ಮೈಸೂರು: ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೂ ವಿದಾಯ ಹೇಳುತ್ತಿದ್ದಾರೆ.
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ ಪ್ರಸಾದ್, ನಂಜನಗೂಡು ವಿಧಾನಸಭಾ ಕ್ಷೇತ್ರವನ್ನೂ ಎರಡು ಸಲ ಪ್ರತಿನಿಧಿಸಿದ್ದಾರೆ. ವಾಜಪೇಯಿ ಅವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರನ್ನು ಸಂಪುಟ ಪುನರ್ ರಚನೆ ಸಮಯದಲ್ಲಿ ಕೈಬಿಡಲಾಯಿತು. ಇದರಿಂದ ಸಿಟ್ಟಿಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಸಾದ್ ನಿರ್ಧರಿಸಿದ್ದಾರೆ.
ಸಚಿವ ಸ್ಥಾನದಿಂದ ಕೈಬಿಡಲು ಏನು ಕಾರಣ, ಸಿದ್ದರಾಮಯ್ಯ ಜತೆಗಿನ ಸಂಬಂಧ ಹಾಳಾಗಲು ಯಾರು ಕಾರಣಕರ್ತರು, ಮುಂದಿನ ನಡೆ ಏನು ಎಂಬ ಬಗ್ಗೆ ಅವರು ಮನ ಬಿಚ್ಚಿ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.
*ಸಚಿವ ಸ್ಥಾನದಿಂದ ಕೈಬಿಡಲು ಏನು ಕಾರಣ?
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟುವ ಸಲುವಾಗಿ ನನ್ನ ವಿರುದ್ಧ ಪಿತೂರಿ ಮಾಡಿ, ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ಪಕ್ಷದೊಳಗೆ ಮತ್ತು ಹೊರಗೆ ನನ್ನ ಬಗ್ಗೆ ಗೌರವವಿದೆ. ಇದರಿಂದ ಅವರ ಸಾಮ್ರಾಜ್ಯ ವಿಸ್ತರಣೆಗೆ ಅಡ್ಡಿಯಾಗಬಹುದು ಎಂದು ಭಾವಿಸಿ ರಾಜಕೀಯವಾಗಿ ನನ್ನನ್ನು ಮೂಲೆಗುಂಪು ಮಾಡಿದ್ದಾರೆ.
ಮೊದಲಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ವಹಿಸುವ ಸಮಯದಲ್ಲೇ ಸ್ವಲ್ಪ ಮನಸ್ತಾಪ ಉಂಟಾಯಿತು. ಚಾಮರಾಜನಗರ ಉಸ್ತುವಾರಿ ಕೊಡಲು ಉದ್ದೇಶಿಸಲಾಗಿತ್ತು. ಬೇಡವೆಂದ ಮೇಲೆ ಮೈಸೂರು ಉಸ್ತುವಾರಿ ನೀಡಲಾಯಿತು. ಅಲ್ಲಿಂದಲೇ ಸಮಸ್ಯೆ ಆರಂಭವಾಯಿತು.
*ಮಹತ್ವದ ಕಂದಾಯ ಇಲಾಖೆ ವಹಿಸಿಕೊಂಡ ನೀವು ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ ಎಂಬ ಆರೋಪವಿದೆಯಲ್ಲಾ?
ನಾನು ಸಮರ್ಥವಾಗಿ ಕೆಲಸ ಮಾಡದಿದ್ದರೆ ಕೇಳಬಹುದಿತ್ತು. ನಾನು ಸಮರ್ಥವಾಗಿ ಕೆಲಸ ಮಾಡಿದ್ದೇನೆ. 40 ವರ್ಷಗಳಲ್ಲಿ ಯಾರೂ ಕೊಡದಷ್ಟು ಕಾರ್ಯಕ್ರಮ ನೀಡಿದ್ದೇನೆ. ಸಚಿವ ಸ್ಥಾನದಿಂದ ತೆಗೆದಿದ್ದಕ್ಕೆ ಅವರಿಗೆ ಬೇರೆ ಕಾರಣ ಕೊಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕುಂಟು ನೆಪ ಹೇಳುತ್ತಿದ್ದಾರೆ.
ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಮೊದಲ ಮೂರು ವರ್ಷ ಒಮ್ಮೆಯೂ ಅಪಸ್ವರ ತೆಗೆಯದೆ, ಮನಸ್ಸಿನಲ್ಲೇ ದ್ವೇಷ, ಅಸೂಯೆ ತುಂಬಿಕೊಂಡು ಹೈಕಮಾಂಡ್‌ಗೆ ಚಾಡಿ ಹೇಳಿದರು. ನಾನು ಅಸಮರ್ಥನಾಗಿದ್ದರಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಹಾಗಾದರೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್ ಅವರು ಸಮರ್ಥ ಸಚಿವರೆ? ಈಗಿರುವುದು ದಕ್ಷ ಸಂಪುಟವೇ?
*ಮುಖ್ಯಮಂತ್ರಿಗೆ ನಿಮ್ಮ ಮೇಲೆ ಏಕೆ ದ್ವೇಷ?
ಇನ್ನುಳಿದ ಒಂದೂವರೆ ವರ್ಷ ಯಾವ ಅಡೆತಡೆಯೂ ಇಲ್ಲದಂತೆ ಆಡಳಿತ ನಡೆಸಬೇಕಿತ್ತು. ಅದಕ್ಕಾಗಿ ಎಲ್ಲರ ನೈತಿಕತೆ ಹಾಳು ಮಾಡಿದ್ದಾರೆ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ನನ್ನ ಭಯ ಇತ್ತು. ಖರ್ಗೆ ತಲೆ ಎತ್ತದಂತೆ ಮಾಡಿದರು. ಡಾ.ಜಿ.ಪರಮೇಶ್ವರ್ ಬಾಯಿ ಮುಚ್ಚಿಸಿದರು. ದಲಿತರು, ಅಹಿಂದ ಮುಂದಿಟ್ಟುಕೊಂಡು ರಾಜಕಾರಣ ಮಾಡಿದರು. ದಲಿತ ಸಮುದಾಯದವನ್ನೇ ಮುಗಿಸಿದರು.
ವರುಣಾ ಕ್ಷೇತ್ರದ ಕುಪ್ಪೇಗಾಲದಲ್ಲಿ ದಲಿತರು ತಯಾರಿಸಿದ ಬಿಸಿ ಊಟವನ್ನು ಸವರ್ಣೀಯರ ಮಕ್ಕಳು ಸೇವಿಸದಂತೆ ತಡೆಯಲಾಗಿತ್ತು. ವಿವಾದ ಬಗೆಹರಿಸಿ, ಸಮಾಧಾನಪಡಿಸಲು ಗ್ರಾಮಕ್ಕೆ ಬರುವಂತೆ ಆಹ್ವಾನಿಸಿದಾಗ ನಿರಾಕರಿಸಿದರು. ಆಗಲೇ ಗೊತ್ತಾಯಿತು ಈತ ದಲಿತ ವಿರೋಧಿ ಎಂಬ ವಿಚಾರ.
*ಇಬ್ಬರೂ ಒಳ್ಳೆಯ ಗೆಳೆಯರು. ಮನಸ್ತಾಪ ಏಕೆ?
ಗೆಳೆಯರಾಗಿದ್ದುಕೊಂಡೇ, ಆತ್ಮೀಯವಾಗಿ ಮಾತನಾಡುತ್ತಲೇ ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದರು. ನನ್ನಿಂದ ಎಲ್ಲ ಲಾಭ ಪಡೆದುಕೊಂಡ ಬಳಿಕವೂ ಪಿತೂರಿ ಮಾಡಿದರು. ಯಾರನ್ನು ನಂಬುವುದು.
*ನೀವು ಉತ್ತಮವಾಗಿ ಕೆಲಸ ಮಾಡಲು ನಿಮ್ಮ ಆರೋಗ್ಯ ಅವಕಾಶ ಕೊಡಲಿಲ್ಲ ಎಂದು ಹೇಳಲಾಗುತ್ತಿದೆಯಲ್ಲಾ?
ಆರೋಗ್ಯ ಸಮಸ್ಯೆ ಇದೆ ಎಂದು ಮೂರು ವರ್ಷದಿಂದ ಹೇಳಲಿಲ್ಲ. ಸಚಿವ ಸ್ಥಾನದಿಂದ ತೆಗೆಯಬೇಕು ಎಂದಾಕ್ಷಣ ಅವರಿಗೆ ನನಗೆ ಆರೋಗ್ಯ ಸಮಸ್ಯೆಯಿದೆ ಎಂದು ನೆನಪಾಯಿತು. ಹಾಗಿದ್ದರೆ ಮೊದಲೇ ಈ ಬಗ್ಗೆ ಚರ್ಚಿಸಬಹುದಿತ್ತು. ಸಚಿವರಾದ ಕಾಗೋಡು ತಿಮ್ಮಪ್ಪ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲೇ ಕುಸಿದು ಬಿದ್ದರು. ಯಾರಿಗೆ ಆರೋಗ್ಯ ಕೈಕೊಡುವುದಿಲ್ಲ. ಸಿದ್ದರಾಮಯ್ಯನವರ ಆರೋಗ್ಯ ಏನು ಚೆನ್ನಾಗಿದೆಯೆ?
*ಜಿಲ್ಲೆಯ ರಾಜಕಾರಣ– ಸಿದ್ದರಾಮಯ್ಯನವರ ನಿಕಟವರ್ತಿಗಳು ಸಂಬಂಧ ಹಾಳಾಗಲು ಎಷ್ಟು ಕಾರಣಕರ್ತರು?
ಈ ಬಗ್ಗೆ ಗಂಭೀರವಾಗಿ ಯೋಚಿಸಿದ್ದೇನೆ. ಸಿದ್ದರಾಮಯ್ಯನವರ ‘ಕಿಚನ್ ಕ್ಯಾಬಿನೇಟ್’ನಲ್ಲಿ ನಾನು ಇರಲಿಲ್ಲ. ಸುತ್ತಮುತ್ತ ಇದ್ದವರು ಏನು ಚಾಡಿ ಹೇಳಿದರು ಎಂದು ಗೊತ್ತಿದೆ. ಸಚಿವ ಸ್ಥಾನದಿಂದ ಕೈಬಿಡಲು ಈ ಚಾಡಿ ಮಾತುಗಳೂ ಕೆಲಸ ಮಾಡಿರಬಹುದು.
*ನಿಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪದ ಬಗ್ಗೆ ಮಾತನಾಡುತ್ತಿದ್ದೀರಿ? ವರ್ಗಾವಣೆ, ಇತರೆ ವಿಚಾರಗಳಲ್ಲಿ ಎಷ್ಟರ ಮಟ್ಟಿಗೆ ಹಸ್ತಕ್ಷೇಪವಿತ್ತು?
ಕಂದಾಯ ಇಲಾಖೆಯಲ್ಲಿ ಅವರ ಹಸ್ತಕ್ಷೇಪಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಆದರೆ, ವರ್ಗಾವಣೆ ವಿಚಾರದಲ್ಲಿ ಚರ್ಚಿಸದೆ ನಿರ್ಧಾರ ಕೈಗೊಳ್ಳುತ್ತಿದ್ದರು. ಕೆಲವೊಂದು ಸಂದರ್ಭದಲ್ಲಿ ಅವರ ನಡೆಯನ್ನು ತೀವ್ರವಾಗಿ ಪ್ರತಿಭಟಿಸಿದ್ದೆ.
₹ 86 ಲಕ್ಷದ ವಾಚ್ ಕಟ್ಟಿಕೊಂಡು ಬಡವರ ಬಗ್ಗೆ ಮಾತನಾಡುತ್ತಾರೆ. ಸಮಾಜವಾದಿ ಎಂದುಕೊಂಡವರಿಗೆ ಇದೆಲ್ಲವೂ ಗೊತ್ತಿಲ್ಲವೆ. ಬೆಂಗಳೂರು ಅರ್ಕಾವತಿ ಬಡಾವಣೆ ಹಗರಣ ಹೊರಕ್ಕೆ ಬಂದಿದ್ದರೆ ಮುಖ್ಯಮಂತ್ರಿ ಬಣ್ಣ ಬಯಲಾಗುತಿತ್ತು. ರಾಜ್ಯ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಅದು ಗೊತ್ತಾಗುತ್ತಿಲ್ಲ. ಮುಂದೆ ಎಲ್ಲವೂ ಹೊರಕ್ಕೆ ಬರಲಿದೆ.
*ಸಚಿವ ಸ್ಥಾನ ಕಳೆದುಕೊಂಡ ಮೇಲೆ ಪಕ್ಷ ಬಿಡುತ್ತಿದ್ದೀರಿ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಇದ್ದಿರಾ?
ಇದು ಒಂದು ರೀತಿ ಮುಜುಗರದ ಪ್ರಶ್ನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ಪಕ್ಷದಲ್ಲಿ ಹೇಗಿರಲಿ. ಪಕ್ಷದಲ್ಲಿ ಇದ್ದುಕೊಂಡು ಸಿದ್ದರಾಮಯ್ಯ ವಿರುದ್ಧ ಮಾತನಾಡುವುದು ಕಷ್ಟಕರ. ಅನಿವಾರ್ಯವಾಗಿ, ನೋವಿನಿಂದ ಪಕ್ಷ ಬಿಡುತ್ತಿದ್ದೇನೆ.
* ಪಕ್ಷದಲ್ಲಿ ಇದ್ದುಕೊಂಡೇ ಹೋರಾಟ ಮಾಡಬಹುದಿತ್ತು? ಸಿದ್ದರಾಮಯ್ಯ ಜತೆಗೆ ತೀವ್ರ ಭಿನ್ನಮತ ಇದ್ದವರೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ?
ನನಗೂ ಬೇರೆಯವರಿಗೂ ತುಂಬಾ ವ್ಯತ್ಯಾಸವಿದೆ. ಹೋಲಿಕೆ ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿರುವುದರಿಂದ ಯಾವ ಹೋರಾಟ ನಡೆಸಿದರೂ ಪ್ರಯೋಜನವಿಲ್ಲ. ಹೊರಗೆ ಇದ್ದುಕೊಂಡೇ ಹೋರಾಟ ಮಾಡಬೇಕಿದೆ.
*ಸಚಿವ ಸ್ಥಾನದಿಂದ ಕೈಬಿಟ್ಟಿದ್ದು, ಪಕ್ಷ ತೊರೆಯುತ್ತಿರುವ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೀರಾ?
ಹೈಕಮಾಂಡ್ ಮುಂದೆ ಎಲ್ಲವೂ ಚರ್ಚೆ ನಡೆದು, ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಸೋನಿಯಾ ಗಾಂಧಿ ಭೇಟಿಯಾಗುವಂತೆ ಹೇಳಿ ಕಳುಹಿಸಿದರು. ಹೋಗಲಿಲ್ಲ. ಆಗಿರುವ ತಪ್ಪನ್ನು ಈಗ ಹೇಗೆ ಸರಿಪಡಿಸುತ್ತಾರೆ. ಚರ್ಚಿಸಿ ಪ್ರಯೋಜನವಿಲ್ಲ. ಹೈಕಮಾಂಡ್ ಸಹ ಅಸಹಾಯಕವಾಗಿದ್ದು, ಏನೂ ಮಾಡದ ಸ್ಥಿತಿಯಲ್ಲಿದೆ.
ಮಲ್ಲಿಕಾರ್ಜುನ ಖರ್ಗೆ ನನ್ನನ್ನು ಕೈಬಿಡದಂತೆ ತಡೆಯುವ ಅವಕಾಶವಿತ್ತು. ಮಗನನ್ನು ಸಚಿವರನ್ನಾಗಿ ಮಾಡಿದ್ದರಿಂದ ಬಾಯಿ ಬಿಡಲಿಲ್ಲ. ಈಗ ಯಾವ ಮುಖ ಹೊತ್ತು ಮಾತನಾಡುತ್ತಾರೆ.
*ನೀವು ರಾಜೀವ್ ಗಾಂಧಿ ಅವರಿಗೆ ಆತ್ಮೀಯರಾಗಿದ್ದವರು. ಆಗಿನ ಕಾಂಗ್ರೆಸ್‌ಗೂ, ಈಗಿನ ಸೋನಿಯಾ, ರಾಹುಲ್ ಕಾಂಗ್ರೆಸ್‌ಗೂ ಏನು ವ್ಯತ್ಯಾಸ?
ರಾಜೀವ್‌ಗೂ ಇವರಿಗೂ ಹೋಲಿಕೆ ಸಾಧ್ಯವಿಲ್ಲ. ತಾಯಿ ಇಂದಿರಾ ಗಾಂಧಿ ಜತೆ ಇದ್ದುದ್ದರಿಂದ ಅವರಿಗೆ ಅನುಭವವಾಗಿತ್ತು. ಒಳ್ಳೆ ಸಲಹೆಗಾರರಿದ್ದರು. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಬುದ್ಧಿವಂತರು ಎಂದು ಗೊತ್ತಾದರೆ ಜವಾಬ್ದಾರಿ ಕೊಡುತ್ತಿದ್ದರು. ನನ್ನನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದರು. ಆ ಸಮಯದಲ್ಲಿ ನಾನು ಹೇಳಿದವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಟ್ಟರು. ಎ.ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ ಅವರಿಗೆಲ್ಲ ಅವಕಾಶ ಕೊಡಿಸಿದೆ. ಆಗಿನ ಕಾಂಗ್ರೆಸ್‌ಗೂ, ಈಗಿನ ಕಾಂಗ್ರೆಸ್‌ಗೂ ಹೋಲಿಕೆ ಎಲ್ಲಿದೆ.
*ಮುಂದಿನ ನಿರ್ಧಾರ?
ಯೋಚನೆ ಮಾಡಿಲ್ಲ. ಹಿರಿಯ ರಾಜಕಾರಣಿಯಾಗಿ ಐದು ಹತ್ತು ನಿಮಿಷದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಹತ್ತಾರು ಬಾರಿ ಯೋಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಪಕ್ಷಾತೀತ ನಾಯಕರ ಜತೆಗೆ ಚರ್ಚಿಸಬೇಕಿದೆ.
*ಮನಸ್ಸಿನಲ್ಲಿ ಏನಿದೆ?
ನನ್ನ ಮನಸ್ಸಿನಲ್ಲಿ ಒಂದು ವಿಚಾರ ಇದೆ. ಅದನ್ನು ಈಗ ಹೇಳುವುದಿಲ್ಲ. ಮುಂದೆ ‘ಕಲೆಕ್ಟಿವ್’ ನಿರ್ಧಾರ ಆಗುತ್ತದೆ. ಪಕ್ಷ ಬಿಡುವ ನಿರ್ಧಾರವಾಗಿದೆ. ಮುಂದೆ ಎಚ್ಚರಿಕೆ ಹೆಜ್ಜೆ ಇಡಬೇಕಿದೆ.
ಬಿಜೆಪಿ ಬಲಿಷ್ಠ ಪಕ್ಷವಾಗಿದೆ. ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಾಮರ್ಥ್ಯವಿದೆ. ಜೆಡಿಎಸ್ ಸಹ ಪ್ರಾದೇಶಿಕವಾಗಿ ಬಲಿಷ್ಠವಾಗಿದೆ. ಎರಡೂ ಪಕ್ಷಕ್ಕೆ ನಾನು ಅನಿವಾರ್ಯವಲ್ಲ. ಯಾವ ಪಕ್ಷಕ್ಕೆ ಹೋದರೂ ಆ ಪಕ್ಷಕ್ಕೆ ಹೆಚ್ಚು ಶಕ್ತಿ ಬರುತ್ತದೆ ಎಂಬ ಭ್ರಮೆಯಲ್ಲೂ ಇಲ್ಲ.
*ಮುಂದೆ ರಾಜಕಾರಣದಲ್ಲಿ ಏನಾಗ ಬಯಸುತ್ತೀರಿ?
ಪವರ್ ಪಾಲಿಟಿಕ್ಸ್ ನೋಡಿದ್ದೇನೆ. ಚುನಾವಣೆಗೆ ನಿಲ್ಲಲ್ಲ ಎಂದು ಹಿಂದೆ ಹೇಳಿದ್ದೆ. ಈಗ ರಾಜಕಾರಣದಲ್ಲಿ ಉಳಿಯಬೇಕಿದೆ. ಅದಕ್ಕಾಗಿಯೇ ಈ ಹೋರಾಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.