಿ ನೀರನ್ನು ಬಳಸಿಕೊಂಡು ಈ ಐದು ಜಿಲ್ಲೆಗಳ ಕೆರೆಗಳಿಗೆ ಹರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂಬುದು ಈ ಭಾಗದ ಜನರ ಬೇಡಿಕೆ. ಇದಕ್ಕೆ ಈ ಭಾಗದ ಸುಮಾರು 25 ತಾಲ್ಲೂಕುಗಳ ಶಾಸಕರ ಬೆಂಬಲವಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ನೀರು ಹರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 1000ರಿಂದ 1200 ಅಡಿಗಳಷ್ಟು ಆಳ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಶೇ 35ರಷ್ಟು ಕೊಳವೆಬಾವಿಗಳು ವಿಫಲವಾಗುತ್ತಿವೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ಜನ ಫ್ಲೋರೈಡ್‌ಯುಕ್ತ ಹಾಗೂ ಕಲುಷಿತ ನೀರು ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಸುಧಾರಣೆಗೆ ಎತ್ತಿನಹೊಳೆ ಯೋಜನೆ ಜಾರಿ ಅನಿವಾರ್ಯವಾಗಿದೆ ಎಂದು ನುಡಿದರು.

ರೂ 50 ಲಕ್ಷ ಬಿಡುಗಡೆ: ಈ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯ 107 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಅಂದಾಜಿಸಲಾಗಿದೆ. ಈ ಉದ್ದೇಶಕ್ಕಾಗಿ 4.31 ಕೋಟಿ ರೂಪಾಯಿ ನೆರವು ನೀಡುವಂತೆ ಸರ್ಕಾರವನ್ನು ಕೋರಲಾಗಿದ್ದು, ಈ ಪೈಕಿ 50 ಲಕ್ಷ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅಂತರ್ಜಲ ಮಟ್ಟ ಕುಸಿದ 27 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುವುದು ಎಂದರು.

2010-11ನೇ ಸಾಲಿನಲ್ಲಿ ನಿಯಮ ಮೀರಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದ ಗುತ್ತಿಗೆದಾರರಿಗೆ 78 ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕಿದೆ. ಕೆಲವು ಗುತ್ತಿಗೆದಾರರು ಟೆಂಡರ್‌ನಲ್ಲಿ ನಮೂದಿಸಿದಕ್ಕಿಂತ ಬಿಲ್‌ನಲ್ಲಿ ಹೆಚ್ಚಿನ ದರ ನಮೂದಿಸಿದ್ದಾರೆ. ಅಲ್ಲದೆ, ದಿನಕ್ಕೆ 6-10 ಟ್ಯಾಂಕರ್ ಪೂರೈಸಿದ್ದರೆ 15ರಿಂದ 20 ಟ್ಯಾಂಕರ್ ನೀರು ಪೂರೈಸಿರುವುದಾಗಿ ನಕಲಿ ಬಿಲ್ ನೀಡಿದ್ದಾರೆ. ಈ ನ್ಯೂನತೆಗಳ ಲೆಕ್ಕಪತ್ರ ಸರಿಪಡಿಸಿಕೊಡುವಂತೆ ಜಿ.ಪಂ.ಗೆ ಸೂಚಿಸಲಾಗಿದೆ. ಆನಂತರ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಹಣ ಬಿಡುಗಡೆಗೆ ಕ್ರಮ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ತಡೆಹಿಡಿದಿದ್ದ ವಿಧವಾ, ಸಂಧ್ಯಾ ಸುರಕ್ಷಾ, ವೃದ್ದಾಪ್ಯ ಹಾಗೂ ಅಂಗವಿಕಲರ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಪರಿಶೀಲನೆ ಬಳಿಕ 14,692 ಮಂದಿಯ ಹೆಸರುಗಳನ್ನು ತೆಗೆಯಲಾಗಿದೆ. ಅಂತಿಮವಾಗಿ 78,754 ಫಲಾನುಭವಿಗಳು ಈ ಪ್ರಯೋಜನ ಪಡೆಯಲಿದ್ದಾರೆ ಎಂದರು.

`ಭಾಗ್ಯಲಕ್ಷ್ಮಿ~ ಫಲಾನುಭವಿ ತಾಯಂದಿರಿಗೆ 20 ಸಾವಿರ ಬಾಂಡ್‌ಗಳನ್ನು ವಿತರಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಕಡ್ಡಾಯಗೊಳಿಸಿದ ನಂತರ 4,266 ಬಾಂಡ್‌ಗಳ ವಿತರಣೆ ಬಾಕಿಯಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 150 ಶಿಕ್ಷಕರ ಕೊರತೆಯಿದೆ. ಎರಡು ವರ್ಷದಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಶಿಕ್ಷಕರ ಕೊರತೆಯಿದೆ. ಜಿಲ್ಲೆಯಿಂದ ಬಿಡುಗಡೆ ಮಾಡಿದ ಶಿಕ್ಷಕರ ಜಾಗಕ್ಕೆ ಬೇರೆಯವರನ್ನು ನಿಯೋಜಿಸದಿರುವುದು ಈ ಸಮಸ್ಯೆಗೆ ಕಾರಣ ಎಂದು ಹೇಳಿದರು.

2011-12ನೇ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಗೆ ಯೋಜನೆ ಬಾಬ್ತಿನಲ್ಲಿ ಬಿಡುಗಡೆಯಾದ 50.42 ಕೋಟಿ ರೂಪಾಯಿ ಪೈಕಿ 40.21 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಮೂಲಕ ಶೇ 80.17 ಸಾಧನೆ ಮಾಡಲಾಗಿದೆ. ಕೇಂದ್ರದ ಅನುದಾನ ಬಳಕೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಐದನೇ ಸ್ಥಾನದಲ್ಲಿದ್ದು, ರಾಜ್ಯ ಅನುದಾನ ಸದ್ಬಳಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ. ರಾಜು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.